ಬಸವಕಲ್ಯಾಣ: ‘ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸುಗಮವಾಗಿ ನಡೆಯುವಂತಾಗಲು ವ್ಯವಸ್ಥೆ ಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್ ಮಾತನಾಡಿ, ‘ಜುಲೈ 19 ಹಾಗೂ 22 ರಂದು ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಲ್ಲೂಕಿನಲ್ಲಿ ಒಟ್ಟು 32 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 5740 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಕೋವಿಡ್ ನಿಯಮದ ಪ್ರಕಾರ ಸಿದ್ಧತೆ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
‘ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡುವಂತೆ ಇಒ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಬೇಕು. ಆರೋಗ್ಯಾಧಿಕಾರಿಗಳು ಕೋವಿಡ್ ಲಸಿಕಾಕರಣ ಅಭಿಯಾನ ತೀವ್ರಗೊಳಿಸಬೇಕು. ಕೆಲವರು ಲಸಿಕೆಯ ಬಗ್ಗೆ ತಪ್ಪು ಕಲ್ಪನೆ ಮೂಡಿಸುತ್ತಿರುವುದು ಸರಿಯಲ್ಲ. ಎಲ್ಲರೂ ಲಸಿಕೆ ಪಡೆದುಕೊಂಡರೆ ಸೋಂಕು ಹರಡುವುದನ್ನು ತಡೆಯಬಹುದು’ ಎಂದು ಸಚಿವರು ತಿಳಿಸಿದರು.
‘ನಗರದಲ್ಲಿ ಗೋಹತ್ಯೆ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಪಶು ಸಂಗೋಪನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತರೆ ಆಗುವುದಿಲ್ಲ. ತಕ್ಷಣ ಈ ಬಗ್ಗೆ ಕ್ರಮ ತೆಗೆದುಕೊಂಡು ವರದಿ ಸಲ್ಲಿಸಬೇಕು. ಇಲಾಖೆಯ ಎಲ್ಲ ಯೋಜನೆಗಳು ಅರ್ಹರಿಗೆ ತಲುಪಿಸಬೇಕು. ನಾನೇ ಈ ಇಲಾಖೆಯ ಸಚಿವ ಆಗಿರುವುದರಿಂದ ನಮ್ಮ ಜಿಲ್ಲೆಯವರು ಇಲಾಖೆಯ ಯೋಜನೆಗಳ ಪ್ರಯೋಜನ ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳುವಂತೆ ಅಧಿಕಾರಿಗಳು ಶ್ರಮಿಸಬೇಕು’ ಎಂದು ನಿರ್ದೇಶಿಸಿದರು.
‘ಮಳೆ, ಗಾಳಿಯಿಂದ ರಸ್ತೆ ಮೇಲೆ ಬಿದ್ದಿರುವ ಗಿಡ, ವಿದ್ಯುತ್ ಕಂಬಗಳನ್ನು ತಕ್ಷಣ ಸರಿಪಡಿಸಬೇಕು. ಮಳೆ ಹಾನಿ ಬಗ್ಗೆ ಸಮೀಕ್ಷೆ ಕೈಗೊಳ್ಳಬೇಕು’ ಎಂದರು.
ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ, ತಹಶೀಲ್ದಾರ್ ಸಾವಿತ್ರಿ ಸಲಗರ, ಕಾರ್ಯನಿರ್ವಾಹಕ ಅಧಿಕಾರಿ ಬೀರೇಂದ್ರಸಿಂಗ್ ಠಾಕೂರ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಸದಸ್ಯ ಕಿರಣ ಪಾಟೀಲ, ಡಿವೈಎಸ್ಪಿ ಸೋಮಲಿಂಗ ಕುಂಬಾರ ಪಾಲ್ಗೊಂಡಿದ್ದರು.
‘ಅನುಭವ ಮಂಟಪ ಎರಡು ವರ್ಷದಲ್ಲಿ ಪೂರ್ಣ’
ಸಭೆಗೂ ಮೊದಲು ಮಿನಿ ವಿಧಾನಸೌಧದಲ್ಲಿನ ಸಭಾಂಗಣದಲ್ಲಿ ಕುಳಿತು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಸಭೆಯ ನೇರ ಪ್ರಸಾರವನ್ನು ಸಚಿವ ಪ್ರಭು ಚವಾಣ್ ವೀಕ್ಷಿಸಿದರು.
ನಂತರ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿ, ‘ಅನುಭವ ಮಂಟಪದ ಕಾಮಗಾರಿ ಎರಡು ವರ್ಷದಲ್ಲಿ ಪೂರ್ಣಗೊಳಿಸಲಾಗು ವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.