ADVERTISEMENT

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ: 20 ರಂದು ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ: ಮರು ಶಿಫಾರಸಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 15:12 IST
Last Updated 14 ಫೆಬ್ರುವರಿ 2023, 15:12 IST
ಚನ್ನಬಸವಾನಂದ ಸ್ವಾಮೀಜಿ
ಚನ್ನಬಸವಾನಂದ ಸ್ವಾಮೀಜಿ   

ಬೀದರ್: ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವರದಿ ಜತೆಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮರು ಶಿಫಾರಸು ಮಾಡುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಫೆ. 20 ರಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ರಾಜ್ಯದ ಎಲ್ಲ ಲಿಂಗಾಯತ ಮಠಾಧೀಶರು ಹಾಗೂ ಮುಖಂಡರಿಗೆ ಆಹ್ವಾನ ನೀಡಲಾಗುತ್ತಿದೆ. ಜಿಲ್ಲೆಯ ಲಿಂಗಾಯತರು ಸಹಸ್ರಾರು ಸಂಖ್ಯೆಯಲ್ಲಿ ಧರಣಿಯಲ್ಲಿ ಪಾಲ್ಗೊಳ್ಳಬೇಕು ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಲಿಂಗಾಯತ ಹೋರಾಟ ವಿಧಾನಸಭೆ ಚುನಾವಣೆ ನಂತರವೂ ಮುಂದುವರಿಯಲಿದೆ ಎಂದು ತಿಳಿಸಿದರು.

ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಮಾತನಾಡಿ, ಸಿಖ್, ಬೌದ್ಧ, ಜೈನ ಧರ್ಮಗಳಂತೆ 101 ಪಂಗಡಗಳನ್ನೊಳಗೊಂಡ ಲಿಂಗಾಯತ ಧರ್ಮವೂ ಸ್ವತಂತ್ರ ಧರ್ಮವಾಗಿದೆ. ಹೀಗಾಗಿ ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಕೊಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಅವಿನಾಶ ಭೋಸಿಕರ್ ಮಾತನಾಡಿ, ಗುಲಬರ್ಗಾ ವಿಶವ್ವಿದ್ಯಾಲಯಕ್ಕೆ ಬಸವೇಶ್ವರರ ಹೆಸರಿಡಬೇಕು. ಕೂಡಲಸಂಗಮದ ಬಸವೈಕ್ಯ ಮಂಟಪದಲ್ಲಿ ಉಚಿತ ಪ್ರವೇಶ ನೀಡಬೇಕು. ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಬೇಕು ಎಂಬಿತ್ಯಾದಿಗಳು ಧರಣಿಯ ಬೇಡಿಕೆಗಳಲ್ಲಿ ಸೇರಿವೆ ಎಂದು ಹೇಳಿದರು.

ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣದ ರಾಷ್ಟ್ರೀಯ ಅಧ್ಯಕ್ಷೆ ಮಾತೆ ಸತ್ಯದೇವಿ, ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂರಗೇರಿ, ಓಂಪ್ರಕಾಶ ರೊಟ್ಟೆ, ಬಸವರಾಜ ಸಂಗಮದ, ಮಲ್ಲಿಕಾರ್ಜುನ ಬುಕ್ಕಾ, ವಿಶ್ವನಾಥ ಪಾಟೀಲ ಗೊಂದೆಗಾಂವ್, ಬಸವಂತರಾವ್ ಬಿರಾದಾರ, ರವಿಕಾಂತ ಬಿರಾದಾರ, ಸತೀಶ್ ಪಾಟೀಲ ಹಾರೂರಗೇರಿ, ಮಲ್ಲಿಕಾರ್ಜುನ ಶೆಂಬೆಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.