ಬಸವಕಲ್ಯಾಣ: ‘ನಗರದಲ್ಲಿನ ಒಟ್ಟು 222 ಉದ್ಯಾನಗಳು ದುಸ್ಥಿತಿಯಲ್ಲಿದ್ದು ಅವುಗಳ ಸುಧಾರಣೆ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಹುಜನ ಸಮಾಜ ಪಕ್ಷದ ತಾಲ್ಲೂಕು ಘಟಕದಿಂದ ಮಂಗಳವಾರ ನಗರಸಭೆ ಆಯುಕ್ತ ರಾಜೀವ ಬಣಕಾರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು ‘ಸರ್ಕಾರಿ ಜಾಗದಲ್ಲಿನ ಅನೇಕ ಉದ್ಯಾನಗಳು ಅತಿಕ್ರಮಣವಾಗಿವೆ. ಹೊಸ ನಿವೇಶನಗಳಲ್ಲಿಯೂ ಉದ್ಯಾನಕ್ಕೆ ಜಾಗ ಬಿಡಲಾಗಿದೆ. ಆದರೆ ಅವೆಲ್ಲ ಕಾಗದದಲ್ಲಿಯೇ ಇವೆ. ಸಂಬಂಧಿತರಿಗೆ ಮಾಹಿತಿ ಕೇಳಿದರೆ ಒಟ್ಟು ಉದ್ಯಾನಗಳ ಸಂಖ್ಯೆಯ ಪಟ್ಟಿ ಮಾತ್ರ ನೀಡುತ್ತಾರೆ. ಎಲ್ಲಿವೆ ಎಂದರೆ ಯಾರೂ ತೋರಿಸುತ್ತಿಲ್ಲ. ಉದ್ಯಾನಗಳನ್ನು ಕಬಳಿಸಿದ ಭೂಗಳ್ಳರ ವಿರುದ್ಧ ಶೀಘ್ರ ಕಾನೂನಿನ ಕ್ರಮ ತೆಗೆದುಕೊಂಡು ಜಾಗ ತೆರವುಗೊಳಿಸಿ ಅಭಿವೃದ್ಧಿ ಮಾಡಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.
‘ನಗರದ ಮುಖ್ಯ ರಸ್ತೆ ಹಾಗೂ ಇತರೆ ರಸ್ತೆಗಳಲ್ಲಿನ ಅತಿಕ್ರಮಣ ತೆರವು ಕಾರ್ಯ ಮುಂದುವರಿಸಬೇಕು. ಬಡ ಕುಟುಂಬದ ಹಾಗೂ ಸಣ್ಣ ವ್ಯಾಪಾರಿಗಳಿಗೆ ನಗರಸಭೆಯ ಮಳಿಗೆಗಳನ್ನು ಒದಗಿಸಬೇಕು’ ಎಂದು ಕೋರಿದರು.
ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ ಫುಲೆ, ಸಂಯೋಜಕ ದತ್ತು ಸುಂಠಾಣೆ, ಪ್ರಧಾನ ಕಾರ್ಯದರ್ಶಿ ವಿಷ್ಣುಕಾಂತ ಸೂರ್ಯವಂಶಿ, ಸಂದೀಪ ಮುಕಿಂದೆ, ಮಹಾದೇವ ಗಾಯಕವಾಡ, ಸಚಿನ ಕಾಂಬಳೆ, ಅಶೋಕ ಸಿಂಧೆ, ದಿಲೀಪ ಕಾಂಬಳೆ, ಅಮೂಲ್ ಲಿಂಬಾರೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.