ADVERTISEMENT

ಅಧಿಕಾರಿಗಳಿಂದ ಭ್ರಷ್ಟಾಚಾರ: ಲೋಕಾಯುಕ್ತ ತನಿಖೆಗೆ ಪುರಸಭೆಯ ಸದಸ್ಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 14:25 IST
Last Updated 25 ನವೆಂಬರ್ 2024, 14:25 IST
ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾತನಾಡಿದರು.
ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾತನಾಡಿದರು.   

ಹುಮನಾಬಾದ್: ಹಳಿಖೇಡ್ ಬಿ ಪುರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಹಿಂದೆ ಆಡಳಿತ ಅಧಿಕಾರಿಗಳ ಅವಧಿಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದ್ದು, ಲೋಕಾಯುಕ್ತ ಅಧಿಕಾರಿಗಳಿಂದ ತನಿಖೆ ನಡೆಸಬೇಕು ಎಂದು ಸರ್ವ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಶಾಸಕ ಡಾ.‌ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಹಾಗೂ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರು ಬೆಂಬಲಿಸಿ ತನಿಖೆಗೆ ಸೂಚನೆ ನೀಡಿದರು.

ಕುಡಿಯುವ ನೀರು ಪೂರೈಕೆ ಸಂಬಂಧ ಕೊಳವೆ ಬಾವಿಗಳ ಮೋಟರ್, ಪೈಪ್‌ಲೈನ್, ಎಲೆಕ್ಟ್ರಿಕ್ ಸಾಮಗ್ರಿಗಳಲ್ಲಿ ಅವ್ಯವಹಾರ ಆಗಿದೆ. ಹೀಗಾಗಿ ಇದ್ದನ್ನು ತನಿಖೆ ನಡೆಸಬೇಕು ಎಂದರು.

ಪುರಸಭೆಯಲ್ಲಿ ಹಣ ನೀಡದಿದ್ದರೆ, ಯಾವುದೇ ಕೆಲಸಗಳು ಆಗುವುದಿಲ್ಲ. ನಿವೇಶನಗಳು ಕಾನೂನು ಬಾಹಿರ ಇದ್ದರೂ ಅವರಿಗೆ ಖಾತಾ ನೀಡುತ್ತಾರೆ. ಕಾನೂನು ಪ್ರಕಾರ ಇದ್ದ ನಿವೇಶನಗಳಿಗೆ ಖಾತಾ ಮಾಡದೇ ಸತಾಯಿಸುತ್ತಿದ್ದಾರೆ. ಕೊನೆಗೆ ₹10 ರಿಂದ 20 ಸಾವಿರ ಹಣದ ಬೇಡಿಕೆ ಇಟ್ಟು ಖಾತಾ ನೀಡುತ್ತಾರೆ ಎಂದು ಸದಸ್ಯರಾದ ಮಹಾಂತಯ್ಯ ತೀರ್ಥ, ಮಲ್ಲಿಕಾರ್ಜುನ ಪ್ರಭಾ ಆರೋಪಿಸಿದರು.

ADVERTISEMENT

ಇಲ್ಲಿಯ ಹನುಮಾನ್ ಮಂದಿರದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ರಸ್ತೆ ಅಗಲೀಕರಣ ಸಂಬಂಧಿಸಿದ ಪ್ರಶ್ನೆಗೆ, ಈಗಾಗಲೇ 36 ಅಡಿ ರಸ್ತೆ ಅಳತೆ ಮಾಡಲಾಗಿದೆ ಎಂದು ಅಧಿಕಾರಿ ಸಭೆಗೆ ತಿಳಿಸಿದರು.‌ ಇದಕ್ಕೆ ಕೆಲ ದಸ್ಯರು 36 ಬಿಟ್ಟು 40 ಅಡಿ ರಸ್ತೆ ಅಳತೆ ಮಾಡಿ ಕಾಮಗಾರಿ ಆರಂಭಿಸಬೇಕು ಎಂದು ಮಲ್ಲಿಕಾರ್ಜುನ ಪ್ರಭಾ, ಯುಸುಫ್ ಸೌದಾಗರ್, ಮಹಾಂತಯ್ಯ ತೀರ್ಥ, ನಾಗರಾಜ್ ಹಿಬಾರೆ, ಅಬ್ದುಲ್ ರಜಾಕ್, ಸಾಜಿದ್ ಪಟೇಲ್ ಒತ್ತಾಯಿಸಿದರು.

ಹಳಿಖೇಡ್ ಬಿ ಪಟ್ಟಣದ ಅಭಿವೃದ್ಧಿಗಾಗಿ ಈಗಾಗಲೇ ನಾಗಣ್ಣ ದೇವರ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ₹4 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲು ಅನುದಾನ ‌ನೀಡಲಾಗಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ತಿಳಿಸಿದರು. ಪಟ್ಟಣದ ಬಹುತೇಕ ರಸ್ತೆಗಳಲ್ಲಿ ವಿದ್ಯುತ್ ಪರಿವರ್ತಕಗಳ ಇವೆ. ಹೀಗಾಗಿ ತಕ್ಷಣ ಇವುಗಳನ್ನು ತೆರವು ಮಾಡಿ ಬೇರೆಡೆ ಅಳವಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ, ಪುರಸಭೆ ಅಧ್ಯಕ್ಷೆ ಜಗದೇವಿ, ಉಪಾಧ್ಯಕ್ಷ ನಸರಿನ್ ಬೇಗಂ, ಪುರಸಭೆ ಮುಖ್ಯಾಧಿಕಾರಿ ಶಂಕರ್ ಹಾಜರಿದ್ದರು.

ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ ಬಿ ಪುರಸಭೆಯ ಸಾಮಾನ್ಯ ಸಭೆ ಸೋಮವಾರ ಜರುಗಿತು
ಅಭಿವೃದ್ದಿಗಾಗಿ ಹುಮನಾಬಾದ್ ಪಟ್ಟಣಕ್ಕೆ ₹15 ಕೋಟಿ ಚಿಟಗುಪ್ಪ ಹಳಿಖೇಡ್ ಬಿ ಪಟ್ಟಣಗಳಿಗೆ ತಲಾ ₹ 10 ಕೋಟಿ ಅನುದಾನ ನೀಡಬೇಕು ಎಂದು ಈಗಾಗಲೇ ಪೌರಾಡಳಿತ ಸಚಿವರಿಗೆ ಮನವಿ ಸಲ್ಲಿಸಿರುವೆ.
ಡಾ.ಸಿದ್ದಲಿಂಗಪ್ಪ ಪಾಟೀಲಶಾಸಕ ಹುಮನಾಬಾದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.