ಔರಾದ್: ಇಷ್ಟು ದಿನ ಬೇಸಿಗೆ ಬಿಸಿಲಿನ ತಾಪದಿಂದ ಬಸವಳಿದ ಪಟ್ಟಣದ ಜನರಿಗೆ ಈಗ ಮಳೆಯಾದರೆ ಚರಂಡಿ ನೀರು ಮನೆ ಹಾಗೂ ರಸ್ತೆ ಮೇಲೆ ಹರಿಯುವ ಆತಂಕ ಎದುರಾಗಿದೆ.
ಪಟ್ಟಣದ ಶಿಕ್ಷಕರ ಕಾಲೊನಿಯ ದೇವಿ ಮಂದಿರದ ಬಳಿ ಚರಂಡಿ ನೀರಿಗೆ ಮುಕ್ತಿ ಸಿಗುವಂತಿಲ್ಲವಾಗಿದೆ. ಮಳೆಯಾದರೆ ಇಲ್ಲಿ ಬೇರೆ ಬೇರೆ ಕಡೆಯಿಂದ ನೀರು ಸಂಗ್ರಹವಾಗುತ್ತದೆ. ಈ ನೀರು ಮುಂದೆ ಹರಿದು ಹೋಗದೆ ನೈರ್ಮಲ್ಯ ಸಮಸ್ಯೆ ಎದುರಾಗುತ್ತದೆ. ಈ ನಡುವೆ ಹಾವು, ಚೇಳಿನ ಕಾಟದಿಂದ ಇಲ್ಲಿಯ ನಿವಾಸಿಗಳು ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಎರಡು ದಶಕದ ಹಿಂದೆ ಶಿಕ್ಷಕರ ಕಾಲೊನಿ ಎಂದರೆ ಸ್ವಚ್ಛತೆಗೆ ಹೆಸರುವಾಸಿಯಾಗಿತ್ತು. ಆದರೆ ಈಗ ಇಲ್ಲಿಯ ಉದ್ಯಾನಗಳು ನಿರ್ವಹಣೆ ಕೊರತೆಯಿಂದ ಪೂರ್ಣ ಹಾಳಾಗಿವೆ. ನಾಗರಿಕರು ನೆಮ್ಮದಿಯಿಂದ ಓಡಾಡಬೇಕಾದ ಉದ್ಯಾನಗಳು ನಾಯಿ, ಹಂದಿಗಳ ವಾಸವಾಗಿ ಪರಿಣಮಿಸಿದೆ ಎಂದು ಕಾಲೊನಿ ನಿವಾಸಿ ಅನೀಲ ಜಿರೋಬೆ ಆಕ್ರೋಶ ಹೊರ ಹಾಕಿದ್ದಾರೆ.
ಪಟ್ಟಣದ ಬಹುತೇಕ ಕಡೆ ಚರಂಡಿ ವ್ಯವಸ್ಥೆ ಸರಿಯಿಲ್ಲ. ಈಗ ಮಳೆಗಾಲ ಬರಲಿರುವ ಹಿನ್ನೆಲೆಯಲ್ಲಿ ಚರಂಡಿಯ ಹೂಳು ತೆಗೆದು ನೀರು ಸುಗಮವಾಗಿ ಹರಿದು ಹೋಗಲು ಅನುವು ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪಟ್ಟಣದ ಮುಖ್ಯ ರಸ್ತೆಯಲ್ಲಿನ ಚರಂಡಿಗಳು ತುಂಬಿಕೊಂಡಿವೆ. ಈಚೆಗೆ ಸುರಿದ ಅಲ್ಪ ಮಳೆಗೂ ಚರಂಡಿ ನೀರು ರಸ್ತೆಗೆ ಹರಿದಿವೆ. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿಯಾದ ತಹಶೀಲ್ದಾರ್ ಅವರು ಕಾಳಜಿ ವಹಿಸಿ ಪಟ್ಟಣದ ಸ್ವಚ್ಛತೆ ಕಡೆ ಆದ್ಯತೆ ನೀಡಬೇಕು ಎಂದು ಜೆಡಿಎಸ್ ಮುಖಂಡ ಮಲ್ಲಿಕಾರ್ಜುನ ಶೆಟಕಾರ್ ಆಗ್ರಹಿಸಿದ್ದಾರೆ.
‘ಎಲ್ಲೆಲ್ಲಿ ಚರಂಡಿ ಹೂಳು ತುಂಬಿದೆ ಎಂಬುದನ್ನು ಮಾಹಿತಿ ಕೊಡುವಂತೆ ಸಂಬಂಧಿತ ಅಧಿಕಾರಿಗೆ ಮಾಹಿತಿ ಕೇಳಿದ್ದೇನೆ. ನಾನೇ ಕೆಲ ಕಡೆ ಹೋಗಿ ಪರಿಶೀಲಿಸಿ ಆದಷ್ಟು ಬೇಗ ಚರಂಡಿ ಹೂಳು ತೆಗೆಯುವ ಕೆಲಸ ಮಾಡಿಸಲಾಗುವುದು’ ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುನೀಲ ಎಂ. ಬಬಲಾದಿ
ಮಳೆ ಬರುವ ಮುನ್ನ ಪಟ್ಟಣದಲ್ಲಿ ಚರಂಡಿ ಹೂಳು ತೆಗೆದು ಸ್ವಚ್ಛತೆ ಕಾಪಾಡಬೇಕು. ಇಲ್ಲವಾದಲ್ಲಿ ಜನ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ.ಅನೀಲ ಜಿರೋಬೆ ಶಿಕ್ಷಕರ ಕಾಲೊನಿ ನಿವಾಸಿ ಔರಾದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.