ADVERTISEMENT

ಪೊಲೀಸರ ಸೋಗಿನಲ್ಲಿ ಹಣ ದೋಚಿದ ಕಳ್ಳರು

ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 15:32 IST
Last Updated 30 ಮಾರ್ಚ್ 2024, 15:32 IST

ಬಸವಕಲ್ಯಾಣ (ಬೀದರ್‌ ಜಿಲ್ಲೆ): ಚುನಾವಣೆ ನೀತಿ ಸಂಹಿತೆ ಪರಿಶೀಲನೆಯ ನೆಪದಲ್ಲಿ ಪೊಲೀಸರ ಸೋಗಿನಲ್ಲಿ ಬಂದು ವ್ಯಕ್ತಿಯೊಬ್ಬರಿಂದ ₹80 ಸಾವಿರ ನಗದು ದೋಚಿರುವ ಘಟನೆ ನಗರ ಹೊರವಲಯದ ಅತ್ಲಾಪುರ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

‘ತೆಲಂಗಾಣದ ಕಮ್ಮಾರೆಡ್ಡಿ ಜಿಲ್ಲೆಯ ಸದಾಶಿವನಗರದ ರಾಮರೆಡ್ಡಿ ಚಿನ್ನದ ವ್ಯಾಪಾರಿ. ಆಗಾಗ ಹೈದರಾಬಾದ್‌ನಿಂದ ಮುಂಬೈಗೆ ಹೋಗಿ ಬಂಗಾರ ಖರೀದಿಸುತ್ತಾರೆ. ಶುಕ್ರವಾರ ಖಾಸಗಿ ಬಸ್‌ನಲ್ಲಿ ಹೈದರಾಬಾದ್‌ನಿಂದ ಮುಂಬೈಗೆ ಹೋಗುತ್ತಿದ್ದರು. ಬಸವಕಲ್ಯಾಣದ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಕಾಲ ಪ್ರಯಾಣಿಕರು ಶೌಚಾಲಯ ಬಳಸಲು ಬಸ್‌ ನಿಂತಿತ್ತು. ಅಲ್ಲಿಂದ ಕೂಗಳತೆ ದೂರದಲ್ಲಿ ಬಸ್‌ ತಡೆದ ಇಬ್ಬರು ಪೊಲೀಸ್‌ ಸಮವಸ್ತ್ರಧಾರಿಗಳು, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಪರಿಶೀಲನೆ ನಡೆಸಬೇಕಿದೆ ಎಂದು ಹೇಳಿ ರಾಮರೆಡ್ಡಿ ಬಳಿ ಹೋಗಿದ್ದಾರೆ. ಅವರ ಬಳಿಯಿದ್ದ ನಗದು ₹80 ಸಾವಿರ ತೆಗೆದುಕೊಂಡು, ಠಾಣೆಯಲ್ಲಿ ಕೇಸ್‌ ಮಾಡಿದರೆ ಜೈಲು ಶಿಕ್ಷೆಯಾಗುತ್ತದೆ ಎಂದು ಹೆದರಿಸಿ ಹಣದೊಂದಿಗೆ ಪರಾರಿಯಾಗಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ‘ಪ್ರಜಾವಾಣಿ’ಗೆ ಶನಿವಾರ ತಿಳಿಸಿದ್ದಾರೆ.

‘ಘಟನೆ ನಡೆದಾಗ ರಾಮರೆಡ್ಡಿ ಬಹಳ ಹೆದರಿದ್ದರು. ಹೀಗಾಗಿ ಅವರಿಗೆ ಏನು ಮಾಡಬೇಕೆಂದು ತೋಚಿರಲಿಲ್ಲ. ಕಳ್ಳರು ಠಾಣೆಗೆ ಕರೆದೊಯ್ಯುತ್ತೇವೆ ಎಂದು ಹೇಳಿದಾಗ ಹೆದರಿಕೊಂಡು ಹೋಗಿರಲಿಲ್ಲ. ಆನಂತರ ಅವರಿಗೆ ಅನುಮಾನ ಬಂದು ದೂರು ಕೊಟ್ಟಿದ್ದಾರೆ. ಹಣ ದೋಚಿದ ಇಬ್ಬರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಹಣ ದೋಚಿದವರು ರಾಮರೆಡ್ಡಿ ಅವರನ್ನು ಹೈದರಾಬಾದಿನಿಂದ ಬೆನ್ನತ್ತಿ ಬಂದಿರುವ ಸಾಧ್ಯತೆ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.