ಬೀದರ್: ಮೂರು ದಿಕ್ಕುಗಳಲ್ಲಿ ಬೆಟ್ಟಗಳಿಂದ ಸುತ್ತುವರಿದಿರುವ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗಡಿ ಗ್ರಾಮ ಉಜಳಂಬವು ಗುರುವಾರ (ಜೂ.27) ವಾಸ್ತವ್ಯಕ್ಕೆ ಬರಲಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗಾಗಿ ಸ್ವಚ್ಛ, ಸುಂದರ ರೂಪ ಪಡೆದುಕೊಂಡಿದೆ.
ಗಡಿ ಗ್ರಾಮದ ಜನ ಮೊದಲ ಬಾರಿಗೆ ಅಭಿವೃದ್ಧಿಯ ದರ್ಶನ ಪಡೆದಿದ್ದಾರೆ. ಒಂದು ತಿಂಗಳ ಅವಧಿಯಲ್ಲೇ ಗ್ರಾಮ ಸಾಕಷ್ಟು ಬದಲಾಗಿದೆ.
ಹೈದರಾಬಾದ್–ಸೊಲ್ಲಾಪುರರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮದ ವರೆಗೂ ಅಚ್ಚುಕಟ್ಟಾದ ರಸ್ತೆ ನಿರ್ಮಾಣವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಕೆಂಪು ಮಣ್ಣು ಸುರಿಯಲಾಗಿದೆ. ಗ್ರಾಮದ ಪ್ರತಿಯೊಂದು ಓಣಿಯಲ್ಲೂ ಕಾಂಕ್ರೀಟ್ ರಸ್ತೆ ಕಾಣುತ್ತಿದೆ.
ಆಗಲೋ, ಈಗಲೋ ಬೀಳುವ ಸ್ಥಿತಿಯಲ್ಲಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ ತೆರವುಗೊಳಿಸಿ ₹ 59 ಲಕ್ಷ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಆರಂಭಿಸಲಾಗಿದೆ. ಸುಸಜ್ಜಿತ ಶೌಚಾಲಯ ಹಾಗೂ ಶಾಲಾ ಆವರಣ ಗೋಡೆ ನಿರ್ಮಿಸಲಾಗಿದೆ. ಮುಖ್ಯಮಂತ್ರಿ ವಾಸ್ತವ್ಯ ಮಾಡಲಿರುವ ಶಾಲಾ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯಲಾಗಿದ್ದು, ಆಕರ್ಷಕ ಚಿತ್ರಗಳನ್ನೂ ಬಿಡಿಸಲಾಗಿದೆ.
ಪಂಚಾಯಿತಿ ಕಟ್ಟಡ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಚಿಕಿತ್ಸಾಲಯ ಹಾಗೂ ರಾಜೀವ್ ಗಾಂಧಿ ಸೇವಾ ಕೇಂದ್ರಕ್ಕೂ ಬಣ್ಣ ಬಳಿಯಲಾಗಿದೆ. ಗ್ರಾಮದಲ್ಲಿ ಚರಂಡಿ ನಿರ್ಮಿಸಿ ಮನೆಯಿಂದ ಹೊರ ಬರುವ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗಿದೆ. ವಿದ್ಯುತ್ ಸಮಸ್ಯೆಯಾಗದಂತೆ ಹೊಸ ಪರಿವರ್ತಕ ಅಳವಡಿಸಲಾಗಿದೆ. ಗ್ರಾಮದ ಸಮೀಪ 50 ಹೆಕ್ಟೇರ್ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯ ಭರದಿಂದ ಸಾಗಿದೆ.
ಮಳೆ ಬಂದರೂ ಮುಖ್ಯಮಂತ್ರಿ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ತೊಂದರೆಯಾಗದಂತೆ ಪ್ರಾಥಮಿಕ ಶಾಲೆಯ ಆವರಣದಲ್ಲೇ ಪೆಂಡಾಲ್ ನಿರ್ಮಿಸಲಾಗಿದೆ. ಮೂರು ಸಾವಿರ ಕುರ್ಚಿಗಳನ್ನು ಹಾಕಲಾಗಿದೆ. ಸುಮಾರು ಐದು ಸಾವಿರ ಜನ ಸೇರುವ ನಿರೀಕ್ಷೆ ಇದೆ. 10 ಸಾವಿರ ಜನ ಬಂದು ಹೋದರೂ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ.
ಗ್ರಾಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ದಂಡು ಬೀಡು ಬಿಟ್ಟಿದೆ. ಹೊಲದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಹೆದ್ದಾರಿಯಿಂದ ಗ್ರಾಮದ ವರೆಗೆ ಚಿಕ್ಕರಸ್ತೆ ಇರುವ ಕಾರಣ ಸಂಚಾರ ದಟ್ಟಣೆ ನಿಯಂತ್ರಿಸಲು ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಗ್ರಾಮದಲ್ಲಿ ಮರಾಠಿ ಭಾಷಿಕರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಉರ್ದು ಹಾಗೂ ಮರಾಠಿ ಮಿಶ್ರಿತ ಹರಕು ಮುರುಕು ಕನ್ನಡ ಮಾತನಾಡುತ್ತಾರೆ. ಹೀಗಾಗಿ ಕನ್ನಡ ಚೆನ್ನಾಗಿ ಬಲ್ಲವರನ್ನು ಹಿಡಿದುಕೊಂಡು ಮುಖ್ಯಮಂತ್ರಿಗೆ ತಮ್ಮ ಗ್ರಾಮದ ಸಮಸ್ಯೆಯನ್ನು ಹೇಳಲು ಹಾಗೂ 25 ಪ್ರಮುಖ ಬೇಡಿಕೆಗಳ ಮನವಿ ಸಲ್ಲಿಸಲು ಸನ್ನದ್ಧರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.