ADVERTISEMENT

ಬಸವಕಲ್ಯಾಣ | ಜೋಳದ ಬಣವೆ ನೀರುಪಾಲು; ಕುಸಿದ ಸೇತುವೆ

ಕೊಹಿನೂರ ಹೋಬಳಿಯಲ್ಲಿ ಅಪಾರ ಹಾನಿ, ರಸ್ತೆ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 16:29 IST
Last Updated 12 ಜೂನ್ 2024, 16:29 IST
ಬಸವಕಲ್ಯಾಣ ತಾಲ್ಲೂಕಿನ ಖೇರ್ಡಾ ರಸ್ತೆ ಸೇತುವೆಗೆ ಹಾನಿ ಆಗಿರುವುದು
ಬಸವಕಲ್ಯಾಣ ತಾಲ್ಲೂಕಿನ ಖೇರ್ಡಾ ರಸ್ತೆ ಸೇತುವೆಗೆ ಹಾನಿ ಆಗಿರುವುದು   

ಬಸವಕಲ್ಯಾಣ: ತಾಲ್ಲೂಕಿನ ಕೊಹಿನೂರ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯರಾತ್ರಿ ಸುರಿದ ಮಳೆಗೆ ಹೊಲಗಳಲ್ಲಿನ ಜೋಳದ ಕಣಕಿಯ ಬಣವೆಗಳು ನೀರು ಪಾಲಾಗಿವೆ. ಹತ್ತಕ್ಕೂ ಅಧಿಕ ಸೇತುವೆಗಳು ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ನಾಲೆಯ ನೀರು ನುಗಿದ್ದರಿಂದ ಕೊಹಿನೂರ ವಾಡಿಯ ಸರ್ವೇ ನಂ. 155 ರಿಂದ ಸರ್ವೇ ನಂ.178 ರವರೆಗಿನ ಹೊಲಗಳಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿದೆ. `ಹೊಲಗಳಲ್ಲಿದ್ದ ಅನೇಕ ಬಣವೆಗಳು ನೀರಿನೊಂದಿಗೆ ಹೋಗಿದ್ದರಿಂದ ಸುಮಾರು 10 ಲಾರಿಗಳಷ್ಟು ಜೋಳದ ಕಣಕಿ ಹಾಳಾಗಿದೆ' ಎಂದು ಕೊಹಿನೂರ ವಾಡಿಯ ಮಧುಕರ ಘೋಡಕೆ ತಿಳಿಸಿದ್ದಾರೆ.

`ಸರಜವಳಗಾ ಹಾಗೂ ಕೊಹಿನೂರ ಸಮೀಪದ ರಸ್ತೆ ಹಾಳಾಗಿದ್ದು ಅಲ್ಲಿನ ನೀರು ಹೊಲಗಳಿಗೆ ನುಗ್ಗಿದ್ದರಿಂದ ಮಚೇಂದ್ರ ಲಕಮಾಜಿ, ಧರ್ಮಣ್ಣ ಲಕಮಾಜಿ, ಬಸವರಾಜ ಚನ್ನಪ್ಪ, ಶಿವಪುತ್ರ ಮೂಲಗೆ, ಸೂರ್ಯಕಾಂತ ಮೂಲಗೆ, ಪವನ ಮತ್ತಿತರರ ನೂರಾರು ಎಕರೆ ಹೊಲಗಳಿಗೆ ಹಾನಿಯಾಗಿದೆ' ಎಂದು ರೈತ ಪ್ರಶಾಂತ ಲಕಮಾಜಿ ಹೇಳಿದ್ದಾರೆ.

ADVERTISEMENT

ಸೇತುವೆ ಮತ್ತು ರಸ್ತೆ: ಚಿತ್ತಕೋಟಾ- ಬಟಗೇರಾ ರಸ್ತೆಯಲ್ಲಿನ ಸೇತುವೆ, ವಡ್ಡರ್ಗಾ- ಭೋಸ್ಗಾ ಮಧ್ಯದ ಸೇತುವೆ, ಅಟ್ಟೂರ್-ಅಟ್ಟೂರ್ ತಾಂಡಾ ಮಧ್ಯದ ಸೇತುವೆ, ಖೇರ್ಡಾ-ಲೇಂಗಟಿ ಸೇತುವೆ, ಲಾಡವಂತಿ-ಪಹಾಡ ಸೇತುವೆ, ಸರಜವಳಗಾ-ಕೊಹಿನೂರ ರಸ್ತೆ ಸೇತುವೆ, ಶಿರೂರಿ-ಭೋಸ್ಗಾ ಸೇತುವೆ, ರಾಮತೀರ್ಥ-ಗದ್ಲೇಗಾಂವ ತಾಂಡಾ ಸೇತುವೆ, ಲಾಡವಂತಿ-ರಾಮತೀರ್ಥ ಮಧ್ಯದ ಸೇತುವೆ ಮತ್ತು ರಸ್ತೆಗಳಿಗೆ ಹಾನಿಯಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಶಾಸಕ ಶರಣು ಸಲಗರ, ತಹಶೀಲ್ದಾರ್ ಶಾಂತಗೌಡ ಬಿರಾದಾರ, ಕೃಷಿ ಸಹಾಯಕ ನಿರ್ದೇಶಕ ಮಾರ್ತಂಡ ಮಚಕೂರಿ, ಎಇಇ ಧನರಾಜ ಚವಾಣ ಮತ್ತೀತರರು ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕೃಷಿ ಸಚಿವರಿಗೆ ಮನವಿ

ಬಸವಕಲ್ಯಾಣ: ‘ತಾಲ್ಲೂಕಿನಲ್ಲಿ ಸುರಿದ ಧಾರಾಕಾರ ಮಳೆಗೆ ಹಾನಿ ಆಗಿರುವ ಬಗ್ಗೆ ಕೃಷಿ ಸಚಿವರಿಗೆ ಭೇಟಿಯಾಗಿ ಮನವಿ ಸಲ್ಲಿಸಿ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು’ ಎಂದು ಶಾಸಕ ಶರಣು ಸಲಗರ ಹೇಳಿದ್ದಾರೆ.

`ಮಳೆ ಹಾನಿ ಪ್ರದೇಶಕ್ಕೆ ಭೇಟಿನೀಡಿ ಪರಿಶೀಲಿಸಿದ್ದು ಸಾವಿರ ಎಕರೆಯಲ್ಲಿನ ಜಮೀನಿಗೆ ಹಾನಿಯಾಗಿದೆ. ನೂರು ಬಾವಿಗಳು ಮುಚ್ಚಿವೆ. ಹತ್ತಕ್ಕೂ ಅಧಿಕ ಸೇತುವೆ ಮತ್ತು ರಸ್ತೆಗಳು ಕುಸಿದಿದ್ದರಿಂದ ತೊಂದರೆ ಆಗಿದೆ' ಎಂದಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ರಾಮತೀರ್ಥ- ಗದ್ಲೇಗಾಂವ ರಸ್ತೆಯಲ್ಲಿನ ಸೇತುವೆಗೆ ಹಾನಿ ಆಗಿದೆ
ಬಸವಕಲ್ಯಾಣ ತಾಲ್ಲೂಕಿನ ಬಟಗೇರಾ- ಚಿತ್ತಕೋಟಾ ರಸ್ತೆಯಲ್ಲಿನ ಸೇತುವೆ ಕುಸಿದಿರುವುದು
ಬಸವಕಲ್ಯಾಣ ತಾಲ್ಲೂಕಿನ ಲಾಡವಂತಿ ಸೇತುವೆ ಹಾನಿಯಾದ ಸ್ಥಳಕ್ಕೆ ಶಾಸಕ ಶರಣು ಸಲಗರ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಬಸವಕಲ್ಯಾಣ ತಾಲ್ಲೂಕಿನ ಖೇರ್ಡಾ ಸೇತುವೆಗೆ ಹಾನಿ ಆಗಿರುವುದನ್ನು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಂಗಳವಾರ ಪರಿಶೀಲಿಸಿದರು. ಶಾಸಕ ಶರಣು ಸಲಗರ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.