ಬೀದರ್: ‘ಬುಧವಾರ (ಸೆ.11) ರಾತ್ರಿ ನಡೆದ ಗಣೇಶನ ಮೂರ್ತಿಗಳ ಮೆರವಣಿಗೆಯಲ್ಲಿ ಪೊಲೀಸರಿಂದ ಅಶಾಂತಿಯ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರ ಕ್ರಮದಿಂದ ಮೆರವಣಿಗೆ ಕಣ್ತುಂಬಿಕೊಳ್ಳಲು ಬಂದಿದ್ದ ಅಪಾರ ಸಂಖ್ಯೆಯ ಜನ ಆತಂಕಕ್ಕೆ ಒಳಗಾಗಿದ್ದರು. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಗಣೇಶ ಮಹಾಮಂಡಳದವರ ಸಮಯ ಪ್ರಜ್ಞೆ, ಮನವೊಲಿಕೆಯಿಂದ ದೊಡ್ಡ ಅನಾಹುತ ತಪ್ಪಿದೆ’ ಎಂದು ಗಣೇಶ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರು ಏಕಾಏಕಿ ಡಿಜೆ ಬಂದ್ ಮಾಡಿಸಿದ್ದು ಖಂಡನಾರ್ಹ. ಯಾರ ಮನವೊಲಿಸಲು ಪೊಲೀಸರು ಈ ಕೆಲಸ ಮಾಡಿದ್ದಾರೆ ಗೊತ್ತಿಲ್ಲ. ಬೀದರ್ ಜಿಲ್ಲೆಯಲ್ಲಿ ಇನ್ನೂ ಹಲವು ಕಡೆಗಳಲ್ಲಿ ಗಣೇಶನ ಮೂರ್ತಿಗಳ ವಿಸರ್ಜನೆ ನಡೆಯಬೇಕಿದೆ. ಅಲ್ಲಿ ಇಂತಹ ಘಟನೆ ಮರುಕಳಿಸಬಾರದು ಎಂದು ಆಗ್ರಹಿಸಿದರು.
ಬೀದರ್ ನಗರದಲ್ಲಿ ಮಹಾಮಂಡಳದಿಂದ 1980ರಿಂದ ಗಣೇಶ ಉತ್ಸವವನ್ನು ಶಾಂತಿಯುತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಜಿಲ್ಲಾಡಳಿತ, ಸರ್ಕಾರದ ಪ್ರತಿನಿಧಿಗಳು ಹಾಗೂ ಮಹಾಮಂಡಳದವರು ಸೇರಿಕೊಂಡು ಸೌಹಾರ್ದಯುತವಾಗಿ ಉತ್ಸವ ಆಚರಿಸಲಾಗುತ್ತಿದೆ. ಜಾತಿರಹಿತ, ಧರ್ಮರಹಿತ, ರಾಜಕೀಯ ರಹಿತವಾಗಿ ಮಾಡಲಾಗುತ್ತಿದೆ. ಇದಕ್ಕೆ ಗಣೇಶ ಮಹಾಮಂಡಳ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಕಳೆದ ವರ್ಷ ಕೂಡ ಉತ್ತಮ ರೀತಿಯಲ್ಲಿ ಮೆರವಣಿಗೆ ನಡೆದಿತ್ತು. ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಈ ಸಲ ‘ಕಮ್ಯುನಿಕೇಷನ್ ಗ್ಯಾಪ್’ ಅಥವಾ ಬೇರೆನೂ ಕಾರಣವೋ ಗೊತ್ತಿಲ್ಲ ಪೊಲೀಸರಿಂದ ಸಹಕಾರ ಸಿಗಲಿಲ್ಲ ಎಂದು ಆರೋಪ ಮಾಡಿದರು.
ಪೊಲೀಸರು ನಡೆಸಿದ ಸಭೆಯಲ್ಲಿ ಡಿಜೆಗೆ ಅನುಮತಿ ಕೊಡುವುದಿಲ್ಲ. ರಾತ್ರಿ 10.30ಕ್ಕೆ ಬಂದ್ ಮಾಡುತ್ತೇವೆ ಎಂದು ಹೇಳಿದ್ದರು. ಪರಂಪರೆಯಂತೆ ಮೆರವಣಿಗೆ ಮಾಡುತ್ತೇವೆ ಎಂದು ನಾವು ಹೇಳಿದ್ದೆವು. ಚೌಬಾರ ಬಳಿ ರಾತ್ರಿ 12ಗಂಟೆಗೆ ಮೊದಲ ಗಣೇಶ ಬಂದಾಗ ಡಿಜೆ ನಿಲ್ಲಿಸಿದರು. ಲಕ್ಷಾಂತರ ಜನ ಮೆರವಣಿಗೆ ನೋಡಲು ಬಂದಿದ್ದಾರೆ. ಇನ್ನೆರಡು ಗಂಟೆ ಕಾಲಾವಕಾಶ ಕೊಟ್ಟರೆ ಮೆರವಣಿಗೆ ಮುಗಿಸುತ್ತೇವೆ ಎಂದು ಮನವಿ ಮಾಡಿದ್ದೆವು. ಆದರೆ, ಪೊಲೀಸರು ನಮ್ಮ ಮಾತು ಕೇಳಲಿಲ್ಲ. ರಾತ್ರಿ 2ಗಂಟೆಗೆ ಮುಗಿಯಬೇಕಿದ್ದ ಮೆರವಣಿಗೆ ನಸುಕಿನ ಜಾವ 5ಗಂಟೆಗೆ ಮುಗಿದಿದೆ. ಇದಕ್ಕೆ ಪೊಲೀಸರೇ ಕಾರಣ ಎಂದು ಆರೋಪಿಸಿದರು.
ಹಿಂದಿನ ವರ್ಷಗಳ ಮೇಲೆ ಮೆಲುಕು ಹಾಕಿದರೆ ಕೆಲವೊಮ್ಮೆ ತಡರಾತ್ರಿ 1ಗಂಟೆಗೆ, ಕೆಲವು ಸಲ ನಸುಕಿನ ಜಾವ 5ಗಂಟೆಯ ವರೆಗೆ ಮೆರವಣಿಗೆ ನಡೆದಿದೆ. ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಈ ವಿಷಯ ಗೊತ್ತಿದೆ. ಹೀಗಿದ್ದರೂ ಮೆರವಣಿಗೆಯಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಮಂಡ್ಯ, ರಾಯಚೂರಿನಲ್ಲಿ ಆಗಿದ್ದಂತೆ ಅನಾಹುತ ಆಗಿದ್ದರೆ ಅದರ ಹೊಣೆ ಯಾರು ಹೊತ್ತುಕೊಳ್ಳುತ್ತಿದ್ದರು. ಪೊಲೀಸ್ ಇಲಾಖೆಯವರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು. ಆದರೆ, ಅವರಿಂದಲೇ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇದು ದುರದೃಷ್ಟಕರ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್ ಅವರು ಮೆರವಣಿಗೆಯಲ್ಲಿ ಪೂಜೆ ನೆರವೇರಿಸಿದ್ದಾರೆ. ಶಾಂತಿಯುತವಾಗಿ ಹಬ್ಬ ಆಚರಿಸಿ ಎಂದು ಹೇಳಿ ನಿರ್ಗಮಿಸಿದ್ದಾರೆ. ಅವರು ಬಂದು ಹೋದ ನಂತರ ಪೊಲೀಸರು ಡಿಜೆ ಬಂದ್ ಮಾಡಿಸಿದ್ದಾರೆ. ಗಣೇಶ ಮಹಾಮಂಡಳದ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹಳೆ ಅನುಭವದಿಂದ ಪೊಲೀಸರು ಕೆಲಸ ಮಾಡಿಲ್ಲ. ನಾವು ಎಲ್ಲ ಗಣೇಶ ಮಂಡಳಿಯವರೊಂದಿಗೆ ಸಭೆ ನಡೆಸಿ, ಡಿಜೆ ಸೌಂಡ್ ಕಡಿಮೆ ಇಡಬೇಕು. ಎಲ್ಲರೂ ಸಮಯ ಪಾಲಿಸಬೇಕೆಂದು ತಿಳಿಸಿದ್ದೆವು. ಆದರೆ, ಕೆಲವರಿಂದ ವಿಳಂಬವಾಗಿದೆ. ಯಾವುದೋ ಕಾನೂನಿನ ನೆಪವೊಡ್ಡಿ ಹಬ್ಬ ಹಾಳುಗೆಡುವುದು. ದ್ವೇಷ ಸಾಧಿಸುವುದನ್ನು ಪೊಲೀಸರು ಬಿಡಬೇಕು ಎಂದು ಆಗ್ರಹಿಸಿದರು.
ಗಣೇಶ ಮಹಾಮಂಡಳದ ಮುಖಂಡ ಈಶ್ವರ ಸಿಂಗ್ ಠಾಕೂರ್ ಮಾತನಾಡಿ, 1980ರಿಂದ ಹಿಂದೂಗಳು ಗಣೇಶ ಉತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ, ಮೊದಲ ಸಲ ಸಂಪ್ರದಾಯ ಮುರಿಯುವ ಕೆಲಸವಾಗಿದೆ. ಒಡಕು ಮೂಡಿಸುವ ಕೆಲಸ ಜಿಲ್ಲಾಡಳಿತ ಮಾಡಿದೆ. ಗಣಪತಿ ಹಬ್ಬದಲ್ಲಿ ಮಾತ್ರ ಎಲ್ಲ ಸಮಾಜದವರು ಸೇರುತ್ತಾರೆ. ಎಲ್ಲರೂ ಕೂಡಿಕೊಂಡು ಮಾಡುವ ಹಬ್ಬವಿದೆ. ಪೊಲೀಸರು ಒಂದೆರೆಡು ಗಂಟೆ ಸಹಕಾರ ಕೊಟ್ಟಿದ್ದರೆ ಎಲ್ಲವೂ ಶಾಂತಿಯುತವಾಗಿ ಕೊನೆಗೊಳ್ಳುತ್ತಿತ್ತು ಎಂದು ಅಭಿಪ್ರಾಯ ಪಟ್ಟರು.
ಕಾನೂನಿನ ಬಗ್ಗೆ ಮಹಾಮಂಡಳ ಹಾಗೂ ಹಿಂದೂಗಳಿಗೆ ಅಪಾರ ಗೌರವವಿದೆ. ಪೊಲೀಸರು ಡಿಜೆ ಬಂದ್ ಮಾಡಿಸಿದ್ದರೂ ನಮ್ಮ ಜನರು ಶಾಂತಿಯಿಂದ ವರ್ತಿಸಿದ್ದಾರೆ. ನಮ್ಮ ಮಾತಿಗೆ ಬೆಲೆಕೊಟ್ಟು ಎಲ್ಲರೂ ರಸ್ತೆಯಲ್ಲಿ ಕುಳಿತು ಶ್ರೀರಾಮನ ಭಜನೆ ಮಾಡುವುದರ ಮೂಲಕ ಪ್ರತಿಭಟನೆ ಮಾಡಿದ್ದಾರೆ. ಇಡೀ ದೇಶದಲ್ಲಿ ಎಲ್ಲೂ ಇರದ ನಿಯಮ ಪೊಲೀಸರು ಬೀದರ್‌ನಲ್ಲಿ ಮಾಡಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಣೇಶ ಮಹಾಮಂಡಳದ ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಸೂರ್ಯಕಾಂತ ಶೆಟಕಾರ, ಮೆರವಣಿಗೆ ಸಮಿತಿ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಕಾರ್ಯದರ್ಶಿ ಚಂದ್ರಶೇಖರ ಗಾದಾ ಹಾಜರಿದ್ದರು.
‘ಬೇರೆಡೆ ಇಲ್ಲದ ನಿಯಮ ಬೀದರ್‌ನಲ್ಲೇಕೆ?’
‘ಮುಂಬೈ, ಹೈದರಾಬಾದ್, ಹುಬ್ಬಳ್ಳಿ, ಬೆಳಗಾವಿಯಲ್ಲಿ ಹಗಲು–ರಾತ್ರಿ ಗಣೇಶನ ಮೂರ್ತಿಗಳ ಮೆರವಣಿಗೆ ನಡೆಯುತ್ತದೆ. ಅಲ್ಲಿ ಪೊಲೀಸರು ತಡೆಯೊಡ್ಡುವುದಿಲ್ಲ. ನಮ್ಮ ಜಿಲ್ಲೆಯ ಪೊಲೀಸರು ಬೀದರ್‌ನಲ್ಲೇಕೆ ತಡೆಯೊಡ್ಡಿದ್ದಾರೆ ಎಂಬುದನ್ನು ತಿಳಿಸಬೇಕು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರಿಗೂ ಮನವಿ ಪತ್ರ ಸಲ್ಲಿಸಲಾಗುವುದು’ ಎಂದು ಗಣೇಶ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ತಿಳಿಸಿದರು.
‘ನಡುಬೀದಿಯಲ್ಲಿ ಮೆರವಣಿಗೆ ನಿಲ್ಲಿಸಿದ್ದು ಸರಿಯೇ?’
‘ಶಾಂತಿಯುತವಾಗಿ ನಡೆಯುತ್ತಿದ್ದ ಗಣೇಶನ ಮೆರವಣಿಗೆಯನ್ನು ಪೊಲೀಸರು ನಡುಬೀದಿಯಲ್ಲಿ ನಿಲ್ಲಿಸಿದ್ದು ಸರಿಯೇ? ಇದರಿಂದ ಇಡೀ ವಾತಾವರಣ ಹಾಳಾಗಿತ್ತು. ಯಾರ ಸೂಚನೆ ಮೇರೆಗೆ ಏಕಾಏಕಿ ಮೆರವಣಿಗೆ ನಿಲ್ಲಿಸಿದ್ದಾರೆ ಎಂಬುದರ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಇದು ಬಾಂಗ್ಲಾದೇಶವಲ್ಲ’ ಎಂದು ಗಣೇಶ ಮಹಾಮಂಡಳದ ಮುಖಂಡ ಈಶ್ವರ ಸಿಂಗ್ ಠಾಕೂರ್ ಹೇಳಿದರು.
ಹಿಂದೂಗಳ ಹಬ್ಬದಲ್ಲಿ ಗೊಂದಲ ಸೃಷ್ಟಿಸಲಾಗಿದೆ. ನಮ್ಮನ್ನೇಕೆ ಟಾರ್ಗೆಟ್ ಮಾಡಲಾಗುತ್ತಿದೆ. ಮೆರವಣಿಗೆ ಕಣ್ತುಂಬಿಕೊಳ್ಳಲು ಮಕ್ಕಳು, ಮಹಿಳೆಯರು ಸೇರಿದಂತೆ ಲಕ್ಷಾಂತರ ಜನ ಬಂದಿದ್ದರು. ಆದರೆ, ಪೊಲೀಸರು ಡಿಜೆ ಬಂದ್ ಮಾಡಿಸಿ, ಮೆರವಣಿಗೆ ನಿಂತಿದ್ದರಿಂದ ಭಯದ ವಾತಾವರಣ ಸೃಷ್ಟಿಯಾಗಿತ್ತು. ಬೀದರ್ ಜಿಲ್ಲೆಯ ಇತಿಹಾಸದಲ್ಲಿ ಎಂದೂ ಈ ರೀತಿ ಆಗಿರಲಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.