ADVERTISEMENT

‘ಡಿಫೆನ್ಸ್‌’ ಖಾಲಿ ಬಾಟಲಿಯಲ್ಲಿ ಕಡಿಮೆ ಗುಣಮಟ್ಟದ ಮದ್ಯ!

ಜನರನ್ನು ವಂಚಿಸಿ ಹಣ ಗಳಿಸುತ್ತಿರುವ ಜಾಲ ಸಕ್ರಿಯ ಆರೋಪ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 13 ನವೆಂಬರ್ 2024, 5:58 IST
Last Updated 13 ನವೆಂಬರ್ 2024, 5:58 IST
ಅಬಕಾರಿ ಪೊಲೀಸರು ಜಪ್ತಿ ಮಾಡಿರುವ ‘ಡಿಫೆನ್ಸ್‌’ ನಕಲಿ ಮದ್ಯದ ಬಾಟಲಿಗಳು
ಅಬಕಾರಿ ಪೊಲೀಸರು ಜಪ್ತಿ ಮಾಡಿರುವ ‘ಡಿಫೆನ್ಸ್‌’ ನಕಲಿ ಮದ್ಯದ ಬಾಟಲಿಗಳು   

ಬೀದರ್‌: ಮಾರುಕಟ್ಟೆಯ ದರಕ್ಕೆ ಹೋಲಿಸಿದರೆ ‘ಡಿಫೆನ್ಸ್‌’ ಮದ್ಯ ಅರ್ಧಬೆಲೆಗೆ ಸಿಗುತ್ತದೆ. ಗುಣಮಟ್ಟವೂ ಉತ್ತಮವಾಗಿರುತ್ತದೆ ಎಂಬ ನಂಬಿಕೆಯೊಂದಿಗೆ ಅನೇಕರು ಮಿಲಿಟರಿ ಮದ್ಯ ಖರೀದಿಸುತ್ತಾರೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಹಣ ಗಳಿಸುವ ಮಾರ್ಗ ಕಂಡುಕೊಂಡಿದ್ದಾರೆ.

ಭಾರತೀಯ ವಾಯುಸೇನೆ, ಮಿಲಿಟರಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರು, ಸೇವೆಯಿಂದ ನಿವೃತ್ತರಾದವರಿಗೆ ಮಿಲಿಟರಿ ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಮದ್ಯ ಅತಿ ಕಡಿಮೆ ಬೆಲೆಗೆ ಸಿಗುತ್ತದೆ. ಬಹುತೇಕರಿಗೆ ಗೊತ್ತಿರುವಂತೆ ಅದನ್ನು ಖರೀದಿಸಿ, ತಮ್ಮ ಚಿರಪರಿಚಿತರಿಗೆ ಮಾರಾಟ ಮಾಡಿ ಹಣ ಗಳಿಸುತ್ತಾರೆ. ಉದಾಹರಣೆಗೆ ಮಿಲಿಟರಿ ಕ್ಯಾಂಟೀನ್‌ನಲ್ಲಿ ‘ಎಕ್ಸ್‌’ ಹೆಸರಿನ ಯಾವುದಾದರೂ ಒಂದು ಬ್ರ್ಯಾಂಡಿನ 750 ಎಂಎಲ್‌ ಬಾಟಲಿ ₹300ಕ್ಕೆ ಖರೀದಿಸಿದರೆ, ಅದನ್ನು ಹೊರಗೆ ₹600ರಿಂದ ₹700ಕ್ಕೆ ಮಾರಾಟ ಮಾಡುತ್ತಾರೆ. ಎಂಎಸ್‌ಐಎಲ್‌ ಸೇರಿದಂತೆ ಇತರೆ ಖಾಸಗಿ ಮಳಿಗೆಗಳಲ್ಲಿ ಅದರ ವಾಸ್ತವ ಬೆಲೆ ₹3 ರಿಂದ ₹4 ಸಾವಿರ ಇರುತ್ತದೆ. ಈ ಕಾರಣಕ್ಕಾಗಿಯೇ ಹೆಚ್ಚಿನವರು ಮಿಲಿಟರಿ ಕ್ಯಾಂಟೀನ್‌ನಲ್ಲಿ ಸಿಗುವ ‘ಡಿಫೆನ್ಸ್‌’ ಮದ್ಯ ಖರೀದಿಸಲು ಹೆಚ್ಚು ಇಷ್ಟಪಡುತ್ತಾರೆ.

ಮಿಲಿಟರಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಅವರದೇ ಚಿರಪರಿಚಿತರ ಮೂಲಕ ಸಂಪರ್ಕ ಸಾಧಿಸಿಕೊಂಡು ಮಾರಾಟ ಮಾಡಿ, ಗಣ ಗಳಿಸುತ್ತಾರೆ. ಅಲ್ಲಿ ಕೆಲಸ ನಿರ್ವಹಿಸುವವರು ಜೀವನೋಪಾಯಕ್ಕಾಗಿ ಸ್ವಲ್ಪ ಹಣದಾಸೆಗೆ ಹೀಗೆ ಮಾಡುತ್ತಾರೆ. ಆದರೆ, ಮಿಲಿಟರಿಗೂ ಅವರಿಗೂ ಏನೂ ಸಂಬಂಧವಿಲ್ಲದವರು ಅದರ ಹೆಸರೇಳಿಕೊಂಡು ಹಣ ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಅಬಕಾರಿ ಪೊಲೀಸರು ನ. 9ರಂದು ಬೀದರ್‌ನ ಶಹಾಗಂಜ್‌ ಲೇಬರ್‌ ಕಾಲೊನಿಯಲ್ಲಿ ಜಪ್ತಿ ಮಾಡಿರುವ ಮದ್ಯವೇ ಸಾಕ್ಷಿ. ಪ್ರಕರಣ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆದರೆ, ಹಿಂದೆ ಹಲವರಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ADVERTISEMENT

ಮದ್ಯ ಕುಡಿದು ಖಾಲಿಯಾದ ಬಾಟಲಿಗಳು ಗುಜರಿ ಅಂಗಡಿ ಸೇರುತ್ತವೆ. ಅಲ್ಲಿಂದ ಮುಂದೆ ಎಲ್ಲಿಗೆ ಹೋಗುತ್ತವೆ ಎಂಬುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಇನ್ನು, ಗುಜರಿ ಅಂಗಡಿಯವರು ಕೂಡ ಯಾರೇ ಬಂದರೂ ಅವರಿಗೆ ಖಾಲಿ ಬಾಟಲಿ ಮಾರಾಟ ಮಾಡುತ್ತಾರೆ. ಕೆಲವು ಕಡೆಗಳಲ್ಲಿ ನೇರ ಕಂಪನಿವಯರೇ ಖರೀದಿಸಿ ಕೊಂಡೊಯ್ಯುತ್ತಾರೆ. ಮತ್ತೆ ಕೆಲವು ಕಡೆಗಳಲ್ಲಿ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಕಾಂಪೌಂಡ್‌ಗೆ ಗಾಜಿನ ಚೂರು ಅಳವಡಿಕೆ ಸೇರಿದಂತೆ ಇತರೆ ಉದ್ದೇಶಕ್ಕಾಗಿ ಬಳಸಲು ಕೊಂಡೊಯ್ಯುತ್ತಾರೆ. ಆದರೆ, ಮಳಿಗೆಯವರು ಯಾರು ಯಾವ ಉದ್ದೇಶಕ್ಕಾಗಿ ಬಾಟಲಿಗಳನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ಪರಿಶೀಲಿಸಲು ಹೋಗುವುದಿಲ್ಲ.

ಆದರೆ, ಕೆಲವರು ನಿರ್ದಿಷ್ಟವಾಗಿ ಡಿಫೆನ್ಸ್‌ ಮದ್ಯದ ಬಾಟಲಿಗಳನ್ನೇ ಖರೀದಿಸಿ, ‘ಓಲ್ಡ್‌ ಟ್ಯಾವರಿನ್‌’, ‘8ಪಿಎಂ’ ವಿಸ್ಕಿ ಸೇರಿಸಿ, ಮಿಲಿಟರಿ ಮದ್ಯದ ಹೆಸರಲ್ಲಿ ಮಾರಾಟ ಮಾಡಿ ಹೆಚ್ಚು ಹಣ ಗಳಿಸುತ್ತಿದ್ದಾರೆ. ಜನ ಕೂಡ ಸೂಕ್ಷ್ಮವಾಗಿ ಪರಿಶೀಲಿಸಲು ಹೋಗದೆ ಅದರ ಬಲೆಗೆ ಬೀಳುತ್ತಿದ್ದಾರೆ.

‘ಶಹಾಗಂಜ್‌ನಲ್ಲಿ ಸಿಕ್ಕಿಕೊಂಡಿರುವ ವ್ಯಕ್ತಿ ನಿತ್ಯ ಏನಿಲ್ಲವೆಂದರೂ 25ರಿಂದ 30 ಡಿಫೆನ್ಸ್‌ ಬಾಟಲಿಗಳಲ್ಲಿ ಕಡಿಮೆ ಗುಣಮಟ್ಟದ ಮದ್ಯ ಸೇರಿಸಿ ಮಾರಾಟ ಮಾಡುತ್ತಿದ್ದ. ಅದು ಕೂಡ ಸ್ಲಂನಲ್ಲಿ. ಅಂಬಾದಾಸ್‌ ಇಸ್ಮಾಯಿಲ್‌ ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ. ಹೆಚ್ಚಿನ ಮಾಹಿತಿ ಕಲೆ ಹಾಕುವ ಕೆಲಸ ನಡೆಯುತ್ತಿದೆ. ತನಿಖೆ ನಂತರ ಇನ್ನಷ್ಟು ಸಂಗತಿಗಳು ಗೊತ್ತಾಗಬಹುದು’ ಎಂದು ಅಬಕಾರಿ ಬೀದರ್‌ ಉಪವಿಭಾಗದ ಡಿವೈಎಸ್‌ಪಿ ಆನಂದ್‌ ಉಕ್ಕಲಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಜಿಲ್ಲೆಯೊಂದರಿಂದಲ್ಲೇ ₹500 ಕೋಟಿಗೂ ಹೆಚ್ಚು ಆದಾಯ’

ಬೀದರ್‌ ಜಿಲ್ಲೆಯೊಂದರಿಂದಲೇ ವಾರ್ಷಿಕ ₹500 ಕೋಟಿಗೂ ಹೆಚ್ಚು ಆದಾಯ ಮದ್ಯ ಮಾರಾಟದಿಂದ ಸರ್ಕಾರದ ಖಜಾನೆ ಸೇರುತ್ತದೆ ಎಂದು ಅಬಕಾರಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ‘ಸುಮಾರು 4 ಲಕ್ಷ ಬಾಕ್ಸ್‌ ಮದ್ಯ 5ರಿಂದ 6 ಲಕ್ಷ ಬಾಕ್ಸ್‌ ಬಿಯರ್‌ ಪ್ರತಿ ವರ್ಷ ಜಿಲ್ಲೆಯಲ್ಲಿ ಮಾರಾಟವಾಗುತ್ತದೆ’ ಎಂದು ಅಬಕಾರಿ ಜಿಲ್ಲಾಧಿಕಾರಿ ಲಿಂಗನಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಡಾಬಾಗಳಿಗೆ ₹30 ಲಕ್ಷ ದಂಡ’

‘ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಜಿಲ್ಲೆಯ ಡಾಬಾಗಳಿಗೆ ಹೋದ ವರ್ಷ ₹30 ಲಕ್ಷ ದಂಡ ವಿಧಿಸಲಾಗಿದೆ’ ಎಂದು ಅಬಕಾರಿ ಜಿಲ್ಲಾಧಿಕಾರಿ ಲಿಂಗನಗೌಡ ಪಾಟೀಲ ತಿಳಿಸಿದ್ದಾರೆ. ‘ಮಿಲಿಟರಿ ಅಥವಾ ಅನ್ಯರಾಜ್ಯದ ಮದ್ಯ ಡಾಬಾಗಳಲ್ಲಿ ಸಿಕ್ಕರೆ ನೇರ ಬಂಧಿಸಲಾಗುತ್ತದೆ. ಇನ್ನು ಅನುಮತಿಯಿಲ್ಲದೆ ಸ್ಥಳೀಯ ಮದ್ಯ ಮಾರಾಟ ಮಾಡುತ್ತಿದ್ದರೆ ₹5 ಸಾವಿರದ ವರೆಗೆ ದಂಡ ವಿಧಿಸಲು ಅವಕಾಶ ಇದೆ. ಜಿಲ್ಲೆಯ ಎಲ್ಲ ಡಾಬಾಗಳ ಮೇಲೆ ನಿಗಾ ವಹಿಸಲಾಗಿದೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.