ಬೀದರ್: ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆ ಬಂಪರ್ ಸಚಿವ ಸ್ಥಾನ ಪಡೆದರೂ ಅದರಿಂದ ನಯಾಪೈಸೆ ಉಪಯೋಗ ಆಗಲಿಲ್ಲ.
ಸಚಿವರು ಜಿಲ್ಲೆಯ ಕಷ್ಟನಷ್ಟಗಳಿಗೆ ಸ್ಪಂದಿಸಿದ್ದು ಕಾಣ ಸಿಗಲಿಲ್ಲ. ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳೂ ನಡೆಯಲಿಲ್ಲ.
ಇದು, ಸಹಜವಾಗಿಯೇ ಜಿಲ್ಲೆಯ ಜನರಿಗೆ ನಿರಾಶೆ ಉಂಟು ಮಾಡಿತು. ಇದೀಗ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ಲಕ್ಷಣಗಳು ಕಂಡು ಬರುತ್ತಿರುವುದರಿಂದ ಆ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ.
ಸಮ್ಮಿಶ್ರ ಸರ್ಕಾರಕ್ಕೆ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಕಬ್ಬಿನ ಬಾಕಿ ಕೊಡಿಸಲು ಸಾಧ್ಯವಾಗಲಿಲ್ಲ. ಜಿಲ್ಲೆಯ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿಲ್ಲ. ಶೈಕ್ಷಣಿಕ ಗುಣಮಟ್ಟ ಹೆಚ್ಚಲಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಚಿವರಿಗೆ ಯಾವುದೇ ಛಾಪು ಮೂಡಿಸಲು ಆಗಲೇ ಇಲ್ಲ. ಇದೀಗ ಜನರ ಚಿತ್ತ ಬಿಜೆಪಿಯ ಮುಖಂಡರತ್ತ ನೆಟ್ಟಿದೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಜಿಲ್ಲೆಯ ಒಬ್ಬರು ಸಚಿವರಾಗುವುದು ಖಚಿತ. ಔರಾದ್ ಶಾಸಕ ಪ್ರಭು ಚವಾಣ್ ಹಾಗೂ ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಪೈಕಿ ಒಬ್ಬರಿಗೆ ಸಚಿವ ಸ್ಥಾನ ಒಲಿದು ಬರಬಹುದು ಎಂದು ಬಿಜೆಪಿ ಕಾರ್ಯಕರ್ತರು ಆಡಿಕೊಳ್ಳುತ್ತಿದ್ದಾರೆ.
ರಘುನಾಥರಾವ್ ಮಲ್ಕಾಪುರೆ ಅವರು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ, ರಾಜ್ಯ ಯುವ ಮೋರ್ಚಾ ಅಧ್ಯಕ್ಷ, ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ, ರಾಜ್ಯ ಘಟಕದ ಕಾರ್ಯದರ್ಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಶಿಸ್ತು ಸಮಿತಿ ಸಂಚಾಲಕ, ರಾಜ್ಯ ಚುನಾವಣಾ ಸಮಿತಿ ಸಂಚಾಲಕ, ರಾಜ್ಯ ಚುನಾವಣಾ ಅಧಿಕಾರಿ, ರಾಜ್ಯ ಚುನಾವಣಾ ಸಮಿತಿ ಸದಸ್ಯ, ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಸದಸ್ಯ, ಕರ್ನಾಟಕ ಪ್ರದೇಶ ಕುರುಬರ ಸಂಘದ ಕಾರ್ಯಾಧ್ಯಕ್ಷ, ಅಧ್ಯಕ್ಷ ಹಾಗೂ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ರಘುನಾಥರಾವ್ ಅವರ ವಾಕ್‌ಚಾತುರ್ಯ ಹಾಗೂ ಪಕ್ಷ ನಿಷ್ಠೆಯನ್ನು ಪರಿಗಣಿಸಿ ಪಕ್ಷ ವಿವಿಧ ಹುದ್ದೆಗಳಿಗೆ ನೇಮಕ ಮಾಡಿ ಕಾರ್ಯಕ್ಷಮತೆಯನ್ನು ಅವಲೋಕಿಸಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ರಘುನಾಥರಾವ್ ಅವರಿಗೆ ಸಚಿವ ಸ್ಥಾನ ಒಲಿದು ಬರಲಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
‘25 ವರ್ಷಗಳಿಂದ ಪಕ್ಷದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇನೆ. ಪಕ್ಷ ವಹಿಸಿಕೊಟ್ಟ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ. ವಿಧಾನ ಪರಿಷತ್ ಸದಸ್ಯನಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಹೌದು. ಆದರೆ, ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುವೆ’ ಎಂದು ರಘುನಾಥರಾವ್ ಮಲ್ಕಾಪುರೆ ಹೇಳುತ್ತಾರೆ.
ಸತತ ಮೂರು ಚುನಾವಣೆಗಳಲ್ಲಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿರುವ ಔರಾದ್ ಶಾಸಕ ಪ್ರಭು ಚವಾಣ್ ಅವರು ಸಹ ಬಿಜೆಪಿ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ.
‘1988 ರಿಂದ ಪಕ್ಷದಲ್ಲಿ ಇದ್ದೇನೆ. ಬಿಜೆಪಿ ನನ್ನ ತಾಯಿ. ಮಹಾರಾಷ್ಟ್ರದಲ್ಲಿ ಇದ್ದ ನನ್ನನ್ನು ಇಲ್ಲಿಗೆ ಕಳಿಸಿದವರು ಮಹಾರಾಷ್ಟ್ರದ ಬಿಜೆಪಿ ಮುಖಂಡ ದಿವಂಗತ ಗೋಪಿನಾಥ ಮುಂಡೆ ಅವರು. ಪಕ್ಷ ಸಚಿವ ಸ್ಥಾನ ಒದಗಿಸಿದರೆ ಸಮರ್ಥವಾಗಿ ನಿಭಾಯಿಸುವೆ’ ಎಂದು ಔರಾದ್ ಶಾಸಕ ಪ್ರಭು ಚವಾಣ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.