ADVERTISEMENT

ಗೋ ಮಾತೆ ನಂಬಿದವರಿಗೆ ಕಷ್ಟ ಬರಲ್ಲ: ವೀರೇಂದ್ರ ಹೆಗ್ಗಡೆ

ಹೈನುಗಾರರ ಸಮಾವೇಶದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 10:27 IST
Last Updated 5 ಸೆಪ್ಟೆಂಬರ್ 2024, 10:27 IST
   

ಬೀದರ್‌: ‘ಗೋ ಮಾತೆ ನಂಬಿದವರಿಗೆ ಎಂದೂ ಕಷ್ಟ ಬರಲ್ಲ. ಹೈನುಗಾರಿಕೆಯಿಂದ ಆರ್ಥಿಕವಾಗಿ ಸದೃಢರಾಗಿ ಉತ್ತಮ ಜೀವನ ಸಾಗಿಸಬಹುದು’ ಎಂದು ರಾಜ್ಯಸಭೆ ಸದಸ್ಯ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

ಕಲಬುರಗಿ, ಬೀದರ್‌ ಮತ್ತು ಯಾದಗಿರಿ ಜಿಲ್ಲಾ ಹಾಲು ಒಕ್ಕೂಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ಸಹಯೋಗದಲ್ಲಿ ನಗರದ ಬಿ.ವಿ. ಭೂಮರಡ್ಡಿ ಕಾಲೇಜಿನ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೀರೇಂದ್ರ ಹೆಗ್ಗಡೆ ಅವರ ಅನುದಾನದ ಅಡಿಯಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ನೀಡಿದ ಮೂಲಭೂತ ಸೌಕರ್ಯಗಳು ಮತ್ತು ಹೈನುಗಾರರ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಹೈನುಗಾರಿಕೆಯಿಂದ ಸಂಪತ್ತು, ನೆಮ್ಮದಿ ಸಿಗುತ್ತದೆ. ಎಲ್ಲ ರೀತಿಯ ಪ್ರಗತಿಗೆ ಸಹಕಾರಿಯಾಗುತ್ತದೆ. ನಮ್ಮ ಜಿಲ್ಲೆಯಂತೆ ಈ ಭಾಗ ಕೂಡ ಅಭಿವೃದ್ಧಿ ಹೊಂದಬೇಕು ಎನ್ನುವುದು ನಮ್ಮ ಆಶಯ. ಪ್ರೀತಿಯಿಂದ ಹಸುಗಳನ್ನು ಪೋಷಿಸಬೇಕು. ತಾಯಿಯ ಹಾಲಿನಂತೆ ಜಾನುವಾರುಗಳ ಹಾಲು ಕೂಡ ಪವಿತ್ರವಾದುದು. ಗೋಮಾತೆ ನಂಬಿದವರಿಗೆ ಕಷ್ಟ ಬಂದಿಲ್ಲ ಎಂದು ಹೇಳಿದರು.

ADVERTISEMENT

ಬೀದರ್‌ ಜಿಲ್ಲೆ ಕೂಡ ಆರ್ಥಿಕವಾಗಿ ಬೆಳೆಯಬೇಕು. ಎಲ್ಲ ಧರ್ಮೀಯರು ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಬಹುದು. ಹೆಚ್ಚಿನ ಹಾಲು ಉತ್ಪಾದನೆಯಿಂದ ಹೆಚ್ಚಿನ ಸಂಪತ್ತು ಗಳಿಸಬಹುದು. ಹೈನುಗಾರಿಕೆಯಲ್ಲಿ ಹೆಣ್ಣು ಮಕ್ಕಳಷ್ಟೇ ಅಲ್ಲ ಗಂಡು ಮಕ್ಕಳು ಕೂಡ ತೊಡಗಿಸಿಕೊಳ್ಳಬಹುದು. ಕೋವಿಡ್‌ ನಂತರ ಅನೇಕ ಗಂಡು ಮಕ್ಕಳು ನಗರಗಳನ್ನು ತೊರೆದು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಯಶಸ್ಸು ಸಾಧಿಸಿದ್ದಾರೆ ಎಂದು ತಿಳಿಸಿದರು.

ನಮ್ಮ ಜಿಲ್ಲೆಗೆ ಬ್ರಿಟಿಷರು, ಪೋರ್ಚಗೀಸರು ಬಂದು ಕೃಷಿಯನ್ನು ಬೆಳೆಸಿದ್ದರು. ಹೆಂಚು, ಕಾಫಿ, ಚಹಾ, ಕಾಳುಮೆಣಸು ಹೀಗೆ ಎಲ್ಲದಕ್ಕೂ ಪ್ರಾಶಸ್ತ್ಯ ಕೊಟ್ಟಿದ್ದರು. ನಮ್ಮ ಜಿಲ್ಲೆಯ ಒಂದು ತಾಲ್ಲೂಕಿನಲ್ಲಿ ನಿತ್ಯ 1.50 ಲಕ್ಷ ಲೀಟರ್‌ ಹಾಲು ಉತ್ಪಾದನೆ ಮಾಡಲಾಗುತ್ತದೆ. ನನ್ನ ಸಂಸದ ನಿಧಿ ಬೀದರ್‌ ಜಿಲ್ಲೆಗೆ ಕೊಟ್ಟು ಇಲ್ಲಿನ ಜನರಿಗೂ ಇದರ ಪ್ರಯೋಜನ ಸಿಗಬೇಕು ಎನ್ನುವುದು ನನ್ನ ಆಶಯವಾಗಿದೆ. ನಾವು ಎಷ್ಟು ಸಂಪಾದನೆ ಮಾಡುತ್ತೇವೆ ಎನ್ನುವುದಕ್ಕಿಂತ ಎಷ್ಟು ಪರೋಪಕಾರ ಮಾಡುತ್ತೇವೆ ಎನ್ನುವುದು ಬಹಳ ಮುಖ್ಯ. ನನ್ನ ಜಿಲ್ಲೆಯಂತೆ ಬೇರೆ ಜಿಲ್ಲೆಗಳು ಪ್ರಗತಿ ಕಾಣಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಗಡಿಭಾಗದಲ್ಲಿ ಕ್ಷೀರಕ್ರಾಂತಿ ಮೂಲಕ ಆರ್ಥಿಕ ಕ್ರಾಂತಿಗೆ ನಾಂದಿ ಹಾಡಲು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮುಂದಾಗಿದ್ದಾರೆ. ಅದಕ್ಕಾಗಿ ಅವರ ಸಂಸದರ ನಿಧಿಯಿಂದ ₹5 ಕೋಟಿ, ಧರ್ಮಸ್ಥಳ ಸಂಸ್ಥೆಯಿಂದ ₹2.50 ಕೋಟಿ ನೀಡಿದ್ದಾರೆ. ಜಿಲ್ಲೆಯಲ್ಲಿ ಮಾಂಜ್ರಾ, ಕಾರಂಜಾ ನದಿ ಹರಿಯುತ್ತದೆ. ಫಲವತ್ತಾದ ಜಮೀನಿದೆ. ಮೇವು ಸಿಗುತ್ತದೆ. ಹೈನುಗಾರಿಕೆಗೆ ಪೂರಕವಾದ ವಾತಾವರಣವಿದ್ದು, ಅದರಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

ಬೀದರ್‌ ಜಿಲ್ಲೆ ಕಲ್ಯಾಣ ಕರ್ನಾಟಕದಲ್ಲಿಯೇ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಹಿಂದೆ ನಿತ್ಯ 18 ಸಾವಿರ ಲೀಟರ್‌ ಹಾಲು ಉತ್ಪಾದನೆಯಾಗುತ್ತಿತ್ತು. ಧರ್ಮಸ್ಥಳ ಸಂಸ್ಥೆಯ ಶ್ರಮದಿಂದ ದಿನಕ್ಕೆ 52 ಸಾವಿರ ಲೀಟರ್‌ ನಿತ್ಯ ಉತ್ಪಾದಿಸಲಾಗುತ್ತಿದೆ. ಇನ್ನಷ್ಟು ಶ್ರಮವಹಿಸಿದರೆ ಹಾಲು ಉತ್ಪಾದನೆ ಹೆಚ್ಚಿಸಬಹುದು. ಎಲ್ಲ ಅಭಿವೃದ್ಧಿಗೆ ಆರ್ಥಿಕ ಅಭಿವೃದ್ಧಿಯೇ ಮೂಲವಾಗಿರುವುದರಿಂದ ಆ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕು ಎಂದು ಹೇಳಿದರು.

ಡಿ. ವೀರೇಂದ್ರ ಹೆಗ್ಗಡೆ ಅವರ ಪುತ್ರಿ ಶ್ರದ್ಧಾ ಅಮಿತ್‌, ಸಂಸದ ಸಾಗರ್‌ ಖಂಡ್ರೆ, ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ನಗರಸಭೆ ಅಧ್ಯಕ್ಷ ಮೊಹಮ್ಮದ್‌ ಗೌಸ್‌, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್‌ ಬದೋಲೆ, ಕಲಬುರಗಿ, ಬೀದರ್‌ ಮತ್ತು ಯಾದಗಿರಿ ಹಾಲು ಒಕ್ಕೂಟದ ನಿರ್ದೇಶಕರಾದ ಮಲ್ಲಿಕಾರ್ಜುನ ಎಸ್‌. ಬಿರಾದಾರ, ರೇವಣಸಿದ್ದಪ್ಪ ವಿ. ಪಾಟೀಲ, ಬಂಡುರಾವ ಕಿ. ಕುಲಕರ್ಣಿ, ಭೀಮರಾವ ಅಮೃತರಾವ್‌ ಬಳತೆ, ವಿಠ್ಠಲರೆಡ್ಡಿ ಕೃಷ್ಣರೆಡ್ಡಿ, ಅಶೋಕ ಅಣ್ಣಾರಾವ್‌ ಪಡಶೆಟ್ಟಿ, ನಾಗರಾಜ ಅಮೃತರಾವ್ ಪಾಟೀಲ, ಬಸವರಾಜ ಗುಲಿಂಗಪ್ಪ ಉಪ್ಪಿನ, ಮಲ್ಲಿಕಾರ್ಜುನ ಚಂದ್ರಶೇಖರ ಪಾಟೀಲ, ಹನುಮಂತಗೌಡ ಸೀತರಾಮ ನಾಯಕ, ಸಂತೋಷ ಉಮಾಕಾಂತರಾವ್‌ ಪಾಟೀಲ, ಕಲಬುರಗಿ ಸಹಕಾರ ಸಂಘಗಳ ಇಲಾಖೆಯ ಜಂಟಿ ನಿಬಂಧಕ ವಿಶ್ವನಾಥ ಮಲಕೂಡ, ಬೀದರ್‌ ಉಪ ನಿಬಂಧಕಿ ಮಂಜುಳಾ ಎಸ್‌., ಎನ್‌ಡಿಡಿಬಿ ಹಿರಿಯ ವ್ಯವಸ್ಥಾಪಕ ಎ.ಎಲ್‌. ಹಲನಾಯಕ, ಕಲಬುರಗಿಯ ಪಶು ಸಂಗೋಪನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರಾದ ನರಸಪ್ಪ ಎ.ಡಿ., ಎಸ್‌.ಡಿ. ಅವಟಿ, ಪಶು ಆಹಾರ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ವಿ.ಸಿ. ವೆಂಕಟೇಶ್‌, ಎಚ್‌ಕೆಇಎಸ್‌ ಆಡಳಿತ ಮಂಡಳಿ ಸದಸ್ಯ ರಜನೀಶ ವಾಲಿ, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಎಸ್‌ಕೆಡಿಆರ್‌ಪಿಡಿಪಿಬಿಸಿ ಟ್ರಸ್ಟ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್‌ ಕುಮಾರ್‌ ಎಸ್‌.ಎಸ್‌., ವ್ಯವಸ್ಥಾಪಕ ನಿರ್ದೇಶಕ ಸಿದ್ದೇಗೌಡ ಹಾಜರಿದ್ದರು.

ಹಾಲು, ಹೂವಿನಿಂದ ನಿತ್ಯ ಆದಾಯ: ವೀರೇಂದ್ರ ಹೆಗ್ಗಡೆ

ಬೀದರ್: ‘ಹಾಲು, ಹೂ ನಿತ್ಯ ಆದಾಯ ತಂದುಕೊಡುತ್ತದೆ. ಈ ನಿಟ್ಟಿನಲ್ಲಿ ಕೆಲಸ ಮಾಡಿದರೆ ಸದೃಢರಾಗಬಹುದು’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

ಬೀದರ್‌ ಜಿಲ್ಲೆಯಲ್ಲಿ 86 ಹಾಲು ಸಹಕಾರ ಸಂಘಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಅವುಗಳು ನಿಂತು ಹೋಗಿದ್ದವು. 192 ಸಂಘಗಳಿಗೆ ಕುರ್ಚಿ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ ಎಂದರು.

ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಕಲ್ಪನೆ ಕೊಟ್ಟಿರುವ ಬಸವಣ್ಣನ ನಾಡಿದು. ಈ ನೆಲದಲ್ಲಿ ಎಲ್ಲರ ಚಿಂತನೆಗಳಿಗೆ ಬಸವಣ್ಣ ಅವಕಾಶ ಮಾಡಿಕೊಟ್ಟಿದ್ದರು. ಇಲ್ಲಿ ಎಲ್ಲರೂ ಸಹಬಾಳ್ವೆಯಿಂದ ಇದ್ದಾರೆ. ನಮ್ಮ ಸಹಕಾರಿ ಸಂಘದಲ್ಲೂ ಎಲ್ಲ ವರ್ಗದವರೂ ಇದ್ದಾರೆ ಎಂದು ಹೇಳಿದರು.

‘ಬ್ಯಾಂಕಿನ ಸಾಲಕ್ಕೆ ಹೆಗ್ಗಡೆ ಗ್ಯಾರಂಟಿ’

‘ಧರ್ಮಸ್ಥಳ ಧರ್ಮದ ಸಂಕೇತ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಅನೇಕ ಪರೋಪಕಾರಿ ಕೆಲಸಗಳನ್ನು ಮಾಡುತ್ತಿದ್ದಾರೆ. ಸ್ವಸಹಾಯ ಸಂಘಗಳಲ್ಲಿ ಶಿಸ್ತು ತಂದಿದ್ದಾರೆ. ವಿದ್ಯಾರ್ಥಿನಿಯರಿಗೆ ಕೌಶಲ್ಯ ತರಬೇತಿ ಕೊಡುತ್ತಿದ್ದಾರೆ. ಸಹಕಾರಿ ಸಂಘಗಳಿಗೆ ಬ್ಯಾಂಕಿನಿಂದ ₹450 ಕೋಟಿ ಸಾಲ ಕೊಡಿಸಿ ಅವರು ಗ್ಯಾರಂಟಿ ಕೊಟ್ಟಿದ್ದಾರೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಅನೇಕ ಸರ್ಕಾರಿ ಶಾಲಾ ಕಾಲೇಜುಗಳಿಗೆ ಪೀಠೋಪಕರಣ ಕೊಟ್ಟಿದ್ದಾರೆ. ಅಂಗವಿಕಲರಿಗೆ ಪ್ರತಿ ತಿಂಗಳು ₹1 ಸಾವಿರ ಮಾಸಾಶನ ಕೊಡುತ್ತಿದ್ದಾರೆ. ಕೆರೆಗಳು, ದೇವಾಲಯಗಳ ಪುನಶ್ಚೇತನ ಮಾಡುತ್ತಿದ್ದಾರೆ. ಪ್ರಕೃತಿ, ಪರಿಸರದ ಕಾಳಜಿ ಹೊಂದಿದ್ದಾರೆ. ವ್ಯಸನಮುಕ್ತ ಕಾರ್ಯಕ್ರಮಗಳನ್ನು ಆಯೋಜಿಸಿ ಯುವಕರನ್ನು ಸರಿ ದಾರಿಗೆ ತಂದು ಚಾರಿತ್ರ್ಯ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.