ಔರಾದ್: ಬೇಸಿಗೆ ಆರಂಭದ ಹೊತ್ತಿನಲ್ಲೇ ತಾಲ್ಲೂಕಿನ ವಿವಿಧೆಡೆ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ತಾಲ್ಲೂಕಿನ ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಜಮಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಂಡಾಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ.
ಜಮಗಿಯಿಂದ ಎರಡೂವರೆ ಕಿ.ಮೀ. ದೂರದಲ್ಲಿರುವ ಘಾಮಾ ತಾಂಡಾದ ಜನ ಒಂದು ತಿಂಗಳ ಹಿಂದಿನಿಂದಲೇ ಕುಡಿಯಲು ನೀರಿನ ಕೊರತೆ ಎದುರಿಸುತ್ತಿದ್ದಾರೆ. ಈ ತಾಂಡಾದಲ್ಲಿ 150 ಮನೆಗಳಿದ್ದು, 600ಕ್ಕೂ ಹೆಚ್ಚು ಜನವಸತಿ ಇದೆ. ಇರುವ ಒಂದು ಕೊಳವೆ ಬಾವಿ ಬತ್ತಿ ಹೋಗಿರುವುದರಿಂದ ಜನ ಎರಡೂವರೆ ಕಿ.ಮೀ. ದೂರದಿಂದ ನೀರು ತರುವುದು ಅನಿವಾರ್ಯವಾಗಿದೆ.
‘ನಮ್ಮ ತಾಂಡಾದಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಇದೇ ರೀತಿಯ ನೀರಿನ ಸಮಸ್ಯೆ ಬರುತ್ತದೆ. ಆದರೆ ಇಲ್ಲಿಯ ತನಕ ಯಾರು ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಲ್ಲ. ನಾವು ಕೂಲಿಗೆ ಹೋಗಬೇಕಾಗಿರುವುದರಿಂದ ನಮ್ಮ ಮಕ್ಕಳು ಶಾಲೆ ಬಿಟ್ಟು ನೀರು ತರುವುದನ್ನೇ ಮಾಡುತ್ತಿದ್ದಾರೆ’ ಎಂದು ತಾಂಡಾ ನಿವಾಸಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
‘ಜಮಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಘಾಮಾ ತಾಂಡಾ, ದೇವಲಾ ತಾಂಡಾ., ಪೋಮಾ ತಾಂಡಾ, ತುಕಾರಾಮ ತಾಂಡಾದಲ್ಲಿ ಕುಡಿಯಲು ನೀರಿನ ಕೊರತೆಯಾಗಿದೆ. ಕೆಲ ಕಡೆ ರೀಬೋರ್ ಮಾಡಿ ಸಮಸ್ಯೆ ಬಗೆಹರಿಸಲಾಗಿದೆ. ಘಾಮಾ ತಾಂಡಾದಲ್ಲಿ ರೀಬೋರ್ ಮಾಡಿದರೂ ನೀರು ಬಂದಿಲ್ಲ. ಹೀಗಾಗಿ ಆ ತಾಂಡಾ ಜನ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಈ ತಾಂಡಾ ಪ್ರತಿನಿಧಿಸುವ ಗ್ರಾಮ ಪಂಚಾ ಯಿತಿ ಸದಸ್ಯ ವಿಠಲರಾವ್ ಹೇಳುತ್ತಾರೆ.
‘ಈ ತಾಂಡಾಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ನಾನು ಪದೇ ಪದೇ ಕೇಳುತ್ತಿದ್ದೇನೆ. ಆದರೆ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ವಲ್ಲೇಪುರ ಬಳಿ ಮಾಂಜ್ರಾ ನದಿ ಸಮೀಪ ಬಾವಿ ಕೊರೆದು ಅಲ್ಲಿಂದ ನೀರು ತರುವಂತೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರೂ ಪ್ರಯೋಜನವಾಗಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
‘ಈಗ ಬೇಸಿಗೆ ಇದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಪ್ರಾಮಾಣಿಕ ಕಾಳಜಿ ಆಗುತ್ತಿಲ್ಲ. ಪಿಡಿಒ ಅವರು ಯಾವಾಗ ಬಂದು ಹೋಗುತ್ತಾರೆ ಎಂಬುದು ಜನರಿಗೆ ಗೊತ್ತೇ ಆಗುವುದಿಲ್ಲ. ಹೀಗಿರುವಾಗ ಸಮಸ್ಯೆ ಯಾರ ಮುಂದೆ ಹೇಳಿಕೊಳ್ಳಬೇಕು’ ಎಂದು ಜಮಗಿ ಗ್ರಾಮದ ನಿವಾಸಿ ಸಲ್ಲಾವುದ್ದಿನ್ ತಿಳಿಸಿದ್ದಾರೆ.
‘ಗಡಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಲಾಗಿದೆ. ಘಾಮಾ ತಾಂಡಾದಲ್ಲಿ ಸಮಸ್ಯೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಅಲ್ಲಿಯ ಪಿಡಿಒ ಅವರು ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸುದೇಶಕುಮಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.