ADVERTISEMENT

ಬೀದರ್: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಾಬೀತು,ಕಾರಂಜಾ ಎಂಜಿನಿಯರ್‌ಗೆ 4 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 28 ಮೇ 2024, 14:47 IST
Last Updated 28 ಮೇ 2024, 14:47 IST
   

ಬೀದರ್‌: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವುದು ರುಜುವಾತು ಆಗಿರುವುದರಿಂದ ಕಾರಂಜಾ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಫಿರೋಜುದ್ದಿನ್‌ ಖಮ್ರೊದ್ದಿನ್‌ ಖಾನ್‌ ಅವರಿಗೆ ಇಲ್ಲಿನ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಎಂ. ಆನಂದಶೆಟ್ಟಿ ಅವರು ನಾಲ್ಕು ವರ್ಷ ಜೈಲು ಶಿಕ್ಷೆ, ₹25 ಲಕ್ಷ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ.

ಅಪರಾಧಿಯು ಆದಾಯಕ್ಕಿಂತ ₹6.43 ಲಕ್ಷ (ಶೇ 20.65) ಹೆಚ್ಚಿನ ಅಕ್ರಮ ಆಸ್ತಿ ಹೊಂದಿರುವುದು ಸಾಬೀತಾಗಿರುವುದರಿಂದ ಲಂಚ ನಿಷೇಧ ಕಾಯ್ದೆಯ ಕಲಂ 13(2) ಪ್ರಕಾರ ಜೈಲು ಶಿಕ್ಷೆ ವಿಧಿಸಲಾಗಿದೆ. ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿ ಸಂದರ್ಭದಲ್ಲಿ ದೊರೆತ ಚಿನ್ನಾಭರಣ, ನಗದು ಹಣ ಜಪ್ತಿ ಮಾಡಬೇಕೆಂದು ತೀರ್ಪಿನಲ್ಲಿ ತಿಳಿಸಿದ್ದಾರೆ.

ಇಲ್ಲಿನ ಗುರುನಗರ ಕಾಲೊನಿ ನಿವಾಸಿಯಾಗಿರುವ ಫಿರೊಜುದ್ದಿನ್‌ 1982ರಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್‌ ಆಗಿ ಕೆಲಸಕ್ಕೆ ಸೇರಿದ್ದರು. ಆನಂತರ ಬೀದರ್‌, ಹುಮನಾಬಾದ್‌ನಲ್ಲಿ ಕೃಷ್ಣ ಭಾಗ್ಯ ಜಲ ನಿಗಮ, ಕಾರಂಜಾ ಕಾಲುವೆ ನಿರ್ಮಾಣ ಯೋಜನೆ, ಕಾರಂಜಾ ಏತ ನೀರಾವರಿ, ಜಲ ಸಂಪನ್ಮೂಲ ಇಲಾಖೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಕಾರಂಜಾ ಕಾಲುವೆ ನಿರ್ಮಾಣ ಯೋಜನೆಯ ಹುಮನಾಬಾದ್‌ ಕ್ಯಾಂಪ್‌ನಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು 2008ರ ಫೆಬ್ರುವರಿ 6ರಂದು ಏಕಕಾಲಕ್ಕೆ ಅವರ ಗುರುನಗರದ ಮನೆ, ನೆಹರೂ ಕ್ರೀಡಾಂಗಣ ಸಮೀಪದಲ್ಲಿನ ಅವರ ಮಾವ ಲೈಕೊದ್ದಿನ್‌ ಮನೆ, ಗೋಲೆಖಾನಾದಲ್ಲಿ ಅಣ್ಣ ಎಮ್‌.ಝಡ್‌. ಬಾಬರ್‌ ಅವರ ಮನೆಗಳ ಮೇಲೆ ದಾಳಿ ನಡೆಸಿದ್ದರು. ಹುಮನಾಬಾದ್‌ ಕಚೇರಿಯಲ್ಲಿ ಶೋಧ ನಡೆಸಿದ್ದರು. ಆರೋಪಿಯ ಆದಾಯ, ಸ್ಥಿರಾಸ್ತಿ, ಚರಾಸ್ತಿ, ಖರ್ಚು ವೆಚ್ಚ ಲೆಕ್ಕ ಮಾಡಿದಾಗ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಟಿ.ಜಿ. ರಾಯ್ಕರ್‌ ದೋಷರೋಪಣಾ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಲೋಕಾಯುಕ್ತದ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕೇಶವರಾವ ಶ್ರೀಮಾಳೆ ವಾದ ಮಂಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.