ಬಸವಕಲ್ಯಾಣ: ತಾಲ್ಲೂಕಿನ ಭೋಸ್ಗಾ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಸ್ವರೂಪ ಪಡೆದಿದ್ದು, ಅಂತರ್ಜಲ ಕುಸಿತದಿಂದಾಗಿ ಹೊಸ ಕೊಳವೆ ಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಇದರಿಂದಾಗಿ ಜನರು ನೀರಿಗಾಗಿ ಪರದಾಡುವಂತಾಗಿದೆ.
ಕಿರು ನೀರು ಪೊರೈಕೆ ಯೋಜನೆ ಮತ್ತು ಜೆಜೆಎಂ ನೀರು ಸರಬರಾಜು ಯೋಜನೆಯ ಮೂಲಕ ಎಲ್ಲರಿಗೂ ನೀರು ಒದಗಿಸಲಾಗುತ್ತದೆ. ಎರಡು ತೆರೆದ ಬಾವಿಗಳು ಹಾಗೂ 14 ಕೊಳವೆ ಬಾವಿಗಳಿಂದ ಈ ಯೋಜನೆಗಳ ಮೂಲಕ ಗ್ರಾಮಸ್ಥರಿಗೆ ನೀರು ದೊರಕುತ್ತದೆ. ಆದರೆ ಮಳೆ ಕೊರತೆಯ ಕಾರಣ ಅಂತರ್ಜಲದ ಮಟ್ಟ ಕುಸಿದಿದ್ದರಿಂದ ಕೆಲ ದಿನಗಳಿಂದ ಕೊಳವೆಬಾವಿಗಳಿಂದ ನಿಂತು ನಿಂತು ನೀರು ಬರುತ್ತಿದೆ. ಹೀಗಾಗಿ ಖಾಸಗಿಯವರ ಬಾವಿಯ ನೀರು ತೆರೆದ ಬಾವಿಯಲ್ಲಿ ಸುರಿದು ನಳಗಳಿಗೆ ಬಿಡುವ ಪರಿಸ್ಥಿತಿ ಬಂದಿದೆ.
ಗ್ರಾಮದ 1ನೇ ವಾರ್ಡ್‌ನಲ್ಲಿನ ಭೀಮನಗರ, ಶಿರೂರಿ ರಸ್ತೆ, ಕೊಹಿನೂರ ರಸ್ತೆಗಳ ಪಕ್ಕದ ಓಣಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಇತರೆ ಓಣಿಗಳಲ್ಲಿಯೂ ನಿಯಮಿತವಾಗಿ ನೀರು ದೊರಕುತ್ತಿಲ್ಲ.
‘ಒಂದನೇ ವಾರ್ಡ್‌ನ ನಿವಾಸಿಗಳು ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಈಚೆಗೆ ಖಾಲಿ ಕೊಡಗಳ ಸಮೇತ ಪ್ರತಿಭಟನೆ ನಡೆಸಿದ್ದಾರೆ. ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಯಾರೂ ಈ ಕಡೆ ಲಕ್ಷ ನೀಡಿಲ್ಲ. ಇನ್ನು ಮುಂದಾದರೂ ಸ್ಪಂದಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು' ಎಂದು ವಾರ್ಡ್ ನಿವಾಸಿ ನಿತೀನ ಕಾಂಬಳೆ ಮತ್ತು ಜನಾರ್ದನ ಶಿಂಧೆ ಹೇಳಿದ್ದಾರೆ.
‘ಬೇಸಿಗೆಯ ಬಿಸಿಲು ಹೆಚ್ಚುತ್ತ ಹೋದಂತೆ ಎಲ್ಲ ಓಣಿಗಳಲ್ಲಿ ಹಾಗೂ ಪಂಚಾಯಿತಿ ವ್ಯಾಪ್ತಿಯ ಶಿರೂರಿ, ವಡ್ಡರ್ಗಾ ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಲಿದ್ದು, ಅಲ್ಲಿಯೂ ನೀರಿನ ವ್ಯವಸ್ಥೆಗೈಯಬೇಕು’ ಎಂದು ಮನೋಜ ಬಿರಾದಾರ, ದಶರಥ ಚಾಮೆ, ಜಾಫರಸಾಬ ಆಗ್ರಹಿಸಿದ್ದಾರೆ.
‘ಅಂತರ್ಜಲದ ಮಟ್ಟ ಕುಸಿದ ಕಾರಣ ಕೊಳವೆ ಬಾವಿಗಳು ಕೆಟ್ಟುನಿಂತಿದ್ದರಿಂದ ಸಮಸ್ಯೆ ಆಗಿದೆ. ಗ್ರಾಮ ಪಂಚಾಯಿತಿಯಿಂದ ಲೋಪವಾಗದಂತೆ ನೋಡಿಕೊಳ್ಳುತ್ತಿದ್ದು, ಈ ಸಂಕಟಕ್ಕೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಗ್ರಾ.ಪಂ ಅಧ್ಯಕ್ಷೆ ಸುಷ್ಮಾ ಸಂತೋಷ ಚವಾಣ ಹೇಳಿದರು.
‘ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ’ ಎಂದು ಇಲಾಖೆ ಎಇಇ ಶಿವರಾಜ ಪಲ್ಲೇರಿ ತಿಳಿಸಿದ್ದಾರೆ.
‘ತಕ್ಷಣಕ್ಕೆ ಒಂದು ಕೊಳವೆ ಬಾವಿಯಲ್ಲಿ ರೀಬೋರಿಂಗ್ ಕೈಗೊಂಡು ನಂತರ ಹೊಸ ಕೊಳವೆ ಬಾವಿ ಕೊರೆಯಿಸುವುದಕ್ಕೂ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅದುವರೆಗೆ ಖಾಸಗಿ ಬಾವಿಗಳಿಂದ ನೀರು ಪಡೆಯಲಾಗುವುದು’ ಎಂದು ಪಿಡಿಒ ಅಬ್ದುಲ್ ರಜಾಕ ತಿಳಿಸಿದ್ದಾರೆ.
ಪಿಡಿಒ ಅವರಿಂದ ಹೆಚ್ಚಿನ ಮಾಹಿತಿ ಪಡೆದು ಭೋಸ್ಗಾದಲ್ಲಿನ ಸಮಸ್ಯೆ ಬಗೆಹರಿಸಲಾಗುವುದು. ತಾಲ್ಲೂಕಿನಲ್ಲಿ ಇತರೆಡೆ ನೀರಿನ ಸಂಕಟ ಇಲ್ಲ.- ರಮೇಶ ಸುಲ್ತೆ, ಇಒ ತಾ.ಪಂ
ನೀರಿನ ಸಮಸ್ಯೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಶೀಘ್ರ ಕ್ರಮ ತೆಗೆದುಕೊಳ್ಳದಿದ್ದರೆ ಧರಣಿ ಹಮ್ಮಿಕೊಳ್ಳಲಾಗುತ್ತದೆ.-ನಿತೀನ ಕಾಂಬಳೆ, ಗ್ರಾಮಸ್ಥ
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇತರೆ ಗ್ರಾಮಗಳಲ್ಲಿಯೂ ನೀರಿನ ಸಮಸ್ಯೆ ಉದ್ಭವಿಸದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಅವಶ್ಯಕವಾಗಿದೆ.-ಜನಾರ್ದನ ಶಿಂಧೆ, ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.