ADVERTISEMENT

ಬೀದರ್‌ ಪೊಲೀಸರಿಂದ ₹3 ಕೋಟಿ ಮೌಲ್ಯದ ಗಾಂಜಾ ಜಪ್ತಿ

ಒಡಿಶಾದ ಮಲ್ಕನಗಿರಿಯ ನಾಲ್ವರು ನ್ಯಾಯಾಂಗ ಬಂಧನಕ್ಕೆ; ಕಾರು– ಲಾರಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 10:52 IST
Last Updated 13 ಜುಲೈ 2024, 10:52 IST
<div class="paragraphs"><p>ಗಾಂಜಾ ಜಪ್ತಿ</p></div>

ಗಾಂಜಾ ಜಪ್ತಿ

   

ಬೀದರ್‌: ಇಲ್ಲಿನ ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕಿನ ಭಂಗೂರ್‌ ಚೆಕ್‌ ಪೋಸ್ಟ್‌ ಬಳಿ ಬೀದರ್‌ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ₹3.05 ಕೋಟಿ ಮೌಲ್ಯದ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.

ಘಟನೆ ಸಂಬಂಧ ಒಡಿಶಾ ರಾಜ್ಯದ ಮಲ್ಕನ್‌ಗಿರಿಯ ನಾಲ್ವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಗಾಂಜಾ ಸಾಗಾಣಿಕೆಗೆ ಬಳಸಿದ ಲಾರಿ ಹಾಗೂ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದ ಕಾರು ವಶಕ್ಕೆ ಪಡೆದಿದ್ದಾರೆ.

ADVERTISEMENT

₹3.05 ಕೋಟಿ ಬೆಲೆಬಾಳುವ 305 ಕೆಜಿ ಗಾಂಜಾ, ₹8 ಲಕ್ಷದ ಲಾರಿ, ₹6 ಲಕ್ಷ ಮೊತ್ತದ ಕಾರು, ₹9,500 ಮೌಲ್ಯದ ನಾಲ್ಕು ಮೊಬೈಲ್‌, ₹9,230 ನಗದು ಸೇರಿದಂತೆ ಒಟ್ಟು ₹3.19 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತ ನಾಲ್ವರ ವಿರುದ್ಧ ಮನ್ನಳ್ಳಿ ಪೊಲೀಸ್‌ ಠಾಣೆಯಲ್ಲಿ ಕಲಂ 20(ಬಿ), 21(3) ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

‘ಒಡಿಶಾದಿಂದ ಮಹಾರಾಷ್ಟ್ರಕ್ಕೆ ಲಾರಿ ಟಾಪ್‌ ಮೇಲೆ ಗಾಂಜಾ ಸಾಗಿಸಲಾಗುತ್ತಿತ್ತು. ಗಾಂಧಿಗಂಜ್‌ ಠಾಣೆಯ ಇನ್‌ಸ್ಪೆಕ್ಟರ್‌ ಹನುಮರೆಡ್ಡೆಪ್ಪಾ ಅವರಿಗೆ ಬಂದ ಖಚಿತ ಮಾಹಿತಿ ಆಧರಿಸಿ ಶುಕ್ರವಾರ ರಾತ್ರಿ ಮಳೆಯಲ್ಲಿಯೇ ನಮ್ಮ ಪೊಲೀಸರು ಕಾರ್ಯಾಚರಣೆ ನಡೆಸಿ ಭಂಗೂರ್‌ ಚೆಕ್‌ಪೋಸ್ಟ್‌ನಲ್ಲಿ ಗಾಂಜಾ ಜಪ್ತಿ ಮಾಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

305 ಕೆ.ಜಿ ಗಾಂಜಾ ಅನ್ನು ತಲಾ ಐದು ಕೆ.ಜಿ ಬ್ಯಾಗ್‌ಗಳಲ್ಲಿ ಪ್ಯಾಕ್‌ ಮಾಡಲಾಗಿತ್ತು. ಯಾರಿಗೂ ಅನುಮಾನ ಬಾರದಿರಲಿ ಎಂಬಂತೆ ಸರಕಿಲ್ಲದ ಖಾಲಿ ಲಾರಿಯ ಟಾಪ್‌ ಮೇಲೆ ಗಾಂಜಾ ಪ್ಯಾಕ್‌ಗಳನ್ನು ಜೋಡಿಸಿಟ್ಟು ಅದರ ಮೇಲೆ ಎರಡ್ಮೂರು ಟರ್ಪಾಲ್‌ ಹಾಕಿದ್ದರು. ಹೈದರಾಬಾದ್‌ ಮೂಲಕ ಜಿಲ್ಲೆ ಪ್ರವೇಶಿಸಿದ ಲಾರಿಯಲ್ಲಿ ಇಬ್ಬರು ವ್ಯಕ್ತಿಗಳಿದ್ದರೆ, ಅದರ ಮುಂದೆ ಎಸ್ಕಾರ್ಟ್‌ನಂತೆ ಇಬ್ಬರು ಕಾರಿನಲ್ಲಿ ಕುಳಿತುಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಮಾರ್ಗದಲ್ಲಿ ಪೊಲೀಸರು ಇದ್ದಾರೋ ಅಥವಾ ಇಲ್ಲವೋ ಎನ್ನುವುದರ ಬಗ್ಗೆ ಲಾರಿಯಲ್ಲಿದ್ದವರಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು ಎಂದು ತಿಳಿಸಿದರು.

‘ಬಂಧಿತ ನಾಲ್ಕೂ ಜನರು ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯವರು ಎಂದು ಹೇಳಿಕೊಂಡಿದ್ದಾರೆ. ಮಹಾರಾಷ್ಟ್ರಕ್ಕೆ ಗಾಂಜಾ ಸಾಗಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇದರ ಹಿಂದೆ ಯಾರ್‍ಯಾರು ಇದ್ದಾರೆ ಎನ್ನುವುದು ಇನ್ನಷ್ಟು ತನಿಖೆ ನಂತರ ಗೊತ್ತಾಗಲಿದೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಇನ್‌ಸ್ಪೆಕ್ಟರ್‌ಗಳು, ಸಿಬ್ಬಂದಿಗೆ ಬಹುಮಾನ ನೀಡಲಾಗುವುದು’ ಎಂದು ತಿಳಿಸಿದರು. 

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಡಿವೈಎಸ್ಪಿಗಳಾದ ಶಿವನಗೌಡ ಪಾಟೀಲ, ಜೆ.ಎಸ್‌. ನ್ಯಾಮೆಗೌಡರ, ಸಿಪಿಐ ಹನುಮರೆಡ್ಡೆಪ್ಪಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.