ಬೀದರ್: ಐದು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಗ್ರಾಮಗಳು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ಕುಡಿಯುವ ನೀರಿಗಾಗಿ ಹೈಕೋರ್ಟ್ ಮೊರೆ ಹೋಗುವ ಮತ್ತು ಸಾರಿಗೆ ಸಂಪರ್ಕಕ್ಕೆ ಕತ್ತೆ ಬಳಸಬೇಕಾದ ಪರಿಸ್ಥಿತಿ ಇದೆ. ಉದ್ಯೋಗಕ್ಕಾಗಿ ನೆರೆ ರಾಜ್ಯಗಳ ಮಹಾನಗರಕ್ಕೆ ವಲಸೆ ಹೋಗುವುದು ಮುಂದುವರಿದಿದೆ.
ಬಲವಾಗಿ ಬೇರೂರಿದ ಭ್ರಷ್ಟಾಚಾರ, ಕಳಪೆ ಕಾಮಗಾರಿ, ಅಭಿವೃದ್ಧಿಗೆ ಇಚ್ಛಾಶಕ್ತಿಯ ಕೊರತೆ ಸೇರಿ ಎಲ್ಲವೂ ಸಮಸ್ಯೆಗಳನ್ನು ಇನ್ನಷ್ಟು ಜಟಿಲುಗೊಳಿಸಿವೆ. ನೀರಾವರಿ ಯೋಜನೆ, ಸಾರಿಗೆ ಅವ್ಯವಸ್ಥೆ, ಕುಡಿಯುವ ನೀರು ಮತ್ತು ನಿರುದ್ಯೋಗ ಸಮಸ್ಯೆ ಜನರ ನೆಮ್ಮದಿ ಕಸಿದಿವೆ.
ಬೀದರ್ ಜಿಲ್ಲೆಯಲ್ಲಿ ಕಾರಂಜಾ ನೀರಾವರಿ ಯೋಜನೆಯ ಕಾಲುವೆ ಆಧುನೀಕರಣ ಕಾಮಗಾರಿ ಮತ್ತು ಅತಿವಾಳಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣವಾಗಿಲ್ಲ. ರೈತರ ಆಕ್ಷೇಪಣೆಗಳಿಂದ ಕಾಮಗಾರಿ ಅಲ್ಲಲ್ಲಿ ಬಾಕಿ ಉಳಿದಿವೆ. ಚಂದಾಪುರ ಬ್ಯಾರೇಜ್‌ನಿಂದ ಬೀದರ್ ತಾಲ್ಲೂಕಿನ 33 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಡತಗಳಲ್ಲೇ ಉಳಿದಿದೆ.
ರಾಯಚೂರು ತಾಲ್ಲೂಕಿನ ಉತ್ತರ ಭಾಗದಲ್ಲಿರುವ ಕೃಷ್ಣಾನದಿ ಆಚೆ ತೆಲಂಗಾಣ ಗಡಿ ಮತ್ತು ದಕ್ಷಿಣ ಭಾಗದಲ್ಲಿರುವ ತುಂಗಭದ್ರಾ ನದಿ ಆಚೆ ಆಂಧ್ರಪ್ರದೇಶ ಗಡಿ ಇದೆ.
ಎರಡೂ ಗಡಿಗಳಲ್ಲಿ ನದಿಗಳಿದ್ದರೂ ಗಡಿಗ್ರಾಮಗಳಿಗೆ ಇಂದಿಗೂ ನೀರಾವರಿ ಸೌಲಭ್ಯವಿಲ್ಲ.
ತೆಲಂಗಾಣದಲ್ಲಿ ಸಂಗಂಬಂಡಾ ಜಲಾಶಯ ನಿರ್ಮಾಣದ ಬಳಿಕ ಕರ್ನಾಟಕದ ಗಡಿ ಗ್ರಾಮ ಚಲ್ಹೇರಿ ಸೇರಿ ಸುತ್ತಮುತ್ತಲಿನ ಕೆಲ ಗ್ರಾಮಗಳ ರೈತರ ಸ್ಥಿತಿ ಚಿಂತಾಜನಕವಾಗಿದೆ. ಸಂಗಂಬಂಡಾ ಹಿನ್ನೀರಿನಿಂದ ಇಲ್ಲಿನ ರೈತರಿಗೆ ಸೇರಿದ ಜಮೀನುಗಳಲ್ಲಿ ಬೆಳೆ ನಾಶವಾಗುತ್ತಿದೆ.
ಬೀದರ್ ಜಿಲ್ಲೆಯ ಗಡಿಯಲ್ಲಿ ಸಂಪರ್ಕ ರಸ್ತೆಗಳು ಸುಸ್ಥಿತಿಯಲ್ಲಿ ಇಲ್ಲ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳೂ ಹಾಳಾಗಿವೆ. ಔರಾದ್–ಬೀದರ್, ಬೀದರ್–ಹುಮನಾಬಾದ್ ಹೆದ್ದಾರಿ ಕಾಮಗಾರಿ ಪೂರ್ಣವಾಗಿಲ್ಲ. ಕಾಮಗಾರಿ ಆಮೆವೇಗದಲ್ಲಿ ಸಾಗಿದೆ.
ಉದ್ಯೋಗ ಸಮಸ್ಯೆ: ಬೀದರ್, ಕಲಬುರಗಿ ಜಿಲ್ಲೆಯವರು ಹೈದರಾಬಾದ್‌ಗೆ, ರಾಯಚೂರು, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆ
ಯವರು ಮುಂಬೈ, ಗೋವಾಕ್ಕೆ ವಲಸೆ ಹೋಗುತ್ತಾರೆ. ಚಿಕ್ಕಬಳ್ಳಾಪುರ ಸೇರಿದಂತೆ ಕೆಲ ಜಿಲ್ಲೆಗಳ ಗ್ರಾಮಸ್ಥರು ನೆರೆ ರಾಜ್ಯದ ಗಡಿಯಲ್ಲಿರುವ ಕೈಗಾರಿಕೆಗಳಿಗೆ ದುಡಿಯಲು ಹೋಗುತ್ತಾರೆ. ಕೃಷಿ ಚಟುವಟಿಕೆಯಿಂದ ನಷ್ಟಕ್ಕೆ ಒಳಗಾಗಿರುವ ಅವರು ಉದ್ಯೋಗಕ್ಕೆ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಗಡಿಯಲ್ಲಿ ಬಂಕ್‌ಗಳು ಇಲ್ಲ: ತೆಲಂಗಾಣಹಾಗೂ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಬಳಿ ಪೆಟ್ರೋಲ್ ಬಂಕ್‌ಗಳಿಲ್ಲ. ಗಡಿಪ್ರದೇಶದಲ್ಲಿ ಕಿರಾಣಿ ಅಂಗಡಿಯವರು ಪೆಟ್ರೋಲ್ ತುಂಬಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ತೂಗಿ ಹಾಕಿ, ಮಾರುತ್ತಾರೆ.
ದೂರದ ತಾಲ್ಲೂಕು ಕೇಂದ್ರಗಳಿಗೆ ಹೋಗಲು ಸಾಧ್ಯವಾಗದ ಬೈಕ್ ಸವಾರರು ಕಿರಾಣಿ ಅಂಗಡಿಗಳಲ್ಲೇ ಪೆಟ್ರೋಲ್ ಖರೀದಿಸುತ್ತಾರೆ. ಹೀಗೆ ಪೆಟ್ರೋಲ್ ಮಾರಾಟ ಕಾನೂನು ಬಾಹಿರ ಎನ್ನುವುದು ಗೊತ್ತಿದ್ದರೂ ಬಹಿರಂಗವಾಗಿಯೇ ನಡೆಯುತ್ತಿದೆ.
ರಸ್ತೆ, ನೀರಿಗಾಗಿ ಪಿಐಎಲ್
‘ಕುಡಿಯುವ ನೀರು ಪೂರೈಸಲು ಮತ್ತು ರಸ್ತೆ ನಿರ್ಮಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಈವರೆಗೆ ಹೈಕೋರ್ಟ್‌ನಲ್ಲಿ 101 ಪಿಐಎಲ್ ದಾಖಲಿಸಿರುವೆ. ರಾಜ್ಯದ ಬೀದರ್ ಗಡಿಯಲ್ಲಿರುವ ಮದನೂರು ಗ್ರಾಮಕ್ಕೆ ನೀರು ಪೂರೈಸುವಂತೆ 2017ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದೆ. ಅದೇ ವರ್ಷ ಕೋರ್ಟ್ ಸರ್ಕಾರಕ್ಕೆ ನಿರ್ದೇಶನವನ್ನೂ ನೀಡಿತು. ಆದರೆ, ಅಲ್ಲಿನ ಪರಿಸ್ಥಿತಿ ಮಾತ್ರ ಬದಲಾಗಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಹೇಳುತ್ತಾರೆ.
ಔರಾದ್ ತಾಲ್ಲೂಕಿನ 5 ತಾಂಡಾಗಳಿಗೆ ಇಂದಿಗೂ ರಸ್ತೆ ಇರದ ಕಾರಣ ಅಲ್ಲಿನ ನಿವಾಸಿಗಳು ಸರಕು ಸಾಗಣೆಗೆ ಕತ್ತೆಗಳನ್ನು ಅವಲಂಬಿಸಿದ್ದಾರೆ. ರಸ್ತೆಗಳು ಇರದ ಕಾರಣ ವಾಹನಗಳು ಇತ್ತ ಬರುವುದಿಲ್ಲ.
ಗಡಿ ಜಿಲ್ಲೆಗಳಲ್ಲಿ ರಾಜಕಾರಣಿಗಳು, ಗುತ್ತಿಗೆದಾರರು ಮತ್ತು ಭ್ರಷ್ಟ ಅಧಿಕಾರಿಗಳು ಒಳಗೊಂಡ ದೊಡ್ಡ ಸರಪಳಿ ಇದೆ. ಎಲ್ಲರೂ ಬೇರೆ ಬೇರೆ ಕಾರಣಕ್ಕೆ ಗಡಿ ಸಮಸ್ಯೆಗಳನ್ನು ಜೀವಂತವಾಗಿ ಇಡಲು ಬಯಸುತ್ತಾರೆ.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಗಡಿ ಗ್ರಾಮಗಳಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಅಧಿಕ ಇದೆ. ಜಿಲ್ಲೆಗಳಲ್ಲಿ ದೊಡ್ಡ ನದಿಗಳು ಹರಿದಿಲ್ಲ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಶುದ್ಧ ನೀರನ್ನು ಖರೀದಿಸಿಯೇ ಕುಡಿಯಬೇಕಾದ ಸ್ಥಿತಿಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.