ಬೀದರ್: ‘ಇಂದಿನ ಯುವಕರು ಆಡಂಬರ ಹಾಗೂ ಪ್ರಚಾರವೇ ಸತ್ಯ ಎಂದು ಭಾವಿಸುತ್ತ ವೈಚಾರಿಕವಾಗಿ ಭ್ರಮಿತರಾಗಿದ್ದಾರೆ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ದೇಶದ ಅಪರೂಪದ ಚಿಂತಕ ದೇವನೂರು ಮಹಾದೇವ ಅವರು ವೈಚಾರಿಕ ಜಾಗೃತಿ ಮೂಡಿಸುವ ಕೃತಿ ಹೊರ ತಂದಿದ್ದಾರೆ’ ಎಂದು ಪ್ರಗತಿಪರ ಚಿಂತಕ ಜಗದೀಶ ಬಿರಾದಾರ ಹೇಳಿದರು.
ಇಲ್ಲಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಸಾಹಿತಿ ದೇವನೂರು ಮಹಾದೇವ ರಚಿತ ‘ಆರ್.ಎಸ್.ಎಸ್.ಆಳ ಮತ್ತು ಅಗಲ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
‘ದೇವನೂರು ಮಹಾದೇವ ಅವರು ಕನ್ನಡಿಗರಿಗೆ ಸುಲಭವಾಗಿ ಅರ್ಥವಾಗುವ ಶೈಲಿಯಲ್ಲಿ ಕೃತಿಯನ್ನು ರಚಿಸಿದ್ದಾರೆ. ನಾಡಿನ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ ಇದಾಗಿದೆ. ಮಾಧ್ಯಮದ ಪ್ರಚಾರ, ಆಡಂಬರ ಸತ್ಯವಲ್ಲ. ವಾಸ್ತವದಲ್ಲಿ ದೇಶದ ಸಂವಿಧಾನ, ಸ್ವಾತಂತ್ರ‍್ಯ ಹಾಗೂ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿರುವುದನ್ನು ಕೃತಿಯಲ್ಲಿ ಸೂಕ್ಷ್ಮವಾಗಿ ಬಿಂಬಿಸಲಾಗಿದೆ’ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಮಾತನಾಡಿ, ‘64 ಪುಟಗಳ ಕೃತಿ ದೇಶದ ನೈಜ ಇತಿಹಾಸದ ಮೇಲೆ ಬೆಳಕು ಚೆಲ್ಲಿದೆ. ಇಂದಿನ ದಿನಮಾನದ ವಾಸ್ತವಿಕತೆಯನ್ನು ಕೃತಿಯಲ್ಲಿ ಬಿಂಬಿಸಲಾಗಿದೆ.
ಪ್ರಗತಿಪರರು, ಚಿಂತಕರು ಹಾಗೂ ಹೋರಾಟಗಾರರಿಗೆ ವೈಯಕ್ತಿಕವಾಗಿ 100 ಪ್ರತಿಗಳನ್ನು ಉಚಿತವಾಗಿ ವಿತರಿಸಲಾಗುವುದು’ ಎಂದು ತಿಳಿಸಿದರು.
‘ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಕೃತಿ ಬಿಡುಗಡೆಯಾದ ದಿನದಿಂದ ಒಂದು ಲಕ್ಷ ಪ್ರತಿಗಳು ಮಾರಾಟವಾಗಿವೆ. ಪ್ರತಿಗಳಿಗೆ ಬೇಡಿಕೆಯೂ ಹೆಚ್ಚಿದೆ. ಇಂದಿನ ಯುವಕರು ಇಂತಹ ಕೃತಿಗಳನ್ನು ಆಸ್ಥೆ ವಹಿಸಿ ಓದಬೇಕು’ ಎಂದು ಮನವಿ ಮಾಡಿದರು.
‘ವರ್ಣಾಶ್ರಮ, ಮನುಸ್ಮೃತಿ, ಬ್ರಾಹ್ಮಣ್ಯ ಪ್ರಾಬಲ್ಯ ಮತ್ತು ಸಂವಿಧಾನದ ಬದಲಾವಣೆಗಳಂತಹ ವಿಷಯಗಳ ಕುರಿತು ಕೃತಿಯಲ್ಲಿ ವಿವರಿಸಲಾಗಿದೆ. ಇಂದಿನ ಹಲವು ವಿದ್ಯಮಾನಗಳ ಕುರಿತು ಸಹ ಚರ್ಚಿಸಲಾಗಿದೆ’ ಎಂದು ತಿಳಿಸಿದರು.
ಹೋರಾಟಗಾರರಾದ ಫರ್ನಾಂಡೀಸ್ ಹಿಪ್ಪಳಗಾಂವ್, ಚಂದ್ರಕಾಂತ ನಿರಾಟೆ, ರಾಜಕುಮಾರ ಬನ್ನೇರ್, ಮಲ್ಲಿಕಾರ್ಜುನ ಚಿಟ್ಟಾ, ಅಭಿ ಕಾಳೆ, ಕಾಶೀನಾಥ ಚೆಲ್ವಾ, ಮನ್ನಾನ್ ಸೇಠ್, ವಹೀದ್ ಲಖನ್, ಮುಬಾಶಿರ್ ಶಿಂದೆ, ಎಂ.ಪಿ. ಮುದಾಳೆ, ವಿನೋದ ರತ್ನಾಕರ್, ಪ್ರಕಾಶ ರಾವಣ, ಮಹಾಲಿಂಗ ಬೆಲ್ದಾಳ, ಬಾಲಾಜಿ ಕುಂಬಾರ, ರಾಹುಲ್ ಹಾಲಹಿಪ್ಪರಗಿಕರ್, ಅಜೀತ ನೇಳಗೆ, ಕರಣ ಜಡಗೆ, ರವಿ ಭೂಸಂಡೆ, ಪವನ್ ಮಿಠಾರೆ, ಎಂ.ಎಸ್.ಮನೋಹರ, ಸುಮಂತ ಕಟ್ಟಿಮನಿ ಇದ್ದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಕೃತಿಗಳನ್ನು ಉಚಿತವಾಗಿ ಕೊಡಲಾಯಿತು. ಮಹೇಶ ಗೋರನಾಳಕರ್ ಸ್ವಾಗತಿಸಿ ನಿರೂಪಿಸಿದರು. ವಿನಯ ಮಾಳಗೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.