ಹುಲಸೂರ: ‘ತಾಲ್ಲೂಕಿನಲ್ಲಿ ಅಂತರ್ಜಲಮಟ್ಟ ಕುಸಿದಿದ್ದು, ಸಾವಿರ ಅಡಿಗಳಷ್ಟು ಒಳಗಿನಿಂದ ಬರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ನಿರ್ಮಾಣ ಮಾಡಿದ್ದರೂ ಜನಸಾಮಾನ್ಯರಿಗೆ ಪ್ರಯೋಜನವಾಗುತ್ತಿಲ್ಲ’ ಎಂದು ವಿವಿಧ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಈ ಸಮಸ್ಯೆ ಒಂದಲ್ಲ, ಎರಡಲ್ಲ ಹುಲಸೂರ ತಾಲ್ಲೂಕಿನ ಸಮೀಪದ 7 ಗ್ರಾಮಗಳ ಜನ ಶುದ್ದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಸೈಕಲ್, ಬೈಕ್, ಕೈಗಾಡಿಗಳ ಮೇಲೆ ಕೊಡಗಳನ್ನು ಇಟ್ಟುಕೊಂಡು ಶುದ್ಧ ನೀರಿಗಾಗಿ ಅಲೆದಾಡ ತೊಡಗಿದ್ದಾರೆ.
ಗಡಿರಾಯಪಳ್ಳಿ, ಹುಲಸೂರ, ಮೆಹಕರ, ಮಾಣಿಕೆಶ್ವರ, ಮಿರಖಲ, ಅಂಬೆವಾಡಿ, ಕೋಟಮಾಳ, ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ಎರಡು ವರ್ಷಗಳಿಂದ ದುರಸ್ತಿಗೆ ಬಂದಿದ್ದು, ಸ್ಥಳೀಯ ನಿವಾಸಿಗಳು ಕುಡಿವ ನೀರಿಗೆ ಪರದಾಡುವ ಪರಿಸ್ಥಿತಿ ನಿಮಾರ್ಣವಾಗಿದೆ.
ಕೊಳವೆಬಾವಿಗಳಿಂದ ಬರುವ ನೀರಿಗೂ ಘಟಕದ ನೀರಿಗೂ ವ್ಯತ್ಯಾಸವೇ ಇಲ್ಲ. ಇದು ಜನರಿಗೆ ಗೊತ್ತಾಗುತ್ತಿಲ್ಲ. ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಶುದ್ಧ ಕುಡಿಯುವ ನೀರಿನ ಹೆಸರಿನಲ್ಲಿ ಅಶುದ್ಧ ನೀರು ಕೊಡುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಅಧಿಕಾರಿಗಳು ಶುದ್ಧ, ಅಶುದ್ಧ ನೀರು ಹೀಗೆ ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ನೀರು ಒದಗಿಸುವ ಕಾರ್ಯಕ್ಕೆ ಮಾತ್ರ ಮಹತ್ವ ನೀಡಿದ್ದಾರೆ. ಗ್ರಾಮಗಳ ಜನರು ಮಾತ್ರ ಶುದ್ಧ ಕುಡಿಯುವ ನೀರಿಗಾಗಿ ಅಲೆದಾಡುವುದು ತಪ್ಪಿಲ್ಲ. ಈ ವಿಷಯಕ್ಕೆ ಗ್ರಾಮದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕ ಗುತ್ತಿಗೆ ಪಡೆದವರಿಗೆ 4 ವರ್ಷಗಳ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಡಲಾಗಿತ್ತು. ಹಣ ಪಡೆದವರು ನಿರ್ವಹಣೆಯನ್ನೇ ಮಾಡದೇ ಪರಾರಿಯಾಗಿದ್ದಾರೆ. ಮೂರ್ನಾಲ್ಕು ವರ್ಷ ಹಳೆಯದಾದ ಘಟಕಗಳಲ್ಲಿ ಫಿಲ್ಟರ್ ಕೆಟ್ಟು ನಿಂತಿವೆ. ಹೀಗಾಗಿ ನೀರು ಶುದ್ಧೀಕರಣವೇ ಆಗುತ್ತಿಲ್ಲ.
‘ಸರ್ಕಾರ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ನಿರ್ಮಿಸಿದ ಶುದ್ಧ ನೀರಿನ ಘಟಕಗಳನ್ನು ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿರುವುದು ಸರಿಯಲ್ಲ. ತಕ್ಷಣವೇ ಇಲ್ಲಿನ ಶುದ್ಧ ಕುಡಿವ ನೀರಿನ ಘಟಕ ಸರಿಪಡಿಸಲು ಮುಂದಾಗಬೇಕು’ ಎಂದು ವಿವಿಧ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಫಿಲ್ಟರ್‌ಗಳು ಕೆಟ್ಟು ನಿಂತಿರುವುದರಿಂದಾಗಿ ಘಟಕದಿಂದ ಜನರು ಪಡೆಯುತ್ತಿರುವ ನೀರು ವಿಷ ಮುಕ್ತ, ರೋಗಾಣು ಇಲ್ಲದ ಅಥವಾ ಪರಿಶುದ್ಧ ಎಂಬುದನ್ನು ಹೇಳುವಂತಿಲ್ಲ. ಘಟಕದ ನೀರು ಶುದ್ಧೀಕರಣವಾಗಿರುತ್ತದೆ ಎಂದು ನಂಬಿ ಜನರು ಕುಡಿಯುತ್ತಿದ್ದಾರೆ. ಈ ಬಗ್ಗೆ ಇಲಾಖೆ ನಿಗಾವಹಿಸಿಲ್ಲ ಎಂದು ದೂರುಗಳೂ ಇವೆ.
ಸಂಬಂಧಪಟ್ಟ ಗ್ರಾ.ಪಂ.ನವರು ಶುದ್ಧ ಘಟಕದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕೊಳವೆ ಬಾವಿ, ಜೆಜೆಎಂ ನೀರನ್ನು ಕುಡಿದ ಕಾರಣ ನೆಗಡಿ, ಕೆಮ್ಮು, ಜ್ವರ ಮೊದಲಾದ ರೋಗಗಳ ಭಯ ಕಾಡುತ್ತಿದೆ. ಕೆಟ್ಟು ನಿಂತಿರುವ ನೀರಿನ ಶುದ್ಧೀಕರಣ ಘಟಕಗಳು ಶೀಘ್ರ ಜನರ ಉಪಯೋಗಕ್ಕೆ ಬರುವಂತೆ ಸರಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲ್ಲೂಕಿನಲ್ಲಿ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿರುವ ಶುದ್ಧ ನೀರಿನ ಘಟಕಗಳ ದುರಸ್ತಿಗೆ ಅಂದಾಜು ವೆಚ್ಚದ ಮಾಹಿತಿ ಸಿದ್ಧಪಡಿಸಿಕೊಂಡು ಟೆಂಡರ್ ಕರೆಯಲಾಗಿದೆ. ಸೂಕ್ತ ಕ್ರಮ ಕೈಗೊಳ್ಳುವೆ-ಮಹದೇವ ಬಾಬಳಗಿ, ತಾ.ಪಂ. ಇಒ
ತಾಲ್ಲೂಕಿನ ಸಮೀಪದ ಹಲಸಿ ತುಗಾಂವ ಗುತ್ತಿ ಮಾಚನಾಳ ದೇವನಾಳ ಮುಚ್ಚಲಂಬ ಮುಸ್ಥಾಪುರ ಲಿಂಬಾಪೂರ್ ಹಾಲಹಳ್ಳಿ ಕದಿರಾಬಾದ್ ವಾಡಿ ತೊಗಲೂರ ಕೊಂಗಳಿ ವಾಂಜರವಾಡಿ ಆನಂದವಾಡಿ ಹರೇವಾಡಿ ಎಲ್ಲಮ್ಮವಾಡಿ ಶ್ರೀಮಾಳಿ ನಾರದಾ ಸಂಗಮ ಬೋಳೆಗಾಂವ್ ಸೋಲ ದಾಪಕ ಗೋವರ್ಧನ ತಾಂಡಾದಲ್ಲಿ ಇಲ್ಲಿಯವರೆಗೆ ಶುದ್ಧ ಕುಡಿಯುವ ನೀರಿನ ಘಟಕ ಇನ್ನೂ ಆರಂಭವಾಗಿಲ್ಲ. ಕೂಡಲೆ ಈ ಗ್ರಾಮದ ಜನರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಆಕಾಶ ಖಂಡಾಳೆ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.