ADVERTISEMENT

ಬೀದರ್‌ | ಡೆಂಗಿಗೆ ಎಚ್ಚರ ವಹಿಸಲು ಜಿಲ್ಲಾಧಿಕಾರಿ ಸಲಹೆ

ಜಿಲ್ಲಾ ಆರೋಗ್ಯ ಅಧಿಕಾರಿಗಳಿಂದ ಮಾಹಿತಿ ಪಡೆದ ಡಿಸಿ ಶಿಲ್ಪಾ ಶರ್ಮಾ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 14:35 IST
Last Updated 7 ಜುಲೈ 2024, 14:35 IST
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ. ಗಿರೀಶ್‌ ಬದೋಲೆ ಅವರು ಬೀದರ್‌ನ ಡಿಎಚ್ಇ ಕಚೇರಿಗೆ ಭೇಟಿ ಕೊಟ್ಟು ಡೆಂಗಿ ನಿಯಂತ್ರಣಕ್ಕೆ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ಪಡೆದರು. ಉಪವಿಭಾಗಾಧಿಕಾರಿ ಲವೀಶ್‌ ಒರ್ಡಿಯಾ, ಡಿಎಚ್‌ಒ ಡಾ. ಧ್ಯಾನೇಶ್ವರ ನೀರಗುಡಿ ಮತ್ತಿತರರು ಹಾಜರಿದ್ದರು
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ. ಗಿರೀಶ್‌ ಬದೋಲೆ ಅವರು ಬೀದರ್‌ನ ಡಿಎಚ್ಇ ಕಚೇರಿಗೆ ಭೇಟಿ ಕೊಟ್ಟು ಡೆಂಗಿ ನಿಯಂತ್ರಣಕ್ಕೆ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ಪಡೆದರು. ಉಪವಿಭಾಗಾಧಿಕಾರಿ ಲವೀಶ್‌ ಒರ್ಡಿಯಾ, ಡಿಎಚ್‌ಒ ಡಾ. ಧ್ಯಾನೇಶ್ವರ ನೀರಗುಡಿ ಮತ್ತಿತರರು ಹಾಜರಿದ್ದರು   

ಬೀದರ್‌: ಜಿಲ್ಲೆಯಲ್ಲಿ ಡೆಂಗಿ, ಚಿಕುನ್‌ಗುನ್ಯಾ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್‌ ಬದೋಲೆ ಅವರು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಗೆ ಭೇಟಿ ಕೊಟ್ಟು ಮಾಹಿತಿ ಪಡೆದರು.

ಡೆಂಗಿ, ಚಿಕುನ್‌ಗುನ್ಯಾ ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಅದರ ಕುರಿತು ಜಾಗೃತಿ ಮೂಡಿಸಲು ಏನೇನು ಮಾಡಲಾಗುತ್ತಿದೆ ಎಂಬುದರ ಬಗ್ಗೆ ಡಿಎಚ್‌ಒ ಡಾ. ಧ್ಯಾನೇಶ್ವರ ನೀರಗುಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕರೆಪ್ಪ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಾಜಶೇಖರ ಪಾಟೀಲ ಅವರಿಂದ ಮಾಹಿತಿ ಪಡೆದರು. ‘ಆರೋಗ್ಯ ಇಲಾಖೆಯ ಸಲಹೆಗಳನ್ನು ಪಾಲಿಸಿ, ಜನ ರೋಗ ಬರದಂತೆ ನೋಡಿಕೊಳ್ಳಬೇಕು. ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ರಕ್ತ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.

ಡಾ. ಶಂಕರೆಪ್ಪ, ಡಾ. ರಾಜಶೇಖರ ಪಾಟೀಲ ಅವರು ಜಿಲ್ಲೆಯಲ್ಲಿ ಜನವರಿಯಿಂದ ಇದುವರೆಗೆ 59 ಡೆಂಗಿ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಇಬ್ಬರು ತೆಲಂಗಾಣಕ್ಕೆ ಸೇರಿದವರಿದ್ದಾರೆ. ಡೆಂಗಿಯಿಂದ ಇದುವರೆಗೆ ಯಾರೂ ಸಾವನ್ನಪ್ಪಿಲ್ಲ ಎಂದು ಮಾಹಿತಿ ನೀಡಿದರು. 

ADVERTISEMENT

ಡಿಎಚ್‌ಒ ಡಾ. ಧ್ಯಾನೇಶ್ವರ ನೀರಗುಡಿ, ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಜ್ವರ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವೈದ್ಯರ ಉಪಸ್ಥಿತಿಯಲ್ಲಿ ಶಂಕಿತ ಪ್ರಕರಣಗಳ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಶಂಕಿತ ಪ್ರಕರಣಗಳ ರಕ್ತದ ಮಾದರಿಯನ್ನು ಪಡೆದು ಜಿಲ್ಲಾ ಪ್ರಯೋಗಾಲಯಕ್ಕೆ ಡೆಂಗಿ ಪರೀಕ್ಷೆಗೆ ಕಳುಹಿಸುವಂತೆ ಸೂಚಿಸಲಾಗಿದೆ. ಎಲ್ಲ ತಾಲ್ಲೂಕು ಆರೋಗ್ಯಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ನಗರ ಪ್ರದೇಶಗಳಲ್ಲಿ ಡೆಂಗಿ ಪ್ರಕರಣಗಳ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ನಗರ ಪ್ರದೇಶಗಳಲ್ಲಿ ಸೊಳ್ಳೆಗಳ ಲಾರ್ವಾ ಸಮೀಕ್ಷೆ ಹಾಗೂ ನಿರ್ಮೂಲನೆ ಕಾರ್ಯ ಚಟುವಟಿಕೆಗಳನ್ನು ಹಮ್ಮಕೊಳ್ಳಲಾಗುತ್ತಿದೆ. ಎಲ್ಲ ತಾಲ್ಲೂಕುಗಳಿಗೆ ಜಿಲ್ಲಾಮಟ್ಟದಿಂದ ಮೇಲ್ವಿಚಾರಣಾಧಿಕಾರಿಗಳು ಹಾಗೂ ತಾಲ್ಲೂಕು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಶಂಕಿತ ಡೆಂಗಿ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣವೇ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಡೆಂಗಿ, ಚಿಕುನ್‌ಗುನ್ಯಾ ಪ್ರಕರಣಗಳ ನಿಯಂತ್ರಣಕ್ಕಾಗಿ ಪ್ರತಿ ಶುಕ್ರವಾರ ಜಿಲ್ಲೆಯಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಲಾರ್ವಾ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ತಮ್ಮ ಮನೆಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿಗೆ ಸಹಕರಿಸಬೇಕು. ಲಾರ್ವಾ ನಿರ್ಮೂಲನೆಗೆ ಒಣದಿನ ಆಚರಿಸಬೇಕು. ಮನೆ ಮನೆಗೆ ಭೇಟಿ ನೀಡಿ ಜ್ವರ ಸಮೀಕ್ಷೆಯನ್ನು ಕಡ್ಡಾಯವಾಗಿ ಕೈಗೊಳ್ಳಲು ಸಿಬ್ಬಂದಿಗೆ ತಿಳಿಸಲಾಗಿದೆ. ಜ್ವರ ಪ್ರಕರಣಗಳು ಪತ್ತೆಯಾದಲ್ಲಿ ಅವರ ರಕ್ತದ ಮಾದರಿಯನ್ನು ಪಡೆದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಗೆ ಪರೀಕ್ಷೆಗೆ ಕಳಿಸಬೇಕೆಂದು ಸೂಚಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು. 

Cut-off box - ಡೆಂಗಿ ಜ್ವರದ ಲಕ್ಷಣಗಳೇನು? * ತೀವ್ರ ಜ್ವರ ವಿಪರೀತ ತಲೆನೋವು ಹೆಚ್ಚಾಗಿ ಹಣೆ ಮುಂಭಾಗ ಕಣ್ಣಿನ ಹಿಂಭಾಗ ನೋವು ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಚರ್ಮದ ಮೇಲೆ ಕಲೆಗಳು ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವ ತೀವ್ರ ಸ್ಥಿತಿಯಲ್ಲಿ ಬಾಯಿ ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ ವಾಕರಿಕೆ ಮತ್ತು ವಾಂತಿ.

Cut-off box - ಏನು ಮಾಡುವುದು? * ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿ * ಹತ್ತಿರದ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ * ಮೃದು/ದ್ರವ ರೂಪದ ಆಹಾರವನ್ನು ಸೇವಿಸಿರಿ ಹಾಗೂ ನೀರನ್ನು ಕುಡಿಯಿರಿ * ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ ಹಾಗೂ ತಪ್ಪದೇ ಸೊಳ್ಳೆ ಪರದೆ ಉಪಯೋಗಿಸಿರಿ. ಏನು ಮಾಡಬಾರದು? * ರಕ್ತಪರೀಕ್ಷೆ ಮಾಡಿಸದೆ ನಿರ್ಲಕ್ಷ್ಯ ವಹಿಸಬೇಡಿ * ಸ್ವಯಂ ಚಿಕಿತ್ಸೆ ಪಡೆಯಬೇಡಿ * ಶ್ರಮ ಕೆಲಸ ಮಾಡಬೇಡಿ ಹಾಗೂ ಸ್ವಯಂ ರಕ್ಷಣಾ ವಿಧಾನಗಳನ್ನು ಮರೆಯಬೇಡಿ

Cut-off box - ಡೆಂಗಿ ಜ್ವರ ನಿಯಂತ್ರಣಕ್ಕೆ ಏನು ಮಾಡಬೇಕು? * ಮನೆಯಲ್ಲಿನ ಏರ್‌ಕೂಲರ್ ರೆಫ್ರಿಜಿರೇಟರ್‌ ಹಿಂಭಾಗ ಸಿಮೆಂಟ್ ತೊಟ್ಟಿ ಡ್ರಮ್ ಬ್ಯಾರಲ್ ಬಕೆಟ್ ಕೊಡಗಳಲ್ಲಿ ನೀರನ್ನು ಶೇಖರಿಸಿದ್ದಲ್ಲಿ ಮುಚ್ಚಿಡಿ ಹಾಗೂ ವಾರಕ್ಕೊಮ್ಮೆ ಉಜ್ಜಿ ಸ್ವಚ್ಛಗೊಳಿಸಿರಿ. ಒಣಗಿಸಿ ಮತ್ತೆ ಭರ್ತಿ ಮಾಡಿ. ಏಕೆಂದರೆ ಸೊಳ್ಳೆಯ ಮೊಟ್ಟೆಗಳು ನೀರಿಲ್ಲದಿದ್ದರೂ ಒಂದು ವರ್ಷ ಬದುಕುತ್ತವೆ. * ಮನೆ ಶಾಲೆ ಕಾಲೇಜು ಕಚೇರಿ ಅಂಗನವಾಡಿ ಅಂಗಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಗಲು ಹೊತ್ತಿನಲ್ಲಿ ‘ಈಡಿಸ್ ಈಜಿಪ್ಟಿಯಾ’ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸ್ವಚ್ಛತೆಗೆ ಆದ್ಯತೆ ನೀಡಬೇಕು. * ಆರೋಗ್ಯ ಇಲಾಖೆ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಡೆಂಗಿ ಜ್ವರದಿಂದ ರಕ್ಷಿಸಿಕೊಳ್ಳಲು ನೀಡುವ ಸಲಹೆ-ಸೂಚನೆಗಳನ್ನು ತಪ್ಪದೆ ಪಾಲಿಸಿ ಹಾಗೂ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿ. * ನಾವು ಬಳಸಿ ಎಸೆಯುವ ಟೀ-ಕಪ್ ಪ್ಲಾಸ್ಟಿಕ್ ಬಾಟಲ್ ಡಬ್ಬಿಗಳು ಒಡೆದ ತೆಂಗಿನ ಚಿಪ್ಪು ಟಿನ್ ಟೈರ್ ಹೂವಿನಕುಂಡ ಘನತ್ಯಾಜ್ಯ ವಸ್ತುಗಳು ಇತ್ಯಾದಿ ನಿರುಪಯುಕ್ತ ವಸ್ತುಗಳನ್ನು ತಕ್ಷಣವೇ ವಿಲೆವಾರಿ ಮಾಡಬೇಕು. ಮಳೆಗಾಲದಲ್ಲಿ ನೀರು ಸಂಗ್ರಹವಾಗುವುದರಿಂದ ‘ಈಡಿಸ್ ಈಜಿಪ್ಟಿಯಾ’ ಸೊಳ್ಳೆಯ ಲಾರ್ವಾಗಳು ಬೆಳೆಯುತ್ತವೆ. * ಮನೆಯ ಸುತ್ತ-ಮುತ್ತಲಿನ ಪರಿಸರವನ್ನು ಸೊಳ್ಳೆ ಉತ್ಪತ್ತಿ ತಾಣಗಳಿಂದ ಮುಕ್ತಗೊಳಿಸಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.