ADVERTISEMENT

ಬಿಜೆಪಿ ಗೆದ್ದರೆ ಸಂವಿಧಾನ ಬದಲಾವಣೆ: ಸಚಿವ ಈಶ್ವರ ಬಿ. ಖಂಡ್ರೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 16:34 IST
Last Updated 29 ಏಪ್ರಿಲ್ 2024, 16:34 IST
ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ ಮತ್ತು ಸಂವಿಧಾನ ಸಂರಕ್ಷಣಾ ಸಮಿತಿ ಸಹಯೋಗದಲ್ಲಿ ಬೀದರ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಚಿವರಾದ ಈಶ್ವರ ಬಿ. ಖಂಡ್ರೆ, ರಹೀಂ ಖಾನ್‌ ಹಾಗೂ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು
ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ ಮತ್ತು ಸಂವಿಧಾನ ಸಂರಕ್ಷಣಾ ಸಮಿತಿ ಸಹಯೋಗದಲ್ಲಿ ಬೀದರ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಚಿವರಾದ ಈಶ್ವರ ಬಿ. ಖಂಡ್ರೆ, ರಹೀಂ ಖಾನ್‌ ಹಾಗೂ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು    

ಬೀದರ್‌: ‘ಈ ಸಲದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡಿಯೇ ತೀರುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ ಮತ್ತು ಸಂವಿಧಾನ ಸಂರಕ್ಷಣಾ ಸಮಿತಿ ಸಹಯೋಗದಲ್ಲಿ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಅಪಾಯದಲ್ಲಿದೆ. ಬಿಜೆಪಿ ಸರ್ಕಾರ ಸಂವಿಧಾನವನ್ನೇ ಬದಲಾಯಿಸುವ ಮಾತನಾಡುತ್ತಿದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡೇ ಮಾಡುತ್ತದೆ. ಈಗಾಗಲೇ ಜನ ಭಯಭೀತಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಮುಂದಿನ ದಿನಗಳನ್ನು ಊಹಿಸಿಕೊಳ್ಳುವುದೂ ಕಷ್ಟವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸಮ ಸಮಾಜ ಸಾಕಾರ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಎಲ್ಲರೂ ಆತ್ಮಗೌರವದಿಂದ ಬದುಕಬೇಕು ಎಂಬುದು ಕಾಂಗ್ರೆಸ್ ಪಕ್ಷದ ಉದ್ದೇಶವಾಗಿದೆ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಮೀಸಲಾತಿ ಜಾರಿಯ ಮೂಲಕ ವಂಚಿತರಿಗೆ, ಶೋಷಿತರಿಗೆ, ದಮನಿತರಿಗೆ, ದಲಿತರಿಗೆ ಸಾಮಾಜಿಕ ನ್ಯಾಯ ನೀಡುವ ಕಾರ್ಯ ಮಾಡಿದೆ’ ಎಂದರು.

ADVERTISEMENT

‘ಬಿಜೆಪಿಯವರು ದೇಶದ ಅಭಿವೃದ್ಧಿ ಮಾಡದೆ, ಒಡೆದಾಳುವ ತಂತ್ರ ಅನುಸರಿಸುತ್ತಿದ್ದಾರೆ. ಜಾತಿ, ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಧರ್ಮ ಧರ್ಮಗಳ ನಡುವೆ ಒಡಕು ಮೂಡಿಸುತ್ತಿದ್ದಾರೆ. ಅಣ್ಣ ತಮ್ಮಂದಿರಂತೆ ಬಾಳುತ್ತಿರುವ ನಮ್ಮ ನಮ್ಮಲ್ಲಿ ಜಗಳ ಹಚ್ಚಿ ಅವರು ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುತ್ತಿದ್ದಾರೆ’ ಎಂದರು.

‘ಈ ಕ್ಷೇತ್ರದ ಹಾಲಿ ಸಂಸದ ಭಗವಂತ ಖೂಬಾ, ಜಿಲ್ಲೆಗಾಗಲಿ, ಕ್ಷೇತ್ರಕ್ಕಾಗಲಿ ಯಾವುದೇ ಕೊಡುಗೆ ನೀಡಿಲ್ಲ. ಯಾರನ್ನೂ ಕೇಳಿದರೂ ಸಂಸದರು ತಮ್ಮ ಕ್ಷೇತ್ರಕ್ಕೆ ಬಂದಿಲ್ಲ ಎನ್ನುತ್ತಾರೆ. ಅವರ ಕೊಡುಗೆ ಏನು ಎಂದರೆ ಶೂನ್ಯ ಎನ್ನುತ್ತಾರೆ. ಬರ ಬಂದಾಗ ಕೇಂದ್ರ ಸರ್ಕಾರ ಪರಿಹಾರ ನೀಡಲಿಲ್ಲ, ಪ್ರವಾಹ ಬಂದಾಗಲೂ ಪ್ರಧಾನಿ ಬರಲಿಲ್ಲ, ಸೂಕ್ತ ಪರಿಹಾರ ನೀಡಲಿಲ್ಲ. ಕೇಂದ್ರ ಸಚಿವರೂ ಆದ ಸಂಸದ ಖೂಬಾ ಬಾಯಿ ತೆರೆಯಲಿಲ್ಲ. ಪ್ರಧಾನಿ ಎದುರು ಮಂಡಿಯೂರಿ ಕೂರುವ, ಗಡ ಗಡ ನಡುಗುವ ಇವರನ್ನು ಈ ಬಾರಿ ತಿರಸ್ಕರಿಸಿ, ನಮ್ಮ ಜಿಲ್ಲೆಯ ಮತ್ತು ರಾಜ್ಯದ ಧ್ವನಿಯಾಗುವ ಸಾಗರ್ ಈಶ್ವರ ಖಂಡ್ರೆಯವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ’ ಎಂದು ಮನವಿ ಮಾಡಿದರು.

ಸಚಿವ ರಹೀಂ ಖಾನ್ ಮಾತನಾಡಿ, ‘ಎಲ್ಲ ಜಾತಿ, ಜನಾಂಗದವರೂ ಈ ಬಾರಿ ರಾಜ್ಯದ ಹಿತಕ್ಕಾಗಿ, ರಾಷ್ಟ್ರದ ಹಿತಕ್ಕಾಗಿ ಮತ್ತು ಬೀದರ್ ಒಳಿತಿಗಾಗಿ ವಕೀಲ್ ಸಾಬ್ ಸಾಗರ್ ಈಶ್ವರ ಖಂಡ್ರೆ ಅವರಿಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು.

ಅನಿಲ್ ಕುಮಾರ್ ಬೇಲ್ದಾರ್‌ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ಅಬ್ದುಲ್‌ ಮನ್ನಾನ್ ಸೇಠ್, ಅಮೃತರಾವ್ ಚಿಮಕೋಡೆ ಮತ್ತಿತರರು ಉಪಸ್ಥಿತರಿದ್ದರು.

‘ಕ್ರೈಸ್ತರ ಸೇವೆ ದೊಡ್ಡದು’
‘ಕ್ರೈಸ್ತರ ಸಮಾಜ ಸೇವೆ ಮತ್ತು ಜನಸೇವೆ ಅತ್ಯಂತ ದೊಡ್ಡದು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು. ಬೀದರ್ ಮಂಗಲಪೇಟ್‌ನ ಮೆಥೋಡಿಸ್ಟ್ ಚರ್ಚ್‌ಗೆ ಸೋಮವಾರ ಭೇಟಿ ನೀಡಿ ಪಾದ್ರಿ ಬಿಷಪ್ ಕರ್ಕರೆ ಹಾಗೂ ಅಲ್ಲಿ ಸೇರಿದವರೊಂದಿಗೆ ಮಾತನಾಡಿದ ಅವರು ‘ಆಸ್ಪತ್ರೆಗಳಲ್ಲಿ ಶುಶ್ರೂಷಕರಾಗಿ ಕೆಲಸ ಮಾಡುವ ಕ್ರೈಸ್ತ ಧರ್ಮೀಯ ನರ್ಸ್‌ಗಳು ರೋಗಿಗಳಿಗೆ ಮಾಡುತ್ತಿರುವ ಸೇವೆ ಅನುಪಮವಾದದ್ದು. ಅದೇ ರೀತಿ ನೂರಾರು ಕ್ರೈಸ್ತ ಮಿಷನರಿಗಳು ಈ ಸಮಾಜದ ಏಳಿಗೆಗೆ ಉತ್ತಮ ಕೊಡುಗೆ ನೀಡಿವೆ. ಜನಸೇವೆಯ ಮೂಲಕ ಸಾರ್ಥಕತೆ ಪಡೆದಿವೆ. ಮದರ್ ತೆರೇಸಾ ಅವರು ಈ ನಿಟ್ಟಿನಲ್ಲಿ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದ್ದಾರೆ. ಕನ್ನಡದ ಮೊಟ್ಟ ಮೊದಲ ನಿಘಂಟು ರಚಿಸಿದ ಫಾದರ್‌ ರೆವರೆಂಡ್ ಕಿಟೆಲ್‌ ಅವರು ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಸೇವಾ ಮನೋಭಾವದಿಂದ ಕೆಲಸ ಮಾಡುವ ಈ ಸಮಾಜದ ಜನರು ಬೀದರ್‌ನಲ್ಲಿ ಸಹೋದರರಂತೆ ಬಾಳುತ್ತಿದ್ದಾರೆ’ ಎಂದರು. ಸಚಿವ ರಹೀಂ ಖಾನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.