ADVERTISEMENT

ಹುಮನಾಬಾದ್ | ನನ್ನ ಗೆಲುವಿನಿಂದ ಕಾಂಗ್ರೆಸ್ ನಾಯಕರಿಗೆ ನಡುಕ- ಶಾಸಕ ಸಿದ್ದಲಿಂಗಪ್ಪ

ಹುಮನಾಬಾದ್‌ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಟೀಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2024, 15:42 IST
Last Updated 7 ಫೆಬ್ರುವರಿ 2024, 15:42 IST
ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ ಬಿಜೆಪಿ ತಾಲ್ಲೂಕು ಕಾರ್ಯಕಾರಿಣಿಯನ್ನು ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ ಉದ್ಘಾಟಿಸಿದರು
ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ ಬಿಜೆಪಿ ತಾಲ್ಲೂಕು ಕಾರ್ಯಕಾರಿಣಿಯನ್ನು ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ ಉದ್ಘಾಟಿಸಿದರು   

ಹುಮನಾಬಾದ್: ‘ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ನಾನು ಶಾಸಕನಾಗಿ ಆಯ್ಕೆಯಾದ ನಂತರ ಇಲ್ಲಿನ ಕಾಂಗ್ರೆಸ್ ನಾಯಕರಿಗೆ ನಡುಕ ಹುಟ್ಟಿದೆ’ ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಟೀಕಿಸಿದರು.

ಹುಮನಾಬಾದ್ ಬಿಜೆಪಿ ಮಂಡಲ ವತಿಯಿಂದ ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ ಆಯೋಜಿಸಿದ್ದ  ತಾಲ್ಲೂಕು ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.

ಹುಮನಾಬಾದ್ ಕಾಂಗ್ರೆಸ್ ನಾಯಕರಿಗೆ ಸದ್ಯ ರಾತ್ರಿ ನಿದ್ರೆಯೂ ಬರುತ್ತಿಲ್ಲ. ಈಚೆಗೆ ಕಾಂಗ್ರೆಸ್‌ನವರು ಹುಮನಾಬಾದ್ ಪಟ್ಟಣದ ಹೊರವಲಯದ ಕೆಮಿಕಲ್ ಕಾರ್ಖಾನೆಗಳ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಆದರೆ ಈ ಪ್ರತಿಭಟನೆಯಲ್ಲಿ ಒಂದೇ ಒಂದು ಕಾರ್ಖಾನೆಗಳ ವಿರುದ್ಧವೂ ಒಬ್ಬರೂ ಮಾತನಾಡಿಲ್ಲ. ಕೇವಲ ನನ್ನ ಬಗ್ಗೆ ಮಾತನಾಡಿದ್ದಾರೆ.‌ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹೇಳಿದಂತೆ ನಾನು ಕೆಲವು ಕಾರ್ಖಾನೆಗಳು ಬಂದ್ ಮಾಡಿಸಿದ್ದೇನೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದೆ. ಸರ್ಕಾರದ ಗಮನಕ್ಕೆ ತಂದು ಕಾರ್ಖಾನೆಗಳು ಬಂದ್ ಮಾಡಿಸುವ ಕೆಲಸ ಮಾಡಬೇಕು. ಸುಖಾಸುಮ್ಮನೆ ‌ಇಲ್ಲಸಲ್ಲದ ಆರೋಪ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.

ADVERTISEMENT

ಹುಮನಾಬಾದ್ ಮಂಡಲ ವತಿಯಿಂದ ಬಿಜೆಪಿಯ ಲೋಕಸಭಾ ಅಭ್ಯರ್ಥಿಗೆ 25 ಸಾವಿರ ಮತಗಳ ಲೀಡ್ ನೀಡಲಾಗುವುದು ಎಂದು ಭರವಸೆ ನೀಡಿದರು.

ಬಿಜೆಪಿ ಮುಖಂಡ ಬಸವರಾಜ ಆರ್ಯ ಮಾತನಾಡಿ, ಹುಮನಾಬಾದ್‌ ಸ್ಥಳೀಯ ಕಾಂಗ್ರೆಸ್ ನಾಯಕರ ಬಗ್ಗೆ ನೀವು ಯಾರೂ ಸಹ ತಲೆ ಕೆಡಿಸಿಕೊಳ್ಳುವುದು ಬೇಡ. ನಮ್ಮ ಜತೆ ಹುಮನಾಬಾದ್ ಶಾಸಕರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರೂ ಗೌಡರೇ ಇದ್ದಾರೆ. ಶಾಸಕ ಸಿದ್ದಲಿಂಗಪ್ಪ ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಜತೆಗೆ ಇರುವುದನ್ನು ನೋಡಿ ಮಾಜಿ ಸಚಿವ ರಾಜಶೇಖರ ಪಾಟೀಲ ಅವರು ಮತ್ತಷ್ಟು ಹತಾಶರಾಗಿದ್ದಾರೆ. ಸೋಲು ಗೆಲುವು ಸಮನಾಗಿ ಸ್ವೀಕರಿಸಿ ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರಿಗೆ ಸಹಕಾರ ಮಾಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಪ್ರಭಾಕರ್ ನಾಗರಹಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ, ಶಿವಾನಂದ ಮಂಠಾಳಕರ್, ವಿಶ್ವನಾಥ್ ಪಾಟೀಲ ಮಾಡಗೋಳ, ಅಭಿಮನ್ಯು ನೀರಗುಡಿ, ಮಾಹದೇವಿ, ಕಿರಣ ಪಾಟೀಲ , ಗಜೇಂದ್ರ ಕನಕಟರ್, ಬಾಬುರಾವ್, ರಾಜಶೇಖರ, ಇಲಿಯಾಸ್, ಅನಿಲ ಪಸರಗಿ, ಎಸ್ಟಿ ಮೋರ್ಚಾ ತಾಲ್ಲೂಕು ಅಧ್ಯಕ್ಷ ದಯಾನಂದ ಮೇತ್ರಿ, ರಮೇಶ ಕಲ್ಲೂರ್, ಶ್ರೀನಾಥ್ ದೇವಣಿ, ಸಂಜು ವಾಡೇಕರ್ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.