ADVERTISEMENT

ಕಮಲನಗರ: ನರೇಗಾ ಅನುದಾನ ಬಳಸಿ ಸುಸಜ್ಜಿತ ಚಿತಾಗಾರಗಳ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 8:02 IST
Last Updated 21 ಅಕ್ಟೋಬರ್ 2024, 8:02 IST
ಕಮಲನಗರ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಸುಸಜ್ಜಿತ ವಾಗಿ ನಿರ್ಮಾಣ ಗೊಂಡಿರುವ ಚಿತಾಗಾರ ಕಟ್ಟಡ.
ಕಮಲನಗರ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಸುಸಜ್ಜಿತ ವಾಗಿ ನಿರ್ಮಾಣ ಗೊಂಡಿರುವ ಚಿತಾಗಾರ ಕಟ್ಟಡ.   

ಕಮಲನಗರ: ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾದಂತೆ ವ್ಯಾಪ್ತಿಯೂ ಹೆಚ್ಚಾಗುತ್ತಲೇ ಇದೆ. ಬಹಳ ದಿನಗಳಿಂದ ಚಿತಾಗಾರ ಇರದಿದ್ದರಿಂದ ರೇಲ್ವೆ ವಿಭಾಗದ ಸ್ಥಳದಲ್ಲಿ ಶವಗಳಿಗೆ ಅಗ್ನಿ ನೀಡಿ ಸಂಸ್ಕಾರ ಮಾಡುವ ಪರಿಸ್ಥಿತಿ ಇತ್ತು. ಮಳೆಗಾಲದಲ್ಲಿ ಶವಗಳು ಸಂಪೂರ್ಣವಾಗಿ ಸುಡುತ್ತಿರಲಿಲ್ಲ. ಮತ್ತೆ ಮರುದಿನ ಬಂದು ಬೆಂಕಿ ಹಚ್ಚುವ ಪರಿಸ್ಥಿತಿ ಇತ್ತು. ಸದ್ಯ ಸುಸಜ್ಜಿತ ಚಿತಾಗಾರ ನಿರ್ಮಾಣ ಮಾಡಲಾಗಿದೆ.

‘ತಾಲ್ಲೂಕಿನಲ್ಲಿ ಬೇಳಕುಣಿ(ಭೊ)-1, ಚಿಮೇಗಾಂವ-1, ಭವಾನಿ ಬೀಜಲಗಾಂವ-1, ಹಂದಿಕೇರಾ-1, ದಾಬಕಾ-1, ಡಿಗ್ಗಿ-1, ಡೋಣಗಾಂವ-(ಎಂ)-1, ಕಮಲನಗರ-1, ಬಾಲೂರ-1, ಖೇಡ್-‌1, ಸಂಗಮ-2, ಮುಧೋಳ-1, ತೋರಣಾ-1, ಮುಧೋಳ(ಕ)-1, ಸೋನಾಳ 1 ಸೇರಿ ಒಟ್ಟು 16 ಚಿತಾಗಾರಗಳು ಇವೆ. ಮುಂದಿನ ದಿನಗಳಲ್ಲಿ ಉಳಿದ ಗ್ರಾಮಗಳಲ್ಲೂ ಚಿತಾಗಾರ ಮಾಡಿಸುತ್ತೇವೆ’ ಎಂದು ತಾ.ಪಂ ಸಹಾಯಕ ನಿರ್ದೇಶಕ ಹಣಮಂತರಾಯ ಕೌಟಗೆ ತಿಳಿಸಿದರು.

‘ಚಿತಾಗಾರ ನಿರ್ಮಾಣ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿತ್ತು. ಹೀಗಾಗಿ ನರೇಗಾ ಯೋಜನೆ ಬಳಸಿಕೊಂಡು ಸುಸಜ್ಜಿತವಾದ ಚಿತಾಗಾರವನ್ನು ನಿರ್ಮಿಸಲಾಗಿದೆ’ ಎಂದು ಕಮಲನಗರ ಪಿಡಿಒ ರಾಜಕುಮಾರ ತಂಬಾಕೆ ತಿಳಿಸಿದ್ದಾರೆ.

ADVERTISEMENT

ಪಿಲ್ಲರ್‌ ನಿರ್ಮಿಸಿ ಚಿತಾಗಾರ ಕಟ್ಟಲಾಗಿದೆ. ಒಳಗಡೆ ಬೆಡ್ ಹಾಕಿ ಮೇಲೆ ತಗಡು ಅಳವಡಿಸಿದ್ದು ಹೊಗೆ ಹೋಗಲು ಸ್ಥಳ ಬಿಡಲಾಗಿದೆ. ಚಿತಾಗಾರದ ಸುತ್ತ ತಂತಿಯ ಬೇಲಿ ಹಾಕಲಾಗಿದೆ. ಶವ ಸಂಸ್ಕಾರಕ್ಕೆ ಬಂದ ಜನರಿಗೆ ಕುಳಿತುಕೊಳ್ಳಲು ಆಸನಗಳನ್ನೂ ಅಳವಡಿಸಲಾಗಿದೆ. 

ಖಾಲಿ ಸ್ಥಳದಲ್ಲಿ ಪಂಚಾಯಿತಿ ವತಿಯಿಂದ ಸಸಿಗಳನ್ನು ಹಚ್ಚಲಾಗಿದೆ. ಒಂದು ಚಿತಾಗಾರ ನಿರ್ಮಾಣಕ್ಕೆ ₹4.48 ಲಕ್ಷ ಖರ್ಚಾಗಿದೆ. ಇನ್ನೂ ಕುಡಿಯುವ ನೀರಿಗಾಗಿ ಕೊಳವೆಬಾವಿ ಹಾಕಿಸಿ ಬಂದವರಿಗೆ ಕಾಲು ತೊಳೆದುಕೊಳ್ಳಲು ನೀರಿನ ತೊಟ್ಟಿ ನಿರ್ಮಿಸುವ ವಿಚಾರವಿದೆ ಎಂದು ಪಿಡಿಒ ರಾಜಕುಮಾರ ತಂಬಾಕೆ ತಿಳಿಸಿದ್ದಾರೆ.

ಶವ ಸಂಸ್ಕಾರಕ್ಕೆ ಸುಸಜ್ಜಿತವಾದ ಚಿತಾಗಾರ ನಿರ್ಮಾಣವಾಗಿದೆ. ಆದರೆ ಸಮರ್ಪಕ ರಸ್ತೆ ಇಲ್ಲ. ಶವಾಗಾರಕ್ಕೆ ಆದಷ್ಟು ಬೇಗ ರಸ್ತೆ ಮಾಡಿಸಿದರೆ ಸೂಕ್ತ ಎನ್ನುತ್ತಾರೆ ಕಮಲನಗರದ ಜನ.

ತಾಲ್ಲೂಕಿನಾದ್ಯಂತ 16 ಸುಸಜ್ಜಿತವಾದ ಚಿತಾಗಾರಗಳನ್ನು ನಿರ್ಮಿಸಲಾಗಿದೆ. ಅಂದಾಜು ₹80ರಿಂದ ₹90 ಲಕ್ಷದವರೆಗೆ ಖರ್ಚಾಗಿರುತ್ತದೆ. ಸುಮಾರು ವರ್ಷಗಳಿಂದ ಬಡವರಿಗೆ ಶವಸಂಸ್ಕಾರ ಮಾಡಲು ಬಹಳ ತೊಂದರೆಯಾಗುತ್ತಿತ್ತು. ಅನೇಕ ಅರ್ಜಿಗಳು ಬಂದಿದ್ದವು ಮತ್ತು ಎಲ್ಲ ಗ್ರಾಮಗಳಲ್ಲಿ ಚಿತಾಗಾರಗಳ ನಿರ್ಮಾಣದ ಅತಿ ಜರೂರಿ ಇತ್ತು. ಆದ್ದರಿಂದ ಸರ್ಕಾರದ ಅನುಕೂಲ ಕೂಡ ಇತ್ತು. ಹೀಗಾಗಿ ಚಿತಾಗಾರ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಬಡವರ ಹೆಸರಿನಲ್ಲಿ ಎಲ್ಲರಿಗೂ ಅನುಕೂಲವಾಗಿದೆ.
ಮಾಣಿಕರಾವ ಪಾಟೀಲ ತಾಲ್ಲೂಕು ಪಂಚಾಯಿತಿ ಇಒ
ಅನೇಕ ವರ್ಷಗಳಿಂದ ನಾಲ್ಕೈದು ಬಡಾವಣೆಯ ಜನರಿಗೆ ವಿಶೆಷವಾಗಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಜನರಿಗೂ ಸ್ಮಶಾನಭೂಮಿಯ ಸಮಸ್ಯೆಯು ಬಹಳ ದಿನಗಳಿಂದ ಕಾಡುತ್ತಿತ್ತು. ಆದರೆ ಸರ್ಕಾರದ ಆದೇಶದ ಮೇರೆಗೆ ತಾಲ್ಲೂಕು ಆಡಳಿತದಿಂದ ಈ ರೀತಿಯ ಸುಸಜ್ಜಿತವಾದ ಚಿತಾಗಾರಗಳನ್ನು ಮಾಡಿಕೊಟ್ಟಿದ್ದರಿಂದ ಶವ ಸಂಸ್ಕಾರಕ್ಕೆ ಅನುಕೂಲವಾಗಿದೆ. ಗೋವಿಂದರಾವ ತಾಂದಳೆ ತಾಲ್ಲೂಕು ಘಟಕದ ಅಧ್ಯಕ್ಷ ದಲಿತ ಸಂಘರ್ಷ ಸಮಿತಿ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಜನರಿಗೆ ಸಹಾಯವಾಗಲೆಂದು ಸರ್ಕಾರ ಮಾಡಿರುವುದರಿಂದ ಸ್ಥಳಗಳ ಸಮಸ್ಯೆಗಳಿರದ ಕಡೆಗಳಲ್ಲಿ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಇನ್ನೂ ಕಾರ್ಯ ಪ್ರಗತಿಯಲ್ಲಿವೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿ ಎಲ್ಲೇಲ್ಲಿ ಆಗಬೇಕಾಗಿದೆಯೋ ಅಲ್ಲಿ ಪಿಡಿಒಗಳು ಮಾಡುವಂತೆ ತಿಳಿಸುತ್ತೇವೆ.
ಹನಮಂತರಾಯ ಕೌಟಗೆ ಸಹಾಯಕ ನಿರ್ದೇಶಕ ತಾ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.