ADVERTISEMENT

ಸ್ವಚ್ಛತೆಗೆ ಆದ್ಯತೆ ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 24 ಮೇ 2023, 12:49 IST
Last Updated 24 ಮೇ 2023, 12:49 IST
ಹುಮನಾಬಾದ್ ಪಟ್ಟಣದಲ್ಲಿ ‘ನನ್ನ ಜೀವನ ಹಾಗೂ ನನ್ನ ಸ್ವಚ್ಛ ನಗರ’ ಅಭಿಯಾನದ ಅಂಗವಾಗಿ ನಡೆದ ಸ್ವಚ್ಛತಾ ಕಾರ್ಯಕ್ರಮಕ್ಕೆ ಆರೋಗ್ಯ ನಿರೀಕ್ಷಕ ಸಲೀಂ ಚಾಲನೆ ನೀಡಿದರು
ಹುಮನಾಬಾದ್ ಪಟ್ಟಣದಲ್ಲಿ ‘ನನ್ನ ಜೀವನ ಹಾಗೂ ನನ್ನ ಸ್ವಚ್ಛ ನಗರ’ ಅಭಿಯಾನದ ಅಂಗವಾಗಿ ನಡೆದ ಸ್ವಚ್ಛತಾ ಕಾರ್ಯಕ್ರಮಕ್ಕೆ ಆರೋಗ್ಯ ನಿರೀಕ್ಷಕ ಸಲೀಂ ಚಾಲನೆ ನೀಡಿದರು   

ಹುಮನಾಬಾದ್: ‘ಆರೋಗ್ಯವಾಗಿರಬೇಕಾದರೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದು ಪುರಸಭೆ ಆರೋಗ್ಯ ನಿರೀಕ್ಷಕ ಸಲೀಂ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಡಳಿತ ಹಾಗೂ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ‘ನನ್ನ ಜೀವನ ಹಾಗೂ ನನ್ನ ಸ್ವಚ್ಛ ನಗರ’ ಅಭಿಯಾನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವಚ್ಛತಾ ಜಾಗೃತಿಯ ಜತೆಗೆ ವಿದ್ಯಾರ್ಥಿಗಳಿಗೆ ನೆರವಾಗಲು ಯೋಜನೆ ರೂಪಿಸಲಾಗಿದೆ. ಘನತ್ಯಾಜ್ಯ ವಸ್ತುಗಳು ವಿಲೇವಾರಿ ಘಟಕಕ್ಕೆ ಹೋಗುವ ಮುಂಚೆಯೇ ಬಳಕೆ ಮಾಡಲು ಯೋಗ್ಯವಾಗಿದ್ದರೆ ಅದನ್ನು ಬಳಕೆ ಮಾಡಲಾಗುವುದು. ಕಸ ಸಂಗ್ರಹದ ವೇಳೆ ಮಕ್ಕಳು ಓದಿ ಮುಗಿಸಿ ಹಾಗೆಯೇ ಇಟ್ಟಿರುವ ಪುಸ್ತಕ ಮತ್ತು ಆಟಿಕೆಗಳನ್ನು ಪಡೆದುಕೊಂಡು ಅಗತ್ಯ ಇರುವ ಮಕ್ಕಳಿಗೆ ನೀಡಲಾಗುವುದು ಎಂದರು.

ADVERTISEMENT

ಗ್ರಾಮ, ಪಟ್ಟಣ ಹಾಗೂ ನಗರದಲ್ಲಿ ಜನರು ಆರೋಗ್ಯದಿಂದ ಬದುಕು ನಿರ್ವಹಣೆ ಮಾಡಬೇಕಾದರೆ ಸ್ವಚ್ಛತೆ ಬೇಕು. ಕೇವಲ ಅಧಿಕಾರಿ ಹಾಗೂ ಪೌರ ಕಾರ್ಮಿಕರು ಶ್ರಮ ವಹಿಸಿದರೆ ವಾತಾವರಣವನ್ನು ಸ್ವಚ್ಛವಾಗಿರಿಸಲು ಸಾಧ್ಯವಿಲ್ಲ. ಸ್ವಚ್ಛತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದರು.

ಪರಿಸರ ಅಧಿಕಾರಿ ವೀರಶೆಟ್ಟಿ, ವ್ಯವಸ್ಥಾಪಕ ಶರಣಪ್ಪ ಸಂಜುಕುಮಾರ ಹಾಗೂ ಗಣಪತಿ ಅಷ್ಟೂರೆ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.