ಖಟಕಚಿಂಚೋಳಿ: ಮಠದ ಸುತ್ತಲೂ ಸುಂದರ ಪರಿಸರ. ಶಾಂತತೆಗೆ ಸಂಗೀತದ ನಾದ ನೀಡುವ ಹಕ್ಕಿಗಳ ಕಲರವ. ಓಂ ನಮಃ ಶಿವಾಯ ಮಂತ್ರ ಪಠಣ. ಮನಸ್ಸಿನ ಭಾರ ಕಳೆದು, ಇಷ್ಟಾರ್ಥ ಸಿದ್ಧಿಸಿಕೊಳ್ಳಲು ಬರುವ ಭಕ್ತರು...
–ಇದು ಸರ್ವಧರ್ಮದ ಜನರ ಪ್ರೀತಿಗೆ ಪಾತ್ರರಾಗಿದ್ದ ಹಾಗೂ ಪವಾಡ ಪುರುಷರೆಂದೇ ಪ್ರಸಿದ್ಧರಾಗಿದ್ದ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದ ಸಿದ್ಧಾರೂಢರ ಮಠದ ಚಿತ್ರಣ. ಚಳಕಾಪುರ ಸಿದ್ಧಾರೂಢ ಸ್ವಾಮೀಜಿಯವರ ಜನ್ಮಸ್ಥಳವೂ ಹೌದು. ಶ್ರೀಮಠವು ಭಕ್ತರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ.
ಚಳಕಾಪುರದ ಗುರುಶಾಂತಪ್ಪ ಹಾಗೂ ದೇವಮಲ್ಲಮ್ಮ ದಂಪತಿಯ ಮೂರನೇ ಮಗನಾಗಿ ಸಿದ್ಧಾರೂಢರು ಜನಿಸಿದರು. ಅವರು ಚಿಕ್ಕವರಿದ್ದಾಗಿನಿಂದಲೇ ಹಲವು ಪವಾಡಗಳನ್ನು ಮಾಡುತ್ತಿದ್ದರು. ಕಷ್ಟವೆಂದು ಬಂದವರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು ಎಂದು ಪುರಾಣ ಕಥೆಗಳು ಹೇಳುತ್ತವೆ.
ಸಿದ್ಧಾರೂಢರು ಚಿಕ್ಕವರಿದ್ದಾಗ ಒಬ್ಬ ಮಹಿಳೆ ಅವರನ್ನು ಕೊಲ್ಲುವ ಉದ್ದೇಶದಿಂದ ಸತ್ತ ಹಲ್ಲಿಯನ್ನು ಊಟದಲ್ಲಿ ಬೆರೆಸಿದಳು. ತಮ್ಮ ದಿವ್ಯ ಶಕ್ತಿಯಿಂದ ವಿಷಯ ತಿಳಿದ ಸಿದ್ಧಾರೂಢರು ಊಟವನ್ನು ನಿರಾಕರಿಸದೆ, ಸಂತೋಷದಿಂದ ಸೇವಿಸಿದರು. ಅವರ ಆರೋಗ್ಯದಲ್ಲಿ ಏರುಪೇರು ಆಗಲಿಲ್ಲ. ನಂತರ ಆ ಮಹಿಳೆಗೆ ಇನ್ನು ಮುಂದೆ ಬೇರೆಯವರ ಬಗ್ಗೆ ಈ ರೀತಿಯ ಯೋಚನೆ ಕೂಡ ಮಾಡಬೇಡ ಎಂದು ತಿಳಿಹೇಳಿದ್ದು ಅವರ ಪವಾಡಗಳಲ್ಲೊಂದು.
‘ಸಿದ್ಧಾರೂಢರಜೀವನ ಚರಿತ್ರೆ ಹಾಗೂ ಪವಾಡಗಳನ್ನು ತಿಳಿದುಕೊಳ್ಳಲು ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಭಕ್ತರು ಚಳಕಾಪುರಕ್ಕೆ ಬರುತ್ತಾರೆ’ ಎಂದು ಮಠದ ಭಕ್ತ ಸಂಜುಕುಮಾರ ಹಳ್ಳಿ ಹೇಳುತ್ತಾರೆ.
ಸಿದ್ಧಾರೂಢರ ಮನೆತನದ ನಾಲ್ಕನೇ ತಲೆಮಾರಿನವರು ಗ್ರಾಮದಲ್ಲಿ ಇನ್ನೂ ವಾಸವಾಗಿದ್ದಾರೆ. ಅವರ ಮನೆಗೆ ಭೇಟಿ ನೀಡಲು ಭಕ್ತರಿಗೆ ಅವಕಾಶ ಇದೆ. ಮಠದ ಗೋಡೆಯ ಮೇಲೆ ಬಿಡಿಸಿದ ಸಿದ್ಧಾರೂಢರ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಮಠದಲ್ಲಿ ದಿನ ಅನ್ನದಾಸೋಹ ಇರುತ್ತದೆ. ಭಕ್ತರು ಪ್ರಸಾದ ಸ್ವೀಕರಿಸಿ, ಶ್ರೀಮಠದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಅಲ್ಲದೇ, ಸಿದ್ಧಾರೂಢರು ಜನಿಸಿದ ಪುಣ್ಯ ಭೂಮಿ ಎಂದು ಇಲ್ಲಿನ ಮಣ್ಣನ್ನು ತಮ್ಮ ಮನೆಗೆ ಒಯ್ಯುತ್ತಾರೆ.
ಬೀದರ್‌ನ ಸಿದ್ಧಾರೂಢ ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಅವರ ನೇತೃತ್ವದಲ್ಲಿ ಚಳಕಾಪುರದ ಸಿದ್ಧಾರೂಢ ಮಠವನ್ನು ಶಂಕರಾನಂದ ಸ್ವಾಮೀಜಿ ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
‘ಪ್ರತಿ ವರ್ಷ ಯುಗಾದಿಯ ಸಮಯದಲ್ಲಿ ಸಿದ್ಧಾರೂಢರ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. ಸಿದ್ಧಾರೂಢರ ಅಂಗಾರ ಊರೆಲ್ಲಾ ಬಂಗಾರ, ಸಿದ್ಧಾರೂಢರ ಜೋಳಿಗೆ ಊರೆಲ್ಲಾ ಹೋಳಿಗೆ ಎಂಬ ಜಯ ಘೋಷಗಳು ಮೊಳಗುವವು. ಸ್ವಾಮೀಜಿಗಳಿಂದ ಪ್ರವಚನ ಇರುತ್ತದೆ. ಆದರೆ, ಈ ಬಾರಿ ಪೂಜೆಗೆ ಮಾತ್ರ ಜಾತ್ರೆ ಸೀಮಿತವಾಗಿದೆ. ಭಕ್ತರಿಗೆ ನಿರ್ಬಂಧ ಇರುತ್ತದೆ’ ಎಂದು ಗ್ರಾಮಸ್ಥರಾದ ಸುಭಾಷ ಕೆನಾಡೆ ತಿಳಿಸುತ್ತಾರೆ.
ಜಾತ್ರೆ ರದ್ದು
ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಏಪ್ರಿಲ್ 20ರಿಂದ 22ರ ವರೆಗೆ ನಡೆಯಬೇಕಿದ್ದ ಸಿದ್ಧಾರೂಢರ ಜಾತ್ರಾ ಮಹೋತ್ಸವವನ್ನು ಕೋವಿಡ್– 19 ಸೋಂಕು ಹರಡುವುದನ್ನು ತಡೆಗಟ್ಟುವ ಕಾರಣ ರದ್ದುಪಡಿಸಲಾಗಿದೆ. ಭಕ್ತರು ತಮ್ಮ ಮನೆಯಲ್ಲಿಯೇ ಸಿದ್ಧಾರೂಢ ಪಾರಾಯಣ ಪಠಿಸಬೇಕು ಎಂದು ಮಠದ ಶಂಕರಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.