ADVERTISEMENT

ದೀಪಾವಳಿ ‘ಆ್ಯಪ್’ ಲಿಂಕ್: ಒತ್ತಿದರೆ ಹಣ ಮಾಯ

ಸೈಬ‌ರ್ ವಂಚಕರ ಹೊಸ ಅಸ್ತ್ರ: ದೀಪಾವಳಿ ಹೆಸರಲ್ಲಿ ಬಹುಮಾನ, ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಲಿಂಕ್ ಹರಿದಾಟ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2024, 5:58 IST
Last Updated 2 ನವೆಂಬರ್ 2024, 5:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಲಸೂರ : ‘ಈ ದೀಪಾವಳಿಯಂದು ಭರ್ಜರಿ ಲಾಭ ಪಡೆಯಿರಿ. ನಿಮ್ಮ ಬ್ಯಾಂಕ್ ಖಾತೆಗೆ ₹ 10 ಸಾವಿರ ಬಹುಮಾನ ಬಂದಿದೆ. ಈ ಬಹುಮಾನದ ಅವಧಿ ಇಂದು ಮಧ್ಯರಾತ್ರಿ ಮುಗಿಯಲಿದೆ. ಬಹುಮಾನ ಪಡೆಯಲು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮೊಬೈಲ್ ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ. ಬಹುಮಾನದ ಹಣ ನಿಮ್ಮ ಖಾತೆಗೆ ಜಮೆ ಆಗುತ್ತದೆ’

ಇಂಥ ಹಲವು ಸಂದೇಶಗಳು, ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ. ಸಂದೇಶ ನಂಬಿ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುತ್ತಿರುವ ಜನರ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ವಂಚಕರು ದೋಚುತ್ತಿದ್ದಾರೆ. ಕ್ಷಣಿಕ ನಿರ್ಧಾರದಿಂದ ಹಣ ಕಳೆದುಕೊಳ್ಳುತ್ತಿರುವ ಜನರು, ಸೈಬರ್ ಕ್ರೈಂ ಠಾಣೆಗಳಿಗೆ ದೂರು ನೀಡಿ ಹಣ ವಾಪಸು ಕೊಡಿಸುವಂತೆ ಕಣ್ಣೀರು ಹಾಕುತ್ತಿದ್ದಾರೆ.

ಒನ್‌ ಟೈಂ ಪಾಸ್‌ವರ್ಡ್ (ಒಟಿಪಿ), ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆ, ಕ್ರೆಡಿಟ್-ಡೆಬಿಟ್ ಕಾರ್ಡ್, ವೈವಾಹಿಕ ಜಾಲತಾಣ ಹಾಗೂ ಇತರೆ ಮಾದರಿಯಲ್ಲಿ ಸೈಬರ್ ಅಪರಾಧ ಎಸಗುತ್ತಿದ್ದ ವಂಚಕರು, ಈಗ ಆ್ಯಪ್ ಮೂಲಕ ನೇರವಾಗಿ ಖಾತೆಯಲ್ಲಿರುವ ಹಣವನ್ನು ದೋಚುತ್ತಿದ್ದಾರೆ.

ADVERTISEMENT

ಮೊಬೈಲ್ ಹಾಗೂ ಕಂಪ್ಯೂಟರ್ ಸ್ಕ್ರೀನ್‌ ವೀಕ್ಷಣೆಗೆ ಅನುಕೂಲವಾಗುತ್ತಿರುವ ‘ಎನಿಡೆಸ್ಕ್‌’ ಆ್ಯಪ್ ಮಾದರಿಯಲ್ಲಿ ವಂಚಕರು ತಮ್ಮದೇ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಕೆನರಾ, ಎಸ್‌ಬಿಐ ಹಾಗೂ ಇತರೆ ಬ್ಯಾಂಕ್‌ಗಳ ಹೆಸರಿನಲ್ಲಿ ಆ್ಯಪ್ ಲಿಂಕ್ ಹರಿಬಿಡುತ್ತಿದ್ದಾರೆ. ಆ್ಯಪ್ ನಿಜವೆಂದು ನಂಬುತ್ತಿರುವ ಕೆಲವರು, ಇನ್‌ಸ್ಟಾಲ್ ಮಾಡಿಕೊಂಡು ಹಣ ಕಳೆದುಕೊಳ್ಳುತ್ತಿದ್ದಾರೆ.

ದೀಪಾವಳಿ ಹಬ್ಬದ ಆಚರಣೆಗೆ ಜನರು ತಯಾರಿ ನಡೆಸುತ್ತಿದ್ದಾರೆ. ಬ್ಯಾಂಕ್‌ಗಳು, ಮಾಲ್‌ಗಳು ಹಾಗೂ ಹಲವು ಉತ್ಪನ್ನಗಳ ತಯಾರಿಕೆ ಕಂಪನಿಗಳು ನಾನಾ ಆಫರ್‌ಗಳನ್ನು ಘೋಷಿಸಿವೆ. ಇದನ್ನೇ ನೆಪ ಮಾಡಿಕೊಂಡಿರುವ ವಂಚಕರು, ದೀಪಾವಳಿ ಹೆಸರಿನಲ್ಲಿ ಆಮಿಷಗಳನ್ನು ನೀಡಿ ವಂಚಿಸುತ್ತಿದ್ದಾರೆ.

‘ಮೊಬೈಲ್‌ಗೆ ಬರುವ ಆ್ಯಪ್‌ಗಳ ಲಿಂಕ್ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು’ ಎಂದು ಮೆಹಕರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಶಿವಕುಮಾರ ಬಳತೆ ಕೋರಿದರು.

ವಾಟ್ಸ್ಆ್ಯಪ್ ಗ್ರೂಪ್ ಸಹ ಹ್ಯಾಕ್: ಇಂದಿನ ಕಾಲದಲ್ಲಿ ಬಹುತೇಕರು ವಾಟ್ಸ್ಆ್ಯಪ್ ಬಳಸುತ್ತಿದ್ದು ಅದರಲ್ಲಿನ ಗ್ರೂಪ್‌ಗಳನ್ನು ಹ್ಯಾಕ್ ಮಾಡುತ್ತಿರುವ ವಂಚಕರು, ಅದರಲ್ಲಿಯೇ ಆ್ಯಪ್ ಲಿಂಕ್ ಪೋಸ್ಟ್ ಹಾಕುತ್ತಿದ್ದಾರೆ.

ಕಂಪನಿ ಸಹೋದ್ಯೋಗಿಗಳು ಸೇರಿಕೊಂಡು ವಾಟ್ಸ್ ಅಪ್ ಗ್ರೂಪ್ ಮಾಡಿಕೊಂಡಿದ್ದೇವೆ ಸ್ಟೇಟ್ ಬ್ಯಾಂಕ್‌ನಲ್ಲಿ ನಮ್ಮ ವೇತನದ ಖಾತೆಗಳಿವೆ. ಇತ್ತೀಚೆಗೆ ನಮ್ಮ ಗ್ರೂಪ್‌ಗೆ ಸಂದೇಶ ‘ಸ್ಟೇಟ್‌ ಬ್ಯಾಂಕ್‌ ವತಿಯಿಂದ ರಿವಾರ್ಡ್ ಹಣ ಬಂದಿದೆ. ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡರೆ, ನಿಮ್ಮ ಖಾತೆಗೆ ಹಣ ಜಮೆ ಆಗುತ್ತದೆ’ ಎಂದು ಬರೆಯಲಾಗಿತ್ತು. ಅದನ್ನು ನಂಬಿದ್ದ ಇಬ್ಬರು ಸಹೋದ್ಯೋಗಿಗಳು, ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು ವೈಯಕ್ತಿಕ ಮಾಹಿತಿ ಅಪ್‌ಲೋಡ್ ಮಾಡಿದ್ದರು. ಅದಾದ ಕೆಲವೇ ನಿಮಿಷಗಳಲ್ಲಿ ಅವರ ಖಾತೆಯಿಂದ ಹಣ ಕಡಿತವಾಗಿದೆ’ ಎಂದು ಖಾಸಗಿ ಕಂಪನಿ ಉದ್ಯೋಗಿ ಸಂದೀಪ ಬಿರಾದಾರ ತಿಳಿಸಿದರು.

‘ಸಹೋದ್ಯೋಗಿಗಳ ಖಾತೆಯಲ್ಲಿ 10 ಸಾವಿರಕ್ಕಿಂತ ಕಡಿಮೆ ಹಣವಿತ್ತು. ಅದೆಲ್ಲವೂ ಕಡಿತವಾಗಿದೆ. ಹಣ ಕಳೆದುಕೊಂಡಿದ್ದ ಅವರು, 'ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಡಿ' ಎಂಬುದಾಗಿ ಸಂದೇಶ ಕಳುಹಿಸಿದರು. ಅವಾಗಲೇ, ಆ್ಯಪ್ ಮೂಲಕ ನಡೆಯುತ್ತಿರುವ ವಂಚನೆ ಗಮನಕ್ಕೆ ಬಂತು’ ಎಂದು ಹೇಳಿದರು.

ಪ್ರತಿ ನಿತ್ಯ ಹೆಚ್ಚುತ್ತಿರುವ ಪ್ರಕರಣ: ಆ್ಯಪ್ ವಂಚನೆಗೆ ಸಂಬಂಧಪಟ್ಟಂತೆ ತಾಲ್ಲೂಕಿನಲ್ಲಿ ನಿತ್ಯವೂ ಪ್ರಕರಣಗಳು ಬೆಳಕಿಗೆ ಬಂದರು ಆರೋಪಿಗಳ ಪತ್ತೆ ಮಾತ್ರ ಸಾಧ್ಯವಾಗುತ್ತಿಲ್ಲ.

ಬೇರೆ ಬೇರೆ ಖಾತೆಗಳಿಗೆ ಹಣ ವರ್ಗ

‘ಮೊಬೈಲ್ ಆ್ಯಪ್ ಇನ್‌ಸ್ಟಾಲ್ ಮಾಡಿಸಿ ದೋಚುತ್ತಿರುವ ಹಣವನ್ನು ಅರೋಪಿಗಳು ಒಂದು ಬ್ಯಾಂಕ್ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾಯಿಸಿಕೊಳ್ಳುತ್ತಿದ್ದಾರೆ. ಮೂರು ಹಂತದ ಖಾತೆಗಳನ್ನು ಪತ್ತೆ ಮಾಡಿದರೂ ಮುಂದಿನ ಹಂತದ ಖಾತೆಗಳ ಮಾಹಿತಿ ಲಭ್ಯವಾಗುತ್ತಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೃತ್ಯ ನಡೆದು ಒಂದು ಗಂಟೆಯೊಳಗೆ ಜನರು ದೂರು ನೀಡಿದರೆ ಅನುಮಾನಾಸ್ಪದ ಖಾತೆಗಳ ವಹಿವಾಟು ಬಂದ್ ಮಾಡಿಸಬಹುದು. ಇದರಿಂದ ಹಣ ವಾಪಸು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಮಾಹಿತಿ ನೀಡುವುದು ತಡವಾದರೆ ಹಣ ವಾಪಸು ಬರುವುದು ತುಂಬಾ ಕಷ್ಟ’ ಎಂದು ತಿಳಿಸಿವೆ.

ಫೋನ್‌ಪೇ ಪೇಟಿಎಂಗೂಗಲ್ ಪೇ ಹಾಗೂ ಇತರ ಆನ್‌ಲೈನ್ ಬ್ಯಾಂಕಿಂಗ್ ಸೇವೆ ಬಳಸುವವರೆಲ್ಲರೂ ಸೈಬ‌ರ್ ಅಪರಾಧಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಆಮಿಷಕ್ಕೆ ಒಳಗಾಗಬಾರದು.
ಅಲಿಸಾಬ್, ಸಿಪಿಐ, ಹುಲಸೂರ ಮತ್ತು ಬಸವಕಲ್ಯಾಣ ತಾಲ್ಲೂಕು
ಎರಡು ತಿಂಗಳ ಹಿಂದೆ ನನ್ನ ವಾಟ್ಸ್‌ಆ್ಯಪ್‌ಗೆ ಎಸ್‌ಬಿಐ ಆ್ಯಪ್‌ನ ಲಿಂಕ್ ಬಂದಿತ್ತು ಅದನ್ನು ಇನ್‌ಸ್ಟಾಲ್‌ ಮಾಡಿಕೊಂಡ ಹತ್ತು ನಿಮಿಷಗಳಲ್ಲಿ ನನ್ನ ಖಾತೆಯಿಂದ ₹ 4 ಸಾವಿರ ವಂಚನೆ ನಡೆದಿತ್ತು.
ದತ್ತಾತ್ರೇಯ ಸ್ವಾಮಿ, ಶಿಕ್ಷಕರು
ವಾಟ್ಸ್ಆ್ಯಪ್ ಗ್ರೂಪ್‌ವೊಂದಕ್ಕೆ ಎಸ್‌ಬಿಐ ಹೆಸರಿನಲ್ಲಿ ಬಂದಿರುವ ಮೊಬೈಲ್ ಆ್ಯಪ್ ಸಂದೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.