ADVERTISEMENT

ಹುಮನಾಬಾದ್: ಹುಡಗಿ ಹಳ್ಳಕ್ಕೆ ವಿಷಕಾರಿ ತ್ಯಾಜ್ಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 16:31 IST
Last Updated 8 ಜುಲೈ 2024, 16:31 IST
ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದ ಹಳ್ಳದಲ್ಲಿನ ನೀರು ಪರಿಶೀಲನೆ ಮಾಡುತ್ತಿರುವ ಅಧಿಕಾರಿಗಳು 
ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದ ಹಳ್ಳದಲ್ಲಿನ ನೀರು ಪರಿಶೀಲನೆ ಮಾಡುತ್ತಿರುವ ಅಧಿಕಾರಿಗಳು     

ಹುಮನಾಬಾದ್: ‘ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿನ ಕೆಲವು ಕಾರ್ಖಾನೆಗಳ ವಿಷಕಾರಿ ತ್ಯಾಜ್ಯವನ್ನು ತಂದು ಹುಡಗಿ ಹಳ್ಳದಲ್ಲಿ ಬಿಡುತ್ತಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಂಬಮ್ಮಾ ಆರೋಪಿಸಿದ್ದಾರೆ.

ತಾಲ್ಲೂಕಿನ ಹುಡಗಿ ಗ್ರಾಮದ ಹಳ್ಳದಲ್ಲಿ ತ್ಯಾಜ್ಯ ವೀಕ್ಷಣೆ ಮಾಡಿ ಅವರು ಮಾತನಾಡಿದರು. ‘ತ್ಯಾಜ್ಯದಿಂದಾಗಿ ಹಳ್ಳದಲ್ಲಿನ ಅನೇಕ ಮೀನುಗಳು ಮೃತಪಡುತ್ತಿವೆ. ಈ ಹಳ್ಳದ ಸುತ್ತಮುತ್ತಲೂ ರೈತರ ಹೊಲಗಳು ಹಾಗೂ ಸರ್ಕಾರಿ ಕೊಳವೆ ಬಾವಿಗಳು ಇವೆ. ತ್ಯಾಜ್ಯ ಬಿಟ್ಟಿರುವ ಕಾರಣ ಸದ್ಯ ಗ್ರಾಮಸ್ಥರು ಮತ್ತು ರೈತರು ಆತಂಕದಲ್ಲಿ ಇದ್ದಾರೆ. ಈ ಬಗ್ಗೆ ಮೇಲಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರಿಂದ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಡಿ.ಸಿದ್ದೀಕ್ ಷಾ, ಗ್ರಾ.ಪಂ. ಮಾಜಿ ಅಧ್ಯಕ್ಷ ಆನಂದ ಸೈನಿರ್, ಪಿಡಿಒ ಶಿವರಾಜ, ರಾಜಕುಮಾರ್ ಮಾಶಟ್ಟಿ, ಪ್ರಭು ಮಾಳನಾಯಕ್, ಸೈಯದ್ ಮುಜಿಬ್, ಎಂ.ಡಿ.ಜಿಲಾನಿ, ಮೋಹನ್ ಬಿರನ್ನಳ್ಳಿ, ಅಕ್ಬರ್ ಗಾಲಿಬ್, ಪ್ರಕಾಶ್ ಸಿದ್ದಣ್ಣ, ಶಿವರಾಜ ವಾಡೇಕರ್, ಮುಜಿಬ್ ಎಲಗಾರ್ ಸೇರಿದಂತೆ ಇತರರು ಹಾಜರಿದ್ದರು.

ADVERTISEMENT

ಅಧಿಕಾರಿಗಳ ಭೇಟಿ

ಹುಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳದಲ್ಲಿ ತ್ಯಾಜ್ಯ ಬಿಟ್ಟಿರುವ ವಿಷಯ ತಿಳಿದು ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು. ನಂತರ ಅವರು ಮಾತನಾಡಿ ‘ಹುಡಗಿ ಹಳ್ಳದಲ್ಲಿನ ನೀರು ತಾತ್ಕಾಲಿಕ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಕೆಮಿಕಲ್ ತ್ಯಾಜ್ಯದ ಅಂಶಗಳು ಕಂಡುಬಂದಿಲ್ಲ. ಇದು ಚರಂಡಿ ನೀರು ಇರಬಹುದು. ಆದರೂ ಸಹ ಈ ನೀರು ಪರೀಕ್ಷೆಗೆ ಕಳುಹಿಸಲಾಗುವುದು. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸಹಾಯಕ ಪರಿಸರ ಅಧಿಕಾರಿ ಭಾಸ್ಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.