ADVERTISEMENT

ಬೀದರ್‌: ನಿಧಾನ ಗತಿಯಲ್ಲಿ ರಿಂಗ್‌ ರೋಡ್‌ ಕಾಮಗಾರಿ

ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಇನ್ನಷ್ಟೇ ಸಿಗಬೇಕಿದೆ ಕೇಂದ್ರ ಸರ್ಕಾರದ ಅನುಮತಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 21 ಅಕ್ಟೋಬರ್ 2024, 8:04 IST
Last Updated 21 ಅಕ್ಟೋಬರ್ 2024, 8:04 IST
ರಿಂಗ್‌ ರೋಡ್‌
ರಿಂಗ್‌ ರೋಡ್‌   

ಬೀದರ್‌: ಇಚ್ಛಾಶಕ್ತಿಯ ಕೊರತೆಯಿಂದ ನಗರದ ರಿಂಗ್‌ರೋಡ್‌ ಕಾಮಗಾರಿ ಕುಂಟುತ್ತಾ ಏಳುತ್ತಾ ಸಾಗಿದೆ.

2015–16ರಲ್ಲಿ ರಿಂಗ್‌ ರೋಡ್‌ ನಿರ್ಮಾಣಕ್ಕೆ ಚಾಲನೆ ಸಿಕ್ಕಿತ್ತು. ಒಂಬತ್ತು ವರ್ಷಗಳು ಕಳೆದರೂ ಇದುವರೆಗೆ ರಿಂಗ್‌ರೋಡ್‌ ಕಾಮಗಾರಿ ಪೂರ್ಣಗೊಂಡಿಲ್ಲ. ಯಾವ ರೀತಿ ರಿಂಗ್‌ರೋಡ್‌ ಕುಂಟುತ್ತಾ ಸಾಗುತ್ತಿದೆಯೋ ಅದೇ ರೀತಿ ಜನ ಕೂಡ ಈ ರಸ್ತೆಯ ಸಂಪರ್ಕಕ್ಕಾಗಿ ಹುಡುಕಿಕೊಂಡು ಓಡಾಡುವ ಪರಿಸ್ಥಿತಿ ಇದೆ.

ದೇವ ದೇವ ವನದಿಂದ ಬೀದರ್‌–ಔರಾದ್‌ ರಸ್ತೆ, ಅಲ್ಲಿಂದ ಅಲಿಯಾಬಾದ್‌, ಕೊಳಾರ ಕೈಗಾರಿಕೆ ಪ್ರದೇಶದಿಂದ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನಂದಿನಗರದ ವರೆಗೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ನಂದಿನಗರದಿಂದ ದೇವ ದೇವ ವನದ ವರೆಗೆ ಇದುವರೆಗೆ ಕೆಲಸ ಮುಗಿದಿಲ್ಲ.

ADVERTISEMENT

ನಂದಿನಗರದಿಂದ ಯದಲಾಪುರ ಹೊರವಲಯದ ವರೆಗೆ 2.5 ಕಿ.ಮೀ ಕಾಮಗಾರಿಗೆ ಇತ್ತೀಚೆಗೆ ಚಾಲನೆ ಸಿಕ್ಕಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹ 8 ಕೋಟಿ ಅನುದಾನದಲ್ಲಿ ಈ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಜಂಗಲ್‌ ಕಟಿಂಗ್‌ ಕೆಲಸ ಆರಂಭಗೊಂಡಿದೆ.

ಆದರೆ, ಈ ರಸ್ತೆ ಮನ್ನಳ್ಳಿ ಮುಖ್ಯರಸ್ತೆಗೆ ಬಂದು ಸೇರಬೇಕು. ಈ ಪ್ರದೇಶದಲ್ಲಿ ಅರಣ್ಯ ಇರುವುದರಿಂದ ತೊಡಕಾಗಿ ಪರಿಣಮಿಸಿದೆ. ಈಗಾಗಲೇ ರಾಜ್ಯ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿದೆ. ಆದರೆ, ಕೇಂದ್ರ ಸರ್ಕಾರದಿಂದ ಇನ್ನಷ್ಟೇ ಅನುಮತಿ ಸಿಗಬೇಕಿದೆ. ಕೇಂದ್ರದಿಂದ ಅನುಮತಿ ಸಿಗುವವರೆಗೆ ಕಾಮಗಾರಿ ಕೈಗೆತ್ತಿಕೊಳ್ಳುವಂತಿಲ್ಲ. ಹೀಗಾಗಿಯೇ ಕಾಮಗಾರಿ ಪೂರ್ಣಗೊಳ್ಳಲು ವಿಳಂಬವಾಗುತ್ತಿದೆ.

ಒಂದು ವೇಳೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕರೆ ಯದಲಾಪುರದಿಂದ ಮನ್ನಳ್ಳಿ ರಸ್ತೆ, ಚಿಟ್ಟಾ, ಘೋಡಂಪಳ್ಳಿಯಿಂದ ರೈಲ್ವೆ ಮಾರ್ಗಕ್ಕೆ ಹೊಂದಿಕೊಂಡಂತೆ ಗುನ್ನಳ್ಳಿ ರಸ್ತೆ ಮಾರ್ಗವಾಗಿ ದೇವ ದೇವ ವನ ಸಮೀಪದ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು, ರಿಂಗ್‌ ರೋಡ್‌ ಸಂಪರ್ಕಿಸುವ ಗುಂಪಾ ಸರ್ಕಲ್‌ನಲ್ಲಿ ರಸ್ತೆ ಬಹಳ ಕಿರಿದಾಗಿದೆ. ಒಂದು ಭಾಗದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ವ್ಯಾಜ್ಯ ನ್ಯಾಯಾಲಯದಲ್ಲಿ ಇರುವುದರಿಂದ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಿತ್ಯ ವಾಹನ ದಟ್ಟಣೆ, ಅಪಘಾತಗಳು ಸರ್ವೇ ಸಾಮಾನ್ಯ ಎಂಬಂತಾಗಿದೆ. ಆದರೆ, ಯಾವುದಾದರೂ ಪ್ರಮುಖ ಕಾಮಗಾರಿ ಕೈಗೆತ್ತಿಕೊಂಡಾಗ ಸಣ್ಣಪುಟ್ಟ ಅಡೆತಡೆಗಳು ಬರುವುದು ಸಹಜ. ಆ ಸವಾಲುಗಳನ್ನು ಮೆಟ್ಟಿ ನಿಂತು ಅದನ್ನು ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ತೆರಿಗೆ ಪಾವತಿದಾರರು.

‘ಹರ್ಷ ಗುಪ್ತಾ ಅವರ ನಂತರ ಬಂದ ಜಿಲ್ಲಾಧಿಕಾರಿಗಳು ಇಚ್ಛಾಶಕ್ತಿ ತೋರಿಸುತ್ತಿಲ್ಲ. 2016ರಲ್ಲಿ ಅನುರಾಗ್‌ ತಿವಾರಿ ಕಾಲದಲ್ಲಿ ಹಳೆ ಆರ್‌ಟಿಒ ಕಚೇರಿಯಿಂದ ಚಿದ್ರಿ ವರೆಗೆ ಏರ್‌ಫೋರ್ಸ್‌ನವರೊಂದಿಗೆ ಜಿದ್ದಿಗೆ ಬಿದ್ದು ಕೆಲಸ ಮಾಡಿರುವುದು ಬಿಟ್ಟರೆ ಬೇರೆಯವರು ಎಳ್ಳಷ್ಟೂ ಕೆಲಸ ಮಾಡಲಿಲ್ಲ. ಜನಪ್ರತಿನಿಧಿಗಳಿಗಿಂತ ಅಧಿಕಾರಿಗಳ ಇಚ್ಛಾಶಕ್ತಿ ಮುಖ್ಯವಾದುದು. ಅವರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಅದಕ್ಕೆ ತಾಜಾ ನಿದರ್ಶನವೇ ಹರ್ಷ ಗುಪ್ತಾ’ ಎನ್ನುತ್ತಾರೆ ಮೈಲೂರಿನ ಹಿರಿಯ ನಾಗರಿಕ ರಾಮಶೆಟ್ಟಿ.

‘ರಿಂಗ್‌ರೋಡ್‌ ಹೇಗಿರಬೇಕೆಂದು ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಮಾಸ್ಟರ್‌ ಪ್ಲ್ಯಾನ್‌ನಲ್ಲಿಯೇ ಇದೆ. ಹೀಗಿದ್ದರೂ ಅನುಮತಿ, ಮತ್ತೊಂದು ನೆಪ ಹೇಳಿ ಕಾಲಹರಣ ಮಾಡಲಾಗುತ್ತಿದೆ. ವರ್ತುಲ ರಸ್ತೆ ಸಂಪೂರ್ಣ ಮುಗಿಯದ ಕಾರಣ ಜನರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಇದೆಲ್ಲ ಗೊತ್ತಿದ್ದರೂ ಜಾಣ ಮೌನ ವಹಿಸಿರುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಯಾವುದೇ ಒಂದು ಭಾಗ ಅಭಿವೃದ್ಧಿಗೊಳ್ಳಬೇಕಾದರೆ ಅಲ್ಲಿನ ರಸ್ತೆಗಳು ಪ್ರಮುಖ ಪಾತ್ರ ವಹಿಸುತ್ತವೆ. ರಿಂಗ್‌ರೋಡ್‌ ಬಂದ ನಂತರವೇ ನರಸಿಂಹ ಝರಣಿ, ಮಾಮನಕೇರಿ, ಅಷ್ಟೂರ್‌, ಬೆನಕನಳ್ಳಿ ರಸ್ತೆ, ಜನವಾಡ ರಸ್ತೆ, ಅಲಿಯಾಬಾದ್‌ ರಸ್ತೆಯಲ್ಲಿರುವ ಜಮೀನುಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಅನೇಕ ಮನೆಗಳು ಅಲ್ಲಿ ನಿರ್ಮಾಣಗೊಂಡಿವೆ. ರಿಂಗ್‌ರೋಡ್‌ ಪೂರ್ಣ ಪ್ರಮಾಣದಲ್ಲಿ ಮುಗಿದರೆ ಇತರೆ ಕಡೆಗಳಿಗೂ ಬೇಡಿಕೆ ಹೆಚ್ಚಾಗುತ್ತದೆ. ಹೊಸ ಹೊಸ ವಾಣಿಜ್ಯ ಕಟ್ಟಡಗಳು ತಲೆ ಎತ್ತುತ್ತವೆ. ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಿಗುತ್ತವೆ. ಸುಗಮ ಸಂಚಾರವೂ ಸಾಧ್ಯವಾಗುತ್ತದೆ’ ಎಂದು ಶಿವನಗರದ ಬಸವರಾಜ ಹೇಳಿದರು.

ವರ್ತುಲ ರಸ್ತೆ ಯಾವಾಗ? ಎಷ್ಟು?
* 2015–16ರಲ್ಲಿ ಶಹಾಪುರ ಗೇಟ್‌ ಸಮೀಪದ ದೇವ ದೇವ ವನದಿಂದ ಚಿಕ್ಕಪೇಟೆ ವರೆಗೆ 10 ಕಿ.ಮೀ. ಕೆಲಸ ಪೂರ್ಣ * 2016–17ರಲ್ಲಿ ಕೊಳಾರ ಕೈಗಾರಿಕಾ ಪ್ರದೇಶದಿಂದ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ವರೆಗೆ 6.7 ಕಿ.ಮೀ ರಸ್ತೆ ನಿರ್ಮಾಣ * 2022–23ಲ್ಲಿ ಚಿಕ್ಕಪೇಟೆಯಿಂದ ಅಲಿಯಾಬಾದ್‌ವರೆಗೆ 2.5 ಕಿ.ಮೀ ಕೆಲಸ ಮುಕ್ತಾಯ * 2024ರಲ್ಲಿ ಪಶು ವಿ.ವಿ.ಯಿಂದ ಯದಲಾಪುರವರೆಗೆ 2.5 ಕಿ.ಮೀ ರಸ್ತೆ ನಿರ್ಮಾಣ ಆರಂಭ
ಅರಣ್ಯ ಪ್ರದೇಶ ಬಂದಿರುವುದರಿಂದ ಕೇಂದ್ರದಿಂದ ಅನುಮತಿ ಪಡೆದು ರಸ್ತೆ ಪೂರ್ಣಗೊಳಿಸಲಾಗುವುದು. ಅಲ್ಲಲ್ಲಿ ಕೆಲವು ಕಡೆ ದೇವಸ್ಥಾನ ಸೇರಿದಂತೆ ಕೆಲ ಕಟ್ಟಡಗಳು ಬಂದಿವೆ. ಸಣ್ಣ ತಿರುವುಗಳಿವೆ. ಆದರೆ ರಿಂಗ್‌ ಆಕಾರದಲ್ಲಿಯೇ ರಿಂಗ್‌ರೋಡ್‌ ಪೂರ್ಣಗೊಳಿಸಲಾಗುವುದು.
–ಶಿವಶಂಕರ ಕಾಮಶೆಟ್ಟಿ ಕಾರ್ಯನಿರ್ವಾಹಕ ಎಂಜಿನಿಯರ್‌ ಲೋಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.