ADVERTISEMENT

ಬೀದರ್‌ | ಜಿಲ್ಲೆಗೆ ಬಂದ ‘ದೇಶ ಉಳಿಸಿ ಸಂಕಲ್ಪ ಯಾತ್ರೆ’

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 16:28 IST
Last Updated 6 ಏಪ್ರಿಲ್ 2024, 16:28 IST
‘ದೇಶ ಉಳಿಸಿ ಸಂಕಲ್ಪ ಯಾತ್ರೆ’ಗೆ ಬೀದರ್‌ನ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಶನಿವಾರ ಸ್ವಾಗತಿಸಲಾಯಿತು
‘ದೇಶ ಉಳಿಸಿ ಸಂಕಲ್ಪ ಯಾತ್ರೆ’ಗೆ ಬೀದರ್‌ನ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಶನಿವಾರ ಸ್ವಾಗತಿಸಲಾಯಿತು   

ಬೀದರ್‌: ‘ಸಂವಿಧಾನದ ಉಳಿವಿಗಾಗಿ, ಸರ್ವಜನಾಂಗದ ಶಾಂತಿಯ ತೋಟದ ರಕ್ಷಣೆಗಾಗಿ’ ಘೋಷವಾಕ್ಯದಡಿ ರಾಜ್ಯದಾದ್ಯಂತ ಕೈಗೊಂಡಿರುವ ‘ದೇಶ ಉಳಿಸಿ ಸಂಕಲ್ಪ ಯಾತ್ರೆ’ ಶನಿವಾರ ಜಿಲ್ಲೆ ತಲುಪಿತು.

ರಮೇಶ ಸಂಕ್ರಾಂತಿ, ಎಮ್‌.ಆರ್‌. ಭೇರಿ, ಭೀಮಣ್ಣ ನವಲಗೇರಿ ನೇತೃತ್ವದಲ್ಲಿ ನಗರಕ್ಕೆ ಬಂದ ಯಾತ್ರೆಗೆ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು ಸ್ವಾಗತಿಸಿ ಬರಮಾಡಿಕೊಂಡರು.

ನಗರದ ಪ್ರಮುಖ ರಸ್ತೆಗಳಲ್ಲಿ ಜನಜಾಗೃತಿ ಯಾತ್ರೆ ನಡೆಸಲಾಯಿತು. ಆನಂತರ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ಬಳಿ ಮುಖಂಡರಾದ ರಮೇಶ ಸಂಕ್ರಾಂತಿ, ಎಮ್‌.ಆರ್‌. ಭೇರಿ, ಭೀಮಣ್ಣ ನವಲಗೇರಿ ಮಾತನಾಡಿ, ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅದನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ. ಸಂವಿಧಾನ ಉಳಿದರೆ ಎಲ್ಲರೂ ಸಮಾನರಾಗಿ ಬದುಕಲು ಸಾಧ್ಯ. ಅದರ ಮಹತ್ವ ತಿಳಿಸುವುದಕ್ಕಾಗಿ ಏ. 1ರಿಂದ ಬೆಂಗಳೂರಿನಿಂದ ಮೂರು ತಂಡಗಳಲ್ಲಿ ಜನಜಾಗೃತಿ ಯಾತ್ರೆ ಆರಂಭಿಸಲಾಗಿದ್ದು, ಏ.8ರಂದು ಬೆಳಗಾವಿಯಲ್ಲಿ ಸಮಾರೋಪಗೊಳ್ಳಲಿದೆ ಎಂದು ಹೇಳಿದರು.

ADVERTISEMENT

ಈ ಯಾತ್ರೆಗೆ ಹಿರಿಯ ಸಾಹಿತಿಗಳು, ಚಿಂತಕರು, ಪ್ರಗತಿಪರರು ಸೇರಿದಂತೆ ಎಲ್ಲ ವರ್ಗದವರು ಜೊತೆಯಾಗಿದ್ದಾರೆ. ಸಂವಿಧಾನ ರಕ್ಷಣೆ ಇದರ ಮುಖ್ಯ ಉದ್ದೇಶ ಎಂದು ಹೇಳಿದರು.

ಮುಖಂಡರಾದ ಮೊಹಮ್ಮದ್‌ ನಿಜಾಮುದ್ದೀನ್‌, ಅನಿಲಕುಮಾರ ಬೇಲ್ದಾರ್‌, ಓಂಪ್ರಕಾಶ ರೊಟ್ಟೆ, ಜಗದೀಶ್ವರ ಬಿರಾದಾರ, ಬಾಬುರಾವ್‌ ಪಾಸ್ವಾನ್‌, ವಿಠ್ಠಲದಾಸ ಪ್ಯಾಗೆ, ಎಸ್‌.ಎಮ್‌. ಜನವಾಡಕರ್‌, ಸೂರ್ಯಕಾಂತ, ಸಿಸ್ಟರ್‌ ಕ್ರಿಸ್ಟಿನಾ, ಮೊಹಮ್ಮದ್‌ ಆರಿಫುದ್ದೀನ್‌, ಸಂತೋಷ ಜೋಳದಾಬಕೆ, ಮಂಜುಳಾ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.