ಖಟಕಚಿಂಚೋಳಿ: ಸಮೀಪದ ಚಳಕಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚಳಕಾಪುರವಾಡಿ ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಹೊಲಸು ನೀರು ರಸ್ತೆಯ ಮೇಲೆ ಹರಿಯುತ್ತದೆ. ಇದರಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.
ಗ್ರಾಮದಲ್ಲಿ ಸುಮಾರು 500 ಮನೆ ಇವೆ. ಕೆಲವು ರಸ್ತೆಗಳ ಬದಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನಿವಾಸಿಗಳು ತಮ್ಮ ಮನೆಯ ನೀರನ್ನು ರಸ್ತೆಗೆ ಬಿಡುತ್ತಾರೆ. ಹೀಗೆ ರಸ್ತೆಗೆ ಬಿಡುವ ತ್ಯಾಜ್ಯ ನೀರು ರಸ್ತೆಯ ಪಕ್ಕದಲ್ಲಿ ಸಂಗ್ರಹಗೊಂಡು ಗಬ್ಬು ನಾರುತ್ತಿದೆ.
ಮಳೆ ಬಂದರೆ ಕಲುಷಿತ ವಾತಾವರಣ ನಿರ್ಮಾಣ ಆಗುತ್ತದೆ. ಚರಂಡಿ ತುಂಬಿದ ನೀರು ಸುಲಭವಾಗಿ ಹೋಗುವಂತೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಸಾರ್ವಜನಿಕರು ಬಳಸಿದ ನೀರು, ಬಚ್ಚಲು ನೀರು ಕೊಚ್ಚೆ ರೂಪ ತಾಳಿ ಮುಖ್ಯರಸ್ತೆ ಮೇಲೆ ನಿಂತು ಗಬ್ಬು ನಾರುತ್ತಿದೆ. ದಿನದಿಂದ ದಿನಕ್ಕೆ ಸೊಳ್ಳೆಗಳ ಕಾಟವೂ ವಿಪರೀತವಾಗುತ್ತಿದೆ. ಇದರಿಂದ ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
‘ಗ್ರಾಮದಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿದೆ. ಗ್ರಾಮ ಪಂಚಾಯಿತಿಯವರು ಹೊಸದಾಗಿ ಚರಂಡಿ ನಿರ್ಮಿಸಿ ಬಡಾವಣೆಯ ಸಮಸ್ಯೆ ಬಗೆಹರಿಸಬೇಕು. ಮನೆಗಳಿಂದ ತ್ಯಾಜ್ಯ ನೀರು ಸರಾಗವಾಗಿ ಹರಿದು ಹೊರ ಹೋಗಲು ಚರಂಡಿ ನಿರ್ಮಿಸಿ ಸ್ವಚ್ಛತೆ ಕಾಪಾಡಬೇಕು’ ಎಂದು ನಿವಾಸಿಗಳಾದ ಮಲ್ಲಿಕಾರ್ಜುನ ವಗ್ಗೆ, ಸಚಿನ್ ಭಂಡಾರಿ, ಆಕಾಶ ವಗ್ಗೆ, ಅಭಿಷೇಕ ಸೂರ್ಯವಂಶಿ ಆಗ್ರಹಿಸುತ್ತಾರೆ.
‘ಪಂಚಾಯಿತಿ ಸಿಬ್ಬಂದಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಯಾವುದೇ ಕೆಲಸವಿರಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬರಲಿ ಎಂದು ನೆಪ ಹೇಳುತ್ತಾರೆ. ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜು ಸರಿಯಾಗಿ ಆಗುತ್ತಿಲ್ಲ. ಪೈಪ್‌ಲೈನ್ ಒಡೆದರೆ ಚರಂಡಿಯ ಕೊಳಚೆ ನೀರು ಪೈಪ್‌ಲೈನ್ ಒಳಗೆ ಸೇರಿಕೊಳ್ಳುತ್ತಿದೆ. ಈ ಕುರಿತು ಸಿಬ್ಬಂದಿ ಗಮನಕ್ಕೆ ತಂದರೂ ತಕ್ಷಣ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.