ಭಾಲ್ಕಿ: ‘ಮಕ್ಕಳ ರಕ್ಷಣೆಗಾಗಿ ಇರುವ ಹಕ್ಕುಗಳು ಉಲ್ಲಂಘನೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ರಾಜ್ಯ ಮಕ್ಕಳ ರಕ್ಷಣಾ ಆಯೋಗದ ನೂತನ ಸದಸ್ಯ ಶಶಿಧರ ಕೋಸಂಬೆ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್‌ಡಿಎಂಸಿ ವತಿಯಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
18 ವರ್ಷದೊಳಗಿನ ಮಕ್ಕಳ ಮನಸ್ಸು ಮುಗ್ಧತೆಯಿಂದ ಕೂಡಿರುತ್ತದೆ. ಇದರಿಂದ ಹಕ್ಕುಗಳು ಉಲ್ಲಂಘನೆಯಾಗಿ ಮಕ್ಕಳು ಸಮಸ್ಯೆ ಎದುರಿಸಿರುವ ನಿದರ್ಶನ ನಮ್ಮ ಮುಂದೆ ಸಾಕಷ್ಟಿವೆ. ಮಕ್ಕಳ ರಕ್ಷಣೆಗೆ ಕಾಯಿದೆ, ಕಾನೂನು ಇದ್ದರೂ ಕೂಡ ಇಂದಿಗೂ ಬಾಲ್ಯ ವಿವಾಹ, ದೌರ್ಜನ್ಯ, ಭ್ರೂಣ ಹತ್ಯೆ, ಬಾಲ ಕಾರ್ಮಿಕ ಪದ್ಧತಿ, ಅತ್ಯಾಚಾರದಂಥ ಪ್ರಕರಣಗಳು ಜೀವಂತವಾಗಿವೆ ಎಂದು ಹೇಳಿದರು.
ಇಂಥ ಪ್ರಕರಣ, ಸಮಸ್ಯೆಗಳು ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡಿ ಸಹಕರಿಸಬೇಕು ಎಂದರು.
ಮೇಥಿ ಮೇಳಕುಂದಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ ಬನ್ನಾಳೆ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಂತೋಷ ಮಾನಕಾರ್ ಮಾತನಾಡಿ,‘ಮಕ್ಕಳ ಸೇವೆ ದೇವರಿಗೆ ಸಮಾನ. ಅಂಥ ಸೇವೆಯನ್ನು ಮಾಡುತ್ತ ಇದೀಗ ರಾಜ್ಯ ಮಟ್ಟದಲ್ಲಿ ಶಶಿಧರ ಕೋಸಂಬೆ ಅವರು ಸ್ಥಾನ ಪಡೆದು ನಮ್ಮೂರಿನ ಕೀರ್ತಿ ಹೆಚ್ಚಿಸಿದ್ದಾರೆ’ ಎಂದು ಸಂತಸ ವ್ಯಕ್ತ ಪಡಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಮಹೇಶ ಬನ್ನಾಳೆ, ಯುವ ಮುಖಂಡರಾದ ರಾಜಕುಮಾರ ಚಲುವಾ, ಸಂಜೀವ ಮೇತ್ರೆ ಮಾತನಾಡಿದರು. ಎಸ್‍ಡಿಎಂಸಿ ಅಧ್ಯಕ್ಷ ಶಿವಶರಣಪ್ಪ ತುಗಶೆಟ್ಟೆ ಅಧ್ಯಕ್ಷತೆ ವಹಿಸಿದರು. ಪ್ರಮುಖರಾದ ಸಿದ್ದು ತುಗಶೆಟ್ಟೆ, ಸೋಮನಾಥ ಸಿರ್ಸೆ, ಮುಖ್ಯಗುರು ವೈಜಿನಾಥ ಮೇತ್ರೆ, ಶಿಕ್ಷಕ ನಂದರಾಜ ಬಿರಾದಾರ ಇದ್ದರು.
ವಿದ್ಯಾರ್ಥಿನಿಯರಾದ ಭವಾನಿ, ಸೃಷ್ಟಿ ಸ್ವಾಗತ ಗೀತೆ ಹಾಡಿದರು. ಶಿಕ್ಷಕಿ ಅಲ್ಕಾ ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.