ಕಮಲನಗರ: ತಾಲ್ಲೂಕು ಕೇಂದ್ರವಾಗಿ ವರ್ಷಗಳೇ ಕಳೆದರೂ ಪಟ್ಟಣದಲ್ಲಿ ಅನೇಕ ಸರ್ಕಾರಿ ಕಚೇರಿಗಳು ಇನ್ನೂ ಆರಂಭವಾಗಿಲ್ಲ. ಹಾಗಾಗಿ ಶೀಘ್ರದಲ್ಲಿ ಎಲ್ಲಾ ಇಲಾಖೆಗಳ ಕಚೇರಿಗಳನ್ನು ಆರಂಭಿಸಬೇಕು ಹಾಗೂ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಕರವೇ ಅಧ್ಯಕ್ಷ ಸುಭಾಷ ಗಾಯಕವಾಡ ನೇತೃತ್ವದಲ್ಲಿ ಪಟ್ಟಣದ ಅಲ್ಲಮಪ್ರಭು ವೃತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಸೋನಾಳ ಮುಖ್ಯರಸ್ತೆ ಮಾರ್ಗವಾಗಿ ಕಮಲನಗರ ಪೊಲೀಸ್ ಠಾಣೆ, ಚನ್ನಬಸವ ಪಟ್ಟದೇವರ ಸ್ಮಾರಕ ಭವನದ ಮೂಲಕ ತಹಶೀಲ್ದಾರ್ ಕಚೇರಿಗೆ ತಲುಪಿ ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ ಅವರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ಮಾತನಾಡಿ, ಹಲವು ವರ್ಷಗಳಿಂದ ಮಿನಿ ವಿಧಾನಸೌಧದ ಕಟ್ಟಡ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಸದ್ಯ ಇರುವ ಕೆಲ ಇಲಾಖೆಗಳ ಕಚೇರಿಗಳು ಸ್ವಂತ ಕಟ್ಟಡ ಇಲ್ಲದೇ ಸರ್ಕಾರಿ ಶಾಲಾ ಕೊಠಡಿಗಳಲ್ಲಿ ನಡೆಯುತ್ತಿವೆ. ಕಮಲನಗರ ತಾಲ್ಲೂಕು ಕೇಂದ್ರವಾದರೂ ಔರಾದ್ ಪಟ್ಟಣಕ್ಕೆ ಜನರ ಅಲೆದಾಟ ತಪ್ಪಿಲ್ಲ. ಇನ್ನೂ ಅನೇಕ ಇಲಾಖೆ ಕಚೇರಿಗಳು ಪ್ರಾರಂಭವಾಗಿಲ್ಲ. ಇದರಿಂದ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರವೇ ಬೀದರ್ ದಕ್ಷಿಣ ಕ್ಷೇತ್ರದ ಅಧ್ಯಕ್ಷ ವೀರಶೆಟ್ಟಿ ಗೌಸಪೂರೆ, ಔರಾದ ತಾಲ್ಲೂಕು ಅಧ್ಯಕ್ಷ ಅನಿಲ ಹೇಡೆ, ಸುಭಾಷ ಮಿರ್ಚೆ, ಕಮಲನಗರ ವಲಯ ಅಧ್ಯಕ್ಷ ಆನಂದ ಬಿರಾದಾರ, ಪ್ರಶಾಂತ ಖಾನಾಪೂರೆ, ರಾಮೇಶ್ವರ ಶಿವಣಕರ, ಅಯೂಬ ಖುರೇಶಿ, ಮೊಹಮ್ಮದ ಪಾಷಾ, ರಾಜಕುಮಾರ ಗಾಯಕವಾಡ, ಸಾಯಿನಾಥ ಕಾಂಬಳೆ, ಮಲ್ಲಪ್ಪ ಬಿರಾದಾರ, ಅಜಯ ಸೂರ್ಯವಂಶಿ, ಮಂಜುನಾಥ ಸ್ವಾಮಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.