ADVERTISEMENT

ಬ್ರಿಮ್ಸ್‌ನಲ್ಲಿ ಬರಲಿದೆ ‘ಕ್ರಿಟಿಕಲ್‌ ಕೇರ್‌’

₹17 ಕೋಟಿ ವೆಚ್ಚದಲ್ಲಿ ತಲೆ ಎತ್ತಲಿದೆ 50 ಹಾಸಿಗೆಗಳ ಸಾಮರ್ಥ್ಯದ ಹೊಸ ವಿಭಾಗ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 22 ಆಗಸ್ಟ್ 2024, 4:49 IST
Last Updated 22 ಆಗಸ್ಟ್ 2024, 4:49 IST
ಬೀದರ್‌ನ ಬ್ರಿಮ್ಸ್‌ ಕಟ್ಟಡ
–ಸಾಂದರ್ಭಿಕ ಚಿತ್ರ
ಬೀದರ್‌ನ ಬ್ರಿಮ್ಸ್‌ ಕಟ್ಟಡ –ಸಾಂದರ್ಭಿಕ ಚಿತ್ರ   

ಬೀದರ್‌: ನಗರದ ಬೀದರ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಬ್ರಿಮ್ಸ್‌) ‘ಕ್ರಿಟಿಕಲ್‌ ಕೇರ್‌ ಬ್ಲಾಕ್‌’ (ತುರ್ತು ಚಿಕಿತ್ಸಾ ವಿಭಾಗ) ನಿರ್ಮಾಣ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಬರುವ ದಿನಗಳಲ್ಲಿ ಜಿಲ್ಲೆಯ ಜನರಿಗೆ ಅತ್ಯುತ್ತಮ ಚಿಕಿತ್ಸಾ ಸೌಲಭ್ಯ ತುರ್ತಾಗಿ ಲಭಿಸಲಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ಅಡಿಯಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ತಲೆ ಎತ್ತಲಿದೆ. ಈಗಾಗಲೇ ಟೆಂಡರ್‌ ಅಂತಿಮಗೊಂಡಿದ್ದು, ₹17 ಕೋಟಿ ವೆಚ್ಚದಲ್ಲಿ ಹೊಸ ಬ್ಲಾಕ್‌ ನಿರ್ಮಾಣವಾಗಲಿದೆ.

ಹಳೆ ಪಾಲಿಟೆಕ್ನಿಕ್‌ ಕಾಲೇಜಿಗೆ ಸೇರಿದ ಜಾಗದಲ್ಲಿ ಕ್ರಿಟಿಕಲ್‌ ಕೇರ್‌ ನಿರ್ಮಾಣಗೊಳ್ಳಲಿದೆ. ಶೀಘ್ರದಲ್ಲೇ ಹಳೆ ಕಟ್ಟಡದ ತೆರವು ಕಾರ್ಯ ನಡೆಯಲಿದೆ. ಅದಾದ ಬಳಿಕ ಶಂಕುಸ್ಥಾಪನೆ ನೆರವೇರಿಸಿ, ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಒಂದೂವರೆ ವರ್ಷದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ತುರ್ತು ಸೇವೆ ಒದಗಿಸುವ ಗುರಿ ಹಾಕಿಕೊಳ್ಳಲಾಗಿದೆ.

ADVERTISEMENT

ಕೊನೆ ಹಂತಕ್ಕೆ ‘ಕ್ಯಾಥ್‌ಲ್ಯಾಬ್‌’: ಬ್ರಿಮ್ಸ್‌ನಲ್ಲಿ ‘ಕ್ಯಾಥ್‌ಲ್ಯಾಬ್‌’ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಕೊನೆಯ ಹಂತದ ಕೆಲಸ ಪ್ರಗತಿಯಲ್ಲಿದೆ.

ಡಾ. ಶಿವಕುಮಾರ ಶೆಟಕಾರ

ಈಗಾಗಲೇ ಕ್ಯಾಥ್‌ಲ್ಯಾಬ್‌ಗೆ ಬೇಕಿರುವ ಅಗತ್ಯ ಯಂತ್ರಗಳು ಬಂದಿವೆ. ಕಟ್ಟಡ ನಿರ್ಮಾಣ ಪೂರ್ಣಗೊಂಡ ನಂತರ ಅವುಗಳನ್ನು ಅಳವಡಿಸಿ, ಸಾರ್ವಜನಿಕರಿಗೆ ಚಿಕಿತ್ಸೆ ನೀಡುವುದು ಆರಂಭವಾಗಲಿದೆ ಎಂದು ಬ್ರಿಮ್ಸ್‌ ನಿರ್ದೇಶಕ ಡಾ.ಶಿವಕುಮಾರ ಶೆಟಕಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬ್ರಿಮ್ಸ್‌ ನೆಲಮಹಡಿಯಲ್ಲಿ ಸಂಗ್ರಹವಾಗಿರುವ ನೀರು ಹೊರಹಾಕುತ್ತಿರುವುದು
ಸೆಪ್ಟೆಂಬರ್‌ನಲ್ಲಿ ಪಿ.ಜಿ ಕೋರ್ಸ್‌
ಬ್ರಿಮ್ಸ್‌ನಲ್ಲಿ ಹತ್ತು ಹೊಸ ಪಿ.ಜಿ ಕೋರ್ಸ್‌ ನಡೆಸಲು ಅನುಮತಿ ದೊರೆತಿದ್ದು ಸೆಪ್ಟೆಂಬರ್‌ನಲ್ಲಿ ಕೋರ್ಸ್‌ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ‘ಹತ್ತು ಕೋರ್ಸ್‌ಗಳಿಗೆ ಒಟ್ಟು 42 ಸೀಟುಗಳಿವೆ. ಇತ್ತೀಚೆಗೆ ನೀಟ್‌ ಪರೀಕ್ಷೆ ಮುಗಿದಿದ್ದು ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಪಿ.ಜಿ ಕೋರ್ಸ್‌ಗೆ ವಿದ್ಯಾರ್ಥಿಗಳು ಬರಲಿದ್ದಾರೆ’ ಎಂದು ಬ್ರಿಮ್ಸ್‌ ನಿರ್ದೇಶಕ ಡಾ.ಶಿವಕುಮಾರ ಶೆಟಕಾರ ತಿಳಿಸಿದ್ದಾರೆ.
ಬಗೆಹರಿಯದ ಬಾವಿ ನೀರಿನ ಸಮಸ್ಯೆ
ಮಳೆಗಾಲದಲ್ಲಿ ಬ್ರಿಮ್ಸ್‌ ಕಟ್ಟಡದ ನೆಲಮಹಡಿಯಲ್ಲಿರುವ ಪುರಾತನ ಬಾವಿಯಲ್ಲಿ ಸತತ ನೀರಿನ ಪ್ರಮಾಣ ಹೆಚ್ಚಾಗಿ ಅಲ್ಲಿ ಸಂಗ್ರಹವಾಗುತ್ತದೆ. ಈ ನೀರು ಹೊರಹಾಕುವುದೇ ದೊಡ್ಡ ತಲೆನೋವಾಗಿದೆ. ಪ್ರತಿ ವರ್ಷ ಮಳೆಗಾಲ ಬಂತೆಂದರೆ ಬಾವಿಯ ಝರಿಗಳಿಂದ ಅತ್ಯಧಿಕ ಪ್ರಮಾಣದಲ್ಲಿ ನೀರು ಹೊರಬಂದು ನೆಲಮಹಡಿಯಲ್ಲಿ ಸಂಗ್ರಹವಾಗಲು ಶುರುವಾಗುತ್ತದೆ. ನೀರು ಹೊರಹಾಕಲು ಎಂಟು ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಹೆಚ್ಚಿನ ವಿದ್ಯುತ್‌ ಬಿಲ್‌ ಕೂಡ ಬರುತ್ತಿದೆ. ಹೀಗಿದ್ದರೂ ಬಾವಿ ನೀರಿನ ಬಳಕೆ ಕುರಿತು ಇದುವರೆಗೂ ಯಾವುದೇ ಯೋಜನೆ ರೂಪಿಸಿಲ್ಲ. ಕೇವಲ ನೀರನ್ನು ಹೊರಹಾಕಿ ಚರಂಡಿಗೆ ಹರಿ ಬಿಡಲಾಗುತ್ತಿದೆ. ಈ ಸಂಬಂಧ ಬ್ರಿಮ್ಸ್‌ ನಿರ್ದೇಶಕ ಡಾ.ಶಿವಕುಮಾರ ಶೆಟಕಾರ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಬ್ರಿಮ್ಸ್‌ ಕಟ್ಟಡ ಕಟ್ಟುವುದಕ್ಕೂ ಪೂರ್ವದಲ್ಲಿಯೇ ಅಲ್ಲಿ ಬಾವಿ ಇತ್ತು. ಅದರ ಮೇಲೆ ಕಟ್ಟಡ ನಿರ್ಮಿಸಲಾಗಿದೆ. ಮಳೆಗಾಲ ಬಂದಾಗ ಝರಿಗಳಿಂದ ಅಪಾರ ನೀರು ಬರುತ್ತದೆ. ಕಟ್ಟಡಕ್ಕೆ ಯಾವುದೇ ರೀತಿಯ ಸಮಸ್ಯೆ ಆಗಬಾರದೆಂದು ಮೋಟಾರ್‌ ಅಳವಡಿಸಿ ನೀರು ಹೊರಹಾಕಲಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಚೆನ್ನೈ ಮುಂಬೈನಿಂದ ಎಂಜಿನಿಯರ್‌ಗಳನ್ನು ಕರೆಸಲಾಗಿತ್ತು. ಆದರೆ ಸರಿ ಹೋಗಿಲ್ಲ. ಮಳೆಗಾಲ ಮುಗಿದ ನಂತರ ಸಮಸ್ಯೆ ಇರುವುದಿಲ್ಲ ಎಂದು ಹೇಳಿದ್ದಾರೆ.
‘ಕ್ರಿಟಿಕಲ್‌ ಕೇರ್‌’ನಲ್ಲಿ ಏನಿರಲಿದೆ?
ಬ್ರಿಮ್ಸ್‌ ಆರಂಭಗೊಂಡ ದಿನದಿಂದಲೂ ಇದುವರೆಗೂ ನ್ಯುರೊ ಸೇರಿದಂತೆ ಇತರೆ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ ವ್ಯವಸ್ಥೆ ಇಲ್ಲ. ಕ್ರಿಟಿಕಲ್‌ ಕೇರ್‌ ಬಂದ ನಂತರ ಸಾರ್ವಜನಿಕರಿಗೆ ನ್ಯುರೊ ಒಳಗೊಂಡಂತೆ ಎಲ್ಲ ರೀತಿಯ ಚಿಕಿತ್ಸಾ ಸೌಲಭ್ಯ ಸಿಗಲಿದೆ. ಇದಕ್ಕಾಗಿಯೇ ಪ್ರತ್ಯೇಕ 24X7 ವೈದ್ಯರು ಸಿಬ್ಬಂದಿ ಇರಲಿದ್ದಾರೆ. ಪ್ರತಿಯೊಂದು ತುರ್ತು ಚಿಕಿತ್ಸೆಗೆ ಜಿಲ್ಲೆಯ ಜನ ಹೈದರಾಬಾದ್‌ ಸೊಲ್ಲಾಪುರ ಮುಂಬೈ ಪುಣೆ ಕಡೆಗೆ ಮುಖ ಮಾಡುತ್ತಿದ್ದರು. ಬರುವ ದಿನಗಳಲ್ಲಿ ಅದು ತಪ್ಪಲಿದೆ. ಸ್ಥಳೀಯವಾಗಿಯೇ ಚಿಕಿತ್ಸೆ ಸಿಗುವುದರಿಂದ ಆರ್ಥಿಕ ಹೊರೆಯೂ ಸಾಕಷ್ಟು ತಗ್ಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.