ಖಟಕಚಿಂಚೋಳಿ: ಸಮೀಪದ ಡಾವರಗಾಂವ್ ಗ್ರಾಮದಲ್ಲಿ ನಿರಂತರ ಸುರಿದ ಮಳೆಗೆ ನೀರು ನಿಂತು ಬೆಳೆ ಕೊಳೆತಿದೆ
ಖಟಕಚಿಂಚೋಳಿ (ಭಾಲ್ಕಿ): ಹೋಬಳಿಯಾದ್ಯಂತ ಕಳೆದ ಕೆಲ ದಿನಗಳ ಹಿಂದೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಬಹುತೇಕ ಗ್ರಾಮಗಳ ಹೊಲದಲ್ಲಿ ನೀರು ನಿಂತು ಬೆಳೆ ಹಾನಿಯಾಗಿದೆ.
ಹೋಬಳಿಯ ಡಾವರಗಾಂವ್, ಮಾಸಿಮಾಡ, ದಾಡಗಿ ಸೇರಿದಂತೆ ಇನ್ನಿತರ ಗ್ರಾಮಗಳ ಹೊಲಗಳಲ್ಲಿ ನೀರು ನಿಂತು ಬೆಳೆಗಳು ಸಂಪೂರ್ಣ ಹಾಳಾಗಿರುವುದರಿಂದ ರೈತರಿಗೆ ಏನು ಮಾಡಬೇಕು ಎಂಬುದು ತೋಚದಂತಾಗಿದೆ.
’ನಾನು ಎಂಟು ಎಕರೆಯಲ್ಲಿ ಸೊಯಾ, ಹೆಸರು, ತೊಗರಿ ಬೆಳೆದಿದ್ದೇನೆ. ಆದರೆ ಎಡಬಿಡದೆ ಸುರಿದ ಮಳೆ ಹಾಗೂ ಕಾರಂಜಾ ಜಲಾಶಯದಿಂದ ನೀರು ಬಿಟ್ಟಿರುವುದರಿಂದ ಬೆಳೆ ಜಲಾವೃತವಾಗಿದೆ' ಎಂದು ಡಾವರಗಾಂವ್ ಗ್ರಾಮದ ರೈತ ರಾಜಶೇಖರ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಸತತವಾಗಿ ಸುರಿದ ಮಳೆಯಿಂದಾಗಿ ಬೆಳೆಗಳು ಕೊಳೆತು ಹೋಗಿವೆ. ಇದರಿಂದ ಬಹುತೇಕ ಗ್ರಾಮಗಳ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಕೃಷಿ ಅಧಿಕಾರಿಗಳು ಸಮೀಕ್ಷೆ ನಡೆಸಿ ಹೆಚ್ಚಿನ ಪರಿಹಾರ ಸಿಗುವಂತೆ ವರದಿ ಸಲ್ಲಿಸಬೇಕು' ಎಂದು ರೈತ ಮುಖಂಡ ಸಂಜುಕುಮಾರ ಪಾಟೀಲ ಒತ್ತಾಯಿಸುತ್ತಾರೆ.
'ಹೆಚ್ಚಿನ ಮಳೆಯಿಂದ ತೇವಾಂಶ ಹೆಚ್ತಳವಾಗಿ ಬೆಳೆಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿರುವ ರೈತರು 19 ಆಲ್ ಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ. ಬೆರೆಸಿ ಸಿಂಪಡಣೆ ಮಾಡಬೇಕು. ಬೆಳೆ ವಿಮೆ ಕಟ್ಟಿರುವ ಅನ್ನದಾತರು ಮಳೆನೀರು ನಿಂತು ಬೆಳೆ ಹಾನಿಯಾಗಿರುವ ಕುರಿತು ಬೆಳೆ ವಿಮೆ ಕಂಪನಿಯ ಟೋಲ್ ಫ್ರೀ ನಂಬರ್‌ಗೆ ಕಾಲ್ ಮಾಡಿ ತಿಳಿಸಬೇಕು' ಎಂದು ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ಪಿ.ಎಂ.ಮಲ್ಲಿಕಾರ್ಜುನ ತಿಳಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.