ಬೀದರ್: ‘ಜನರ ಭಾವನೆಗಳನ್ನು ಕೆರಳಿಸಿದ್ದೇ ಬಿಜೆಪಿ ಸಾಧನೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ಕುಟುಕಿದರು.
‘ಮಹಿಳೆಯರು, ರೈತರು, ಯುವಕರಿಗೆ ಅನುಕೂಲ ಮಾಡಿಕೊಟ್ಟಿಲ್ಲ. ಘೋಷಿಸಿದ ಯಾವ ಯೋಜನೆಯನ್ನೂ ಪೂರ್ಣಗೊಳಿಲ್ಲ. ಬಿಜೆಪಿ ಪ್ರತಿ ಹಂತದಲ್ಲೂ ಸುಳ್ಳು ಹೇಳುತ್ತ ಬಂದಿದೆ’ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
‘ಜನರ ಖಾತೆಗೆ ತಲಾ ₹ 15 ಲಕ್ಷ ಹಾಕಲಿಲ್ಲ. ರೈತರ ಸಾಲ ಮನ್ನಾ ಮಾಡಲಿಲ್ಲ. ಅಂಗನವಾಡಿಗಳಿಗೆ ನಯಾಪೈಸೆ ನೀಡಲಿಲ್ಲ. ಯುವಕರಿಗೆ ಉದ್ಯೋಗವನ್ನೂ ಕೊಡಲಿಲ್ಲ’ ಎಂದು ದೂರಿದರು.
‘ಬೆಳಕೇ ಕಾಣದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾಗಿ ಬಿಜೆಪಿ ಹೇಳಿಕೊಳ್ಳುತ್ತಿದೆ. ದೇಶದಲ್ಲಿ 6.50 ಲಕ್ಷ
ಹಳ್ಳಿಗಳಿವೆ. ಈ ಪೈಕಿ 6.32 ಲಕ್ಷ ಹಳ್ಳಿಗಳಿಗೆ ವಿದ್ಯುತ್ ಒದಗಿಸಿದ್ದು ಕಾಂಗ್ರೆಸ್. ಬಿಜೆಪಿ ಪಾಲಿಗೆ 18 ಸಾವಿರ ಹಳ್ಳಿಗಳು ಮಾತ್ರ ದಕ್ಕಿವೆ’ ಎಂದು ಅಣಕಿಸಿದರು.
‘ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಲ್ಲಿ ಕರ್ನಾಟಕಕ್ಕೆ ಒದಗಿಸಿದ್ದ ₹ 251 ಕೋಟಿಯಲ್ಲಿ ಶೇ 51 ರಷ್ಟನ್ನು ಮೋದಿ ಚಿತ್ರವಿದ್ದ ಯೋಜನೆಯ ಜಾಹೀರಾತಿಗೆ ಖರ್ಚು ಮಾಡಲಾಗಿದೆ. ಎಲ್ಲ ಯೋಜನೆಗಳಲ್ಲೂ ಹೀಗೆಯೇ ಮಾಡಲಾಗಿದೆ’ ಎಂದು ದೂರಿದರು.
‘ಬಿಜೆಪಿ ಐದು ವರ್ಷಗಳ ಹಿಂದಿನ ಪ್ರಣಾಳಿಕೆಯನ್ನೇ ಮತ್ತೆ ಕೊಟ್ಟಿದೆ. ಅದರಲ್ಲಿ ಹೊಸತೇನೂ ಇಲ್ಲ’ ಎಂದು ಆಪಾದಿಸಿದರು.
‘ಬೀದರ್ ಸಂಸದರು ಸಂಸತ್ತಿನಲ್ಲಿ ಒಮ್ಮೆಯೂ ಧ್ವನಿ ಎತ್ತಿಲ್ಲ. ಕ್ಷೇತ್ರಕ್ಕೆ ಯಾವುದೇ ಯೋಜನೆ ತಂದಿಲ್ಲ. ರೈಲುಗಳು ಮಲ್ಲಿಕಾರ್ಜುನ ಖರ್ಗೆಯವರ ಕೊಡುಗೆಯಾಗಿವೆ. ಉಡಾನ್ ವ್ಯಾಪ್ತಿಗೆ ಬೀದರ್ ಅನ್ನು ಸೇರಿಸುವಲ್ಲಿ ಸಂಸದರು ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.
‘ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಒಳ್ಳೆಯ ಅಭ್ಯರ್ಥಿಯಾಗಿದ್ದಾರೆ. ಮತದಾರರು ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.