ಬೀದರ್: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಹಾಳುಗೆಡವುತ್ತಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆಯ ಕಾರ್ಯಕರ್ತರು ನಗರದಲ್ಲಿ ಬುಧವಾರ ಅರೆ ಬೆತ್ತಲೆ ಪ್ರತಿಭಟನಾ ರ್‍ಯಾಲಿ ನಡೆಸಿದರು.
ನಗರದ ಜನವಾಡ ರಸ್ತೆಯ ಡಾ.ಬಿ.ಆರ್. ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಆನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ದೇಶದ ಅಖಂಡತೆಗೆ ಧಕ್ಕೆ ತಂದೊಡ್ಡಲು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷದ ಸರ್ಕಾರಗಳು ಜನರ ಆಶೀರ್ವಾದದಿಂದ ಆಯ್ಕೆಯಾಗಿವೆ. ಆದರೆ, ತನಿಖಾ ಸಂಸ್ಥೆಗಳ ಮೂಲಕ ಅಲ್ಲಿನ ಸರ್ಕಾರಗಳನ್ನು ಅಸ್ಥಿರಗೊಳಿಸಿ, ಶಾಸಕರನ್ನು ಖರೀದಿಸಿ, ರಾಜೀನಾಮೆ ಕೊಡಿಸುತ್ತಿದೆ ಎಂದು ಆರೋಪಿಸಿದರು.
ಸಾಂವಿಧಾನಿಕ ಸಂಸ್ಥೆಗಳಾದ ಇಡಿ, ಸಿಬಿಐ, ಐಟಿ ಹಾಗೂ ರಾಜ್ಯಪಾಲರ ಮೇಲೆ ಒತ್ತಡ ಹೇರಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಬಿಜೆಪಿಯೇತರ ಸರ್ಕಾರಗಳನ್ನು ವಾಮ ಮಾರ್ಗದಿಂದ ಪತನಗೊಳಿಸಿ ಹಿಂಬಾಗಿಲಿನಿಂದ ಅಧಿಕಾರದ ಗದ್ದುಗೆ ಹಿಡಿಯುತ್ತಿದೆ. ಮನುವಾದವನ್ನು ಪ್ರತಿಪಾದಿಸುವ ಬಿಜೆಪಿ ಜಮೀನ್ದಾರಿ ರಾಜಕಾರಣದ ಮಾದರಿಯೊಂದು ದೇಶದಲ್ಲಿ ವ್ಯವಸ್ಥಿತವಾಗಿ ಮುನ್ನಡೆಸುತ್ತಿದೆ. ಸಿದ್ದರಾಮಯ್ಯನವರನ್ನು ಮುಡಾ ಪ್ರಕರಣದಲ್ಲಿ ಸಿಲುಕಿಸಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಹುನ್ನಾರ ನಡೆಸುತ್ತಿದೆ. ಕೋಮುವಾದಕ್ಕೆ ಈ ರಾಜ್ಯದಲ್ಲಿ ಸಿದ್ದರಾಮಯ್ಯ ದೊಡ್ಡ ತಡೆಗೋಡೆಯಾಗಿದ್ದಾರೆ. ಸಿದ್ದರಾಮಯ್ಯನವರನ್ನು ಅಧಿಕಾರದಿಂದ ದೂರ ಮಾಡುವುದೆಂದರೆ ಬಹುಜನರ ವಿಚಾರಧಾರೆಯ ಸೋಲಾದಂತೆ. ಆದರೆ, ಸಿದ್ದರಾಮಯ್ಯನವರ ಹಿಂದೆ ಬಹುಜನರು ಇದ್ದಾರೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.
ರಾಜಕೀಯ ಭ್ರಷ್ಟಾಚಾರ, ಸ್ವಜನಪಕ್ಷಪಾತ, ವಂಶಪಾರಂಪರ್ಯ ರಾಜಕಾರಣಕ್ಕೆ ಇತಿಶ್ರೀ ಹಾಡುವುದಾಗಿ ಹೇಳಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ, ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಭ್ರಷ್ಟಾ ರಾಜಕಾರಣಿಗಳನ್ನು ತನ್ನ ಪಕ್ಷಕ್ಕೆ ತೆಗೆದುಕೊಂಡಿದೆ. ಜಾರ್ಖಂಡ್, ದೆಹಲಿಯ ಮುಖ್ಯಮಂತ್ರಿಗಳನ್ನು ತನಿಖಾ ಸಂಸ್ಥೆಗಳ ಮೂಲಕ ಕೆಟ್ಟದಾಗಿ ನಡೆಸಿಕೊಂಡಿದೆ. ಇದು ಸರ್ವಾಧಿಕಾರಿ ಧೋರಣೆಗೆ ಸಾಕ್ಷಿ. ಪ್ರಜಾತಂತ್ರದ ಅಣಕ. ತನ್ನ ಧೋರಣೆಯನ್ನು ಬದಲಿಸಿಕೊಳ್ಳಬೇಕು. ಇಲ್ಲವಾದರೆ ಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಜಿಲ್ಲಾ ಸಂಘಟನಾ ಸಂಚಾಲಕರಾದ ಅಶೋಕ ಗಾಯಕವಾಡ, ರಾಜಕುಮಾರ ವಾಘಮಾರೆ, ಅರುಣ ಪಟೇಲ್, ಶಿವರಾಜ ತಡಪಳ್ಳಿ, ಪ್ರಮುಖರಾದ ವಾಮನ ಮೈಸಲಗೆ, ರಮೇಶ ಬೆಲ್ದಾರ, ಸತೀಶ ರತ್ನಾಕರ್, ಝರೆಪ್ಪ ವರ್ಮಾ, ಶಿರೋಮಣಿ ಹಲಗೆ, ಬಸವರಾಜ ಭಾವಿದೊಡ್ಡಿ, ರಾಹುಲ್ ಹಾಲಹಿಪ್ಪರ್ಗಾ, ವಿಜಯಕುಮಾರ ಭಾವಿಕಟ್ಟಿ, ಶಿವಕುಮಾರ ಗುನ್ನಳ್ಳಿ, ಗೌತಮ ಮುತ್ತಂಗಿಕರ್, ಜೈಭೀಮ ಚಿಮ್ಮನಾಯಕ, ಕರಣ ಜಡಗೆ, ಅಜೇಯ ದೀನೆ, ಬಾಬುರಾವ ಹೊನ್ನಾ, ವಿಠ್ಠಲದಾಸ್ ಪ್ಯಾಗೆ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.