ಬೀದರ್: ಮಣಿಪುರದಲ್ಲಿ ಕ್ರೈಸ್ತ ಧರ್ಮೀಯರ ಮೇಲೆ ನಡೆಯುತ್ತಿರುವ ದಾಳಿ ಹಾಗೂ ದೌರ್ಜನ್ಯ ತಡೆಯಬೇಕು ಎಂದು ಕರ್ನಾಟಕ ಕ್ರೈಸ್ತ ಸಂಘಟನೆ ಆಗ್ರಹಿಸಿದೆ.
ಈ ಸಂಬಂಧ ಸಂಘಟನೆಯ ಜಿಲ್ಲಾ ಅಧ್ಯಕ್ಷ ಮೋಸೆಸ್ ನಿರ್ಣಕಾರ್ ಅವರು ರಾಷ್ಟ್ರಪತಿ ಅವರಿಗೆ ಬರೆದ ಮನವಿ ಪತ್ರವನ್ನು ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಸಲ್ಲಿಸಿದರು.
'ಮಣಿಪುರದಲ್ಲಿ ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ನಿರಂತರವಾಗಿ ಹಲ್ಲೆ, ದೌರ್ಜನ್ಯ ನಡೆಸಲಾಗುತ್ತಿದೆ. ಕ್ರೈಸ್ತರು ಶಾಂತಿ ಪ್ರಿಯರು. ಆದರೆ, ಅವರನ್ನೇ ಗುರಿಯಾಗಿರಿಸಿ ದಾಳಿ ನಡೆಸಲಾಗುತ್ತಿದೆ. ಅಲ್ಪಸಂಖ್ಯಾತರು, ಪರಿಶಿಷ್ಟರ ಮೇಲೂ ಇದೇ ರೀತಿಯ ದೌರ್ಜನ್ಯಗಳು ನಡೆಯುತ್ತಿವೆ. ಆದರೆ, ಅಲ್ಲಿನ ಸರ್ಕಾರ ಅದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ' ಎಂದು ತಿಳಿಸಿದರು.
'ಪ್ರಧಾನಿ ನರೇಂದ್ರ ಮೋದಿಯವರು ದೇಶ ಸುತ್ತಾಡಿಕೊಂಡು ಇದ್ದಾರೆ. ಸನ್ಮಾನ ಸಮಾರಂಭಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಅನೇಕ ಜನ ಕ್ರೈಸ್ತರು ಸಾವನ್ನಪ್ಪಿದ್ದರೂ ಅವರ ಕಣ್ಣಿಗೇಕೆ ಕಾಣಿಸುತ್ತಿಲ್ಲ. ಮನುಷ್ಯನ ಸಾವಿಗೆ ಬೆಲೆ ಇಲ್ಲವೇ? ಅಲ್ಲಿನ ಮುಖ್ಯಮಂತ್ರಿ ಇದರ ಬಗ್ಗೆ ಗಮನಹರಿಸಿ ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ರಕ್ಷಣೆ ಒದಗಿಸಲು ಕ್ರಮ ಕೈಗೊಳ್ಳಲು ಸೂಚಿಸಬೇಕು' ಎಂದು ಕೋರಿದರು.
ಸಂಘಟನೆಯ ಮುಖಂಡರಾದ ಪ್ರದೀಪ್ ದಾದಾನೂರ್, ವಿಶಾಲ್ ದಾದಾ, ಪಂಡಿತ್ ಭಾಗ್ಯಕರ್, ಸ್ಟೀವನ್ ಕುಶನೂರ್, ಜಾನ್ ನಾಗೂರಕರ್,ಸುನಿಲ್ ಮೇತ್ರೆ,ಸಂಜುಕುಮರ್ ಮೇತ್ರೆ ಹಾಗೂ ಸುರೇಶ ದೊಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.