ADVERTISEMENT

ಬೀದರ್‌ | ಗಾಂಜಾ, ನಶೆ ಬರಿಸುವ ವಸ್ತುಗಳ ಜಪ್ತಿ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 13:45 IST
Last Updated 24 ಅಕ್ಟೋಬರ್ 2024, 13:45 IST
<div class="paragraphs"><p>ವಶಪಡಿಸಿಕೊಂಡ ವಸ್ತುಗಳೊಂದಿಗೆ ‍ಪೊಲೀಸರು</p></div>

ವಶಪಡಿಸಿಕೊಂಡ ವಸ್ತುಗಳೊಂದಿಗೆ ‍ಪೊಲೀಸರು

   

– ಪ್ರಜಾವಾಣಿ ಚಿತ್ರ

ಬೀದರ್‌: ಇಲ್ಲಿನ ಮಾರ್ಕೆಟ್‌ ಠಾಣೆ ಪೊಲೀಸರು ದೀನ್‌ ದಯಾಳ್‌ ನಗರದಲ್ಲಿ ಗುರುವಾರ ಗಾಂಜಾ, ನಶೆ ಬರುವ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಮೂವರನ್ನು ಬಂಧಿಸಿದ್ದಾರೆ.

ADVERTISEMENT

ಅದೇ ಬಡಾವಣೆಯ ಸಾಯಿನಾಥ್‌, ಮೋಸಿನ್‌ ಹಾಗೂ ಮಹಿಳೆಯೊಬ್ಬರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

‘₹32 ಸಾವಿರ ಮೌಲ್ಯದ 100 ಎಂ.ಎಲ್‌.ನ 169 ‘ಕಫ್‌ ಸಿರಪ್‌’, ₹4 ಸಾವಿರದ 59 ಸಣ್ಣ ಗಾಂಜಾ ಪ್ಯಾಕೆಟ್‌ಗಳು, ₹1,382 ಮೌಲ್ಯದ ಗುಳಿಗೆಗಳು, ₹6 ಸಾವಿರದ ಮೂರು ಮೊಬೈಲ್‌, ₹10 ಸಾವಿರ ಮೌಲ್ಯದ ಒಂದು ಬೈಕ್‌ ಸೇರಿದಂತೆ ಒಟ್ಟು ₹54 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಅವರು ನಗರದಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಸಾಯಿನಾಥ್‌ ಹಾಗೂ ಮೋಸಿನ್‌ ದೀನ್‌ ದಯಾಳ್‌ ನಗರದಲ್ಲಿ ನಶೆ ಬರುವ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಲಾಯಿತು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅದೇ ಬಡಾವಣೆಯ ಮನೆಯಲ್ಲಿ ಸಂಗ್ರಹಿಸಿ ಇಡಲಾಗಿದ್ದ ಗಾಂಜಾ, ನಶೆಯ ವಸ್ತುಗಳನ್ನು ಜಪ್ತಿ ಮಾಡಿ, ಅಲ್ಲಿದ್ದ ಮಹಿಳೆಯೊಬ್ಬರನ್ನು ವಶಕ್ಕೆ ಪಡೆಯಲಾಯಿತು. ಇದರ ಮುಖ್ಯ ಆರೋಪಿ ಭರತ್‌ ತಲೆಮರೆಸಿಕೊಂಡಿದ್ದಾನೆ. ಭರತ್‌ನನ್ನು ಈ ಹಿಂದೆಯೂ ಇದೇ ಪ್ರಕರಣದಲ್ಲಿ ಬಂಧಿಸಲಾಗಿತ್ತು’ ಎಂದು ಮಾಹಿತಿ ಹಂಚಿಕೊಂಡರು.

‘ಕೆಮ್ಮು ಸೇರಿದಂತೆ ಇತರೆ ಕಾಯಿಲೆಗಳಿಗೆ ಉಪಯೋಗಿಸುವ ಸಿರಪ್‌, ಗುಳಿಗೆಗಳನ್ನು ವೈದ್ಯರ ಸಲಹೆ ಮೇರೆಗೆ ಮಾತ್ರ ಮೆಡಿಕಲ್‌ಗಳಲ್ಲಿ ಖರೀದಿಸಬಹುದು. ಆದರೆ, ಇವರು ಕಾನೂನುಬಾಹಿರವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರು’ ಎಂದು ಹೇಳಿದರು.

ಸೆನ್‌ ಕ್ರೈಮ್‌ ಪೊಲೀಸ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಶಿವಾನಂದ ಗಾಣಿಗೇರ, ಸಿಬ್ಬಂದಿ ಅರುಣ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಶಿವಕುಮಾರ, ಮಲ್ಲಿನಾಥ, ಪ್ರಶಾಂತ ರೆಡ್ಡಿ, ವಾಹನ ಚಾಲಕ ಸಿದ್ರಾಮ, ಮಾರ್ಕೆಟ್‌ ಠಾಣೆಯ ಎಎಸ್‌ಐ ಅನೀತಾ, ಸಿಬ್ಬಂದಿ ಸಂಗನಬಸವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳದಲ್ಲಿ ಯಾರೇ ನಶೆ ಬರುವ ವಸ್ತು, ಗಾಂಜಾ ಮಾರಾಟ ಅಥವಾ ಸಾಗಾಟ ಮಾಡುವುದು ಕಂಡು ಬಂದರೆ ಜನರು ಪೊಲೀಸರಿಗೆ ಮಾಹಿತಿ ನೀಡಬೇಕು. ಅಂತಹವರ ಹೆಸರು ಗೌಪ್ಯವಾಗಿಡಲಾಗುವುದು. ನಶೆಮುಕ್ತ ಜಿಲ್ಲೆ ನಮ್ಮ ಗುರಿ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಮಹೇಶ ಮೇಘಣ್ಣನವರ, ಚಂದ್ರಕಾಂತ ಪೂಜಾರಿ, ಡಿವೈಎಸ್ಪಿಗಳಾದ ಶಿವನಗೌಡ ಪಾಟೀಲ, ಸುನೀಲ್‌ ಕೊಡ್ಲಿ ಹಾಜರಿದ್ದರು.

‘ದೀಪಾವಳಿಯಲ್ಲಿ ಜೂಜಿಗಿಲ್ಲ ಅವಕಾಶ’

‘ದೀಪಾವಳಿ ಹಬ್ಬದ ಸಂದರ್ಭದಲ್ಲಿ ಯಾರೂ ಕೂಡ ಜೂಜಾಟ ಆಡುವಂತಿಲ್ಲ. ಎಲ್ಲಿಯೇ ಜೂಜು ಆಡಿದರೂ ಅದು ಕಾನೂನುಬಾಹಿರ. ಒಂದುವೇಳೆ ಕಾನೂನು ಉಲ್ಲಂಘಿಸಿ ಜೂಜಾಟದಲ್ಲಿ ತೊಡಗಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.