ಬೀದರ್: ಅಕ್ರಮವಾಗಿ ಡಿಜಿಟಲ್ ಖಾತಾಗಳನ್ನು ಮಾಡಿಕೊಟ್ಟು ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿರುವುದರಿಂದ ತಾಲ್ಲೂಕಿನ ಯದಲಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶ್ರೀಧರ ಎಂಬುವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ. ಅವರು ಶನಿವಾರ ಆದೇಶ ಹೊರಡಿಸಿದ್ದಾರೆ.
ಸದ್ಯ ಗಾದಗಿ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶ್ರೀಧರ ಅವರು, ಈ ಹಿಂದೆ ಮಲ್ಕಾಪುರ ಪಂಚಾಯಿತಿಯಲ್ಲಿ ಪಿಡಿಒ ಇದ್ದಾಗ ಡಿಜಿಟಲ್ ಖಾತಾ ನಮೂನೆ 11–ಎ ಮತ್ತು ನಮೂನೆ 11–ಬಿ ಅಕ್ರಮವಾಗಿ ತೆಗೆದು ಕೊಟ್ಟು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂಬ ದೂರುಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಅವರ ವರದಿ ಆಧರಿಸಿ ಈಗ ಕ್ರಮ ಜರುಗಿಸಿದ್ದಾರೆ.
ಮಲ್ಕಾಪುರ ಗ್ರಾಮ ಪಂಚಾಯಿತಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ ನೀಡಿದಾಗ, ಯಾವುದೇ ದಾಖಲಾತಿಗಳು ಇಲ್ಲದೆ ಡಿಜಿಟಲ್ ಖಾತಾ ವಿತರಿಸಿದ್ದು ಗಮನಕ್ಕೆ ಬಂದಿತ್ತು. ಆಗ ಮಲ್ಕಾಪುರ ಪಂಚಾಯಿತಿಯಿಂದ ಯದಲಾಪುರ ಪಂಚಾಯಿತಿಗೆ ವರ್ಗಾಯಿಸಿದ್ದರು. ಪ್ರಭಾರದಲ್ಲಿದ್ದಾಗಲೇ ಅನಧಿಕೃತವಾಗಿ ಖಾತಾಗಳನ್ನು ವಿತರಿಸಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಸಿಇಒ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.