ADVERTISEMENT

ವಡಗಾಂವ್ ಪಂಚಾಯಿತಿಯಲ್ಲಿ ಇ–ಲೈಬ್ರರಿ

ಗ್ರಾಮೀಣ ಪ್ರದೇಶದಲ್ಲಿ ಇ-–ಸೌಲಭ್ಯಕ್ಕೆ ಆದ್ಯತೆ; ಎಲ್ಲಡೆ ಜಾಗೃತಿ ಅಭಿಯಾನ

ಮನ್ನಥಪ್ಪ ಸ್ವಾಮಿ
Published 6 ಡಿಸೆಂಬರ್ 2020, 5:55 IST
Last Updated 6 ಡಿಸೆಂಬರ್ 2020, 5:55 IST
ಔರಾದ್ ತಾಲ್ಲೂಕಿನ ವಡಗಾಂವ್ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಅಳವಡಿಸಿದ ಕಿಯೋಸ್ಕ್ ಯಂತ್ರದ ಬಗ್ಗೆ ಮಕ್ಕಳು ಕುತೂಹಲದಿಂದ ತಿಳಿದುಕೊಳ್ಳುತ್ತಿರುವುದು
ಔರಾದ್ ತಾಲ್ಲೂಕಿನ ವಡಗಾಂವ್ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಅಳವಡಿಸಿದ ಕಿಯೋಸ್ಕ್ ಯಂತ್ರದ ಬಗ್ಗೆ ಮಕ್ಕಳು ಕುತೂಹಲದಿಂದ ತಿಳಿದುಕೊಳ್ಳುತ್ತಿರುವುದು   

ಔರಾದ್: ಗ್ರಾಮೀಣ ಪ್ರದೇಶದಲ್ಲೂ ಅಂತರ್ಜಾಲ ಬಳಕೆ ಸುಲಭ ಮತ್ತು ಪರಿಣಾಮಕಾರಿಯಾಗಿಸಲು ಸರ್ಕಾರ ಇ–ಲೈಬ್ರರಿ ವ್ಯವಸ್ಥೆಗೆ ಮುಂದಾಗಿದೆ.

ಲಾಕ್‌ಡೌನ್ ಪರಿಣಾಮದಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣ ದಿಂದ ವಂಚಿತರಾಗುವುದನ್ನು ತಪ್ಪಿಸಲು ಗ್ರಾಮ ಪಂಚಾಯಿತಿಗಳಲ್ಲಿ ಇ–ಲೈಬ್ರರಿ ವ್ಯವಸ್ಥೆಗೆ ಆದೇಶ ಮಾಡಲಾಗಿದೆ.

ಈಗಾಗಲೇ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ‘ಓದುವ ಬೆಳಕು’ ಕಾರ್ಯಕ್ರಮ ಈಗಾಗಲೇ ಜಾರಿ ಮಾಡಲಾಗಿದೆ. ಹೆಸರು ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ ಓದಲು ವ್ಯವಸ್ಥೆ ಮತ್ತು ಅಗತ್ಯ ಪುಸ್ತಕ ಕೊಂಡುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಈ ಓದುವ ಬೆಳಕು ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಸ್ವಂತ ಕಟ್ಟಡ ಹಾಗೂ ಅಂತರ್ಜಾಲ ಸೌಲಭ್ಯ ಹೊಂದಿದ ಗ್ರಾಮ ಪಂಚಾಯಿತಿಗಳಲ್ಲಿ ಇ-ಗ್ರಂಥಾಲಯ ಆರಂಭಿಸಲು ಸರ್ಕಾರ ಸೂಚಿಸಿದೆ.

ADVERTISEMENT

ಅದರಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ವಡಗಾಂವ್ ಗ್ರಾಮ ಪಂಚಾಯಿತಿಯಲ್ಲಿ ಇ-ಗ್ರಂಥಾಲಯ ವನ್ನು ಈಚೆಗೆ ಉದ್ಘಾಟಿಸಿದರು. ಇಲ್ಲಿ ಕಂಪ್ಯೂಟರ್ ಮತ್ತು ಅಂತರ್ಜಾಲ ಸೌಲಭ್ಯವಿದ್ದು, ಬೇಕಾದ ವಿಷಯ, ಪುಸ್ತಕ ಮಾಹಿತಿ ಪಡೆದುಕೊಳ್ಳುವುದು, ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶವಿದೆ.

‘ಲಾಕ್‌ಡೌನ್ ವೇಳೆ ಓದುವ ಬೆಳಕು ಕಾರ್ಯಕ್ರಮ ಪರಿಣಾಮಕಾರಿ ಆಗಿದೆ. ಕೇಂದ್ರ ಗ್ರಂಥಾಲಯ ಸೇರಿದಂತೆ ವಿವಿಧೆಡೆಯಿಂದ ಒಂಬತ್ತು ಸಾವಿರಕ್ಕೂ ಹೆಚ್ಚು ಪುಸ್ತಕ ಸಂಗ್ರಹಿಸಿದ್ದೇವೆ. 100 ವಿದ್ಯಾರ್ಥಿಗಳು ಹೆಸರು ನೋಂದಾ ಯಿಸಿದ್ದು, ಅವರೆಲ್ಲರಿಗೂ ಬೇಕಾದ ಪುಸ್ತಕ ಮನೆಗೆ ಕೊಂಡೊಯ್ಯಲು ಅವಕಾಶ ನೀಡಲಾಗಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನೀಲಕುಮಾರ ತಿಳಿಸುತ್ತಾರೆ.

‘ಈಗ ಹೊಸದಾಗಿ ಕಟ್ಟಿರುವ ರಾಜೀವಗಾಂಧಿ ಸೇವಾ ಕೇಂದ್ರದಲ್ಲಿ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದೆ. ಲಭ್ಯವಿರುವ ಪುಸ್ತಕ ಓದುವುದರ ಜತೆಗೆ ಹೊಸ ಹೊಸ ವಿಷಯ ತಿಳಿದುಕೊಳ್ಳಲು ಮತ್ತು ಸಂಗ್ರಹಿಸಲು ಕಂಪ್ಯೂಟರ್ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಗ್ರಂಥ ಪಾಲಕರಿಗೆ ಸೂಕ್ತ ತರಬೇತಿ ನೀಡಲಾಗಿದೆ. ಅವರು ವಿದ್ಯಾರ್ಥಿಗಳಿಗೆ ಅಗತ್ಯ ಸಲಹೆ ನೀಡಲಿದ್ದಾರೆ’ ಎಂದು ಹೇಳಿದ್ದಾರೆ.

‘ಗ್ರಾ.ಪಂ.ಗಳಲ್ಲಿ ಇ-ಗ್ರಂಥಾಲಯ ಆರಂಭಿಸಲು ಮೇಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಪ್ರಥಮ ಹಂತದಲ್ಲಿ ಆಯ್ದ ಗ್ರಾಮ ಪಂಚಾಯಿತಿಯಲ್ಲಿ ಈ ವ್ಯವಸ್ಥೆ ಜಾರಿ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮಗಳ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರೆಯುವಂತೆ ನೋಡಿ ಕೊಳ್ಳಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.