ADVERTISEMENT

ಸರ್ಕಾರಿ ಶಾಲೆ ಮಕ್ಕಳ ಅದ್ಭುತ ಕಲೆ ಪ್ರದರ್ಶನ

ಶಿಕ್ಷಕರ ಕಾಲೊನಿಯ ಐದು ದಶಕದ ಇತಿಹಾಸವಿರುವ ಮಾದರಿ ಶಾಲೆ

ಮನ್ನಥಪ್ಪ ಸ್ವಾಮಿ
Published 26 ಜೂನ್ 2018, 14:19 IST
Last Updated 26 ಜೂನ್ 2018, 14:19 IST
ಔರಾದ್ ಶಿಕ್ಷಕರ ಕಾಲೊನಿ ಸರ್ಕಾರಿ ಶಾಲೆ ಮಕ್ಕಳು ಪ್ರತಿಭಾ ಕಾರಂಜಿ ಛದ್ಮವೇಶ ಸ್ಪರ್ಧೆಯಲ್ಲಿ ಗಮನಸೆಳೆದರು
ಔರಾದ್ ಶಿಕ್ಷಕರ ಕಾಲೊನಿ ಸರ್ಕಾರಿ ಶಾಲೆ ಮಕ್ಕಳು ಪ್ರತಿಭಾ ಕಾರಂಜಿ ಛದ್ಮವೇಶ ಸ್ಪರ್ಧೆಯಲ್ಲಿ ಗಮನಸೆಳೆದರು   

ಔರಾದ್: ಪಟ್ಟಣದ ಶಿಕ್ಷಕರ ಕಾಲೊನಿಯ ಐದು ದಶಕದ ಇತಿಹಾಸವಿರುವ ಸರ್ಕಾರಿ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಹೆಸರು ಮಾಡಿದೆ.

ಈ ಶಾಲೆಯಲ್ಲಿ 1ರಿಂದ 8ನೇ ತರಗತಿ ವರೆಗೆ ಕನ್ನಡ ಮಾಧ್ಯಮ ಮತ್ತು 1ರಿಂದ 7ನೇ ತರಗತಿ ವರೆಗೆ ಮರಾಠಿ ಮಾಧ್ಯಮವಿದೆ. 355 ಮಕ್ಕಳ ದಾಖಲಾತಿ ಇದೆ. ನಿತ್ಯ 345 ರಿಂದ 350 ಮಕ್ಕಳ ಹಾಜರಾತಿ ಇರುತ್ತದೆ. 10 ಜನ ಶಿಕ್ಷಕರಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳುವಂತೆ ಪ್ರೇರೇಪಣೆ ನೀಡಲಾಗುತ್ತದೆ. ಈ ಕಾರಣ ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ದೇಶದ ವಿವಿಧೆಡೆ ಉನ್ನತ ಹುದ್ದೆಯಲ್ಲಿ ಇದ್ದಾರೆ ಎಂದು ಈ ಶಾಲೆ ಶಿಕ್ಷಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಐಶ್ವರ್ಯ ಜ್ಞಾನೋಬಾ ರಾಷ್ಟ್ರೀಯ ಪ್ರತಿಭಾವಂತ ವಿದ್ಯಾರ್ಥಿವೇತನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಐದು ವರ್ಷ ಕಾಲ ಪ್ರತಿ ತಿಂಗಳು ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿದ್ದಾರೆ. 4ನೇ ತರಗತಿ ವಿದ್ಯಾರ್ಥಿನಿ ಅರ್ಪಿತಾ ಎಂ. ಪ್ರತಿಭಾ ಕಾರಂಜಿ ಛದ್ಮವೇಶ ಸ್ಪರ್ಧೆಯಲ್ಲಿ ಮಾತಾ ದುರ್ಗ ವೇಷದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾಳೆ.

ADVERTISEMENT

ಶಾಲೆಯ 10 ವಿದ್ಯಾರ್ಥಿಗಳ ತಂಡವೊಂದು ಪರಿಸರ ಸಂರಕ್ಷಣೆ, ಮಹಿಳಾ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ, ಪ್ರಾಣಿಗಳ ರಕ್ಷಣೆ ಜಾಗೃತಿ ಕುರಿತು ನಾಟಕ ಪ್ರದರ್ಶನ ಮಾಡಿದ್ದಾರೆ. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸಿ ಮೆಚ್ಚುಗೆ ಪಡೆದಿದ್ದಾರೆ. ತಹಶೀಲ್ದಾರ್ ಎಂ.ಚಂದ್ರಶೇಖರ, ಶಾಸಕ ಪ್ರಭು ಚವಾಣ್ ಈ ಮಕ್ಕಳ ನಾಟಕ ನೋಡಿ ಬಹುಮಾನ ನೀಡಿದ್ದಾರೆ.

‘ಸೌಲಭ್ಯಗಳ ಕೊರತೆ ನಡುವೆಯೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಾಲೆ ಹೆಸರು ಪಡೆದಿದೆ. ವಿಷಯ ಶಿಕ್ಷಕ ಶಾಲಿವಾನ ಉದಗಿರೆ ಅವರು ಮಕ್ಕಳಿಗೆ ಪಾಠದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಲು ಪ್ರೇರಿಪಿಸುತ್ತಾರೆ. ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಹಾಗೂ ಯೋಗದಲ್ಲಿ ಜಿಲ್ಲಾ ಮಟ್ಟದಲ್ಲಿ ಹೆಸರು ಮಾಡಿದ್ದಾರೆ' ಎಂದು ಸಿಆರ್‌ಸಿ ಉಮಾಕಾಂತ ಮಹಾಜನ ತಿಳಿಸಿದ್ದಾರೆ.

‘ದೈಹಿಕ ಶಿಕ್ಷಣ ಶಿಕ್ಷಕರು ಹುದ್ದೆ ಖಾಲಿ ಇದೆ. ಕನ್ನಡ ಮತ್ತು ಮರಾಠಿ ವಿಭಾಗದಲ್ಲಿ ತಲಾ 2 ಶಿಕ್ಷಕರ ಅಗತ್ಯವಿದೆ. ಶಾಲಾ ಕಟ್ಟಡ ಹಳೆಯದಾಗಿರುವುದರಿಂದ ಸಮಸ್ಯೆಯಾಗಿದೆ. ಹೊಸ ಕಟ್ಟಡ ಕಟ್ಟಲು ಪ್ರಸ್ತಾವ ಸಲ್ಲಿಸಲಾಗಿದೆ. ಶೌಚಾಲಯ ಇದ್ದರೂ ಬಳಕೆಗೆ ಯೋಗ್ಯವಾಗಿಲ್ಲ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಶಾಲೆಯ ವಿದ್ಯಾರ್ಥಿಗಳಲ್ಲಿ ಅದ್ಭುತ ಪ್ರತಿಭೆ ಇದೆ. ಅವರಿಗೆ ಸೂಕ್ತ ಪ್ರೇರಣೆ ನೀಡಿದರೆ ಉನ್ನತ ಸಾಧನೆ ಮಾಡುತ್ತಾರೆ.
- ಶಾಲಿವಾನ ಉದಗಿರೆ,ಸಂಪನ್ಮೂಲ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.