ADVERTISEMENT

ಆಟದ ಮೈದಾನವಿಲ್ಲದ ಕಾಲೇಜು

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 7:15 IST
Last Updated 20 ಜೂನ್ 2024, 7:15 IST
ಹುಮನಾಬಾದ್ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು
ಹುಮನಾಬಾದ್ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು   

ಹುಮನಾಬಾದ್: ತಾಲ್ಲೂಕು ಕೇಂದ್ರದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹಲವಾರು ವರ್ಷಗಳಿಂದ ದೈಹಿಕ ಶಿಕ್ಷಣ ವಿಭಾಗಕ್ಕೆ ಉಪನ್ಯಾಸಕರು ಮಾತ್ರವಲ್ಲ ಇಲ್ಲಿಯೇ ಆಟದ ಮೈದಾನವೂ ಇಲ್ಲ. ಕಾಲೇಜಿನಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ಸೇರಿದಂತೆ ಒಟ್ಟು 316, ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇಷ್ಟೊಂದು ಸಂಖ್ಯೆಯ ವಿದ್ಯಾರ್ಥಿಗಳಿಗೆ ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ವಾಣಿಜ್ಯ, ಜೀವಶಾಸ್ತ್ರ, ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಕಾಡುತ್ತಿದೆ.

ಕಾಲೇಜಿನಲ್ಲಿ ಸೂಕ್ತವಾದ ಆಟದ ಮೈದಾನ ಇಲ್ಲವಾಗಿದೆ. ಇದರಿಂದಾಗಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಮಾತೃ ಭಾಷೆ ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ವಾಣಿಜ್ಯ, ಜೀವಶಾಸ್ತ್ರದ ವಿಷಯಗಳ ಖಾಯಂ ಶಿಕ್ಷಕರ ಹುದ್ದೆಗಳು ಖಾಲಿಯಾಗಿವೆ. ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದ ಅತಿಥಿ ಉಪನ್ಯಾಸಕರ ಮೂಲಕ ವಿಷಯಗಳನ್ನು ಬೋಧಿಸಲಾಗುತ್ತಿದೆ. ಕಾಯಂ ಉಪನ್ಯಾಸಕರನ್ನು ನೇಮಕ ಮಾಡಿಕೊಂಡರೆ ಕಲಿಕೆಗೆ ಉತ್ತಮ ಎನ್ನುತ್ತಾರೆ ವಿದ್ಯಾರ್ಥಿಗಳು.

ADVERTISEMENT

’20 ವರ್ಷಗಳ ಹಿಂದೆ ಆರ್‌ಐಡಿಪಿ ಯೋಜನೆಯಡಿ ಕಾಲೇಜಿನ ‌‌ನಾಲ್ಕು ಕೋಣೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಅವುಗಳ ಕಾಮಗಾರಿ ಈಗ ನೆನೆಗುದಿಗೆ ಬಿದ್ದಿದೆ. ಮಾಜಿ ಸಚಿವ ರಾಜಶೇಖರ ಪಾಟೀಲ ಅವರ ಅಧಿಕಾರ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ₹4.95 ಲಕ್ಷ ಅನುದಾನ ಒದಗಿಸಿದ್ದ ಕಾರಣ ನಾಲ್ಕರಲ್ಲಿ ಎರಡು ಕೊಠಡಿಗಳಿಗೆ ನೆಲ ಹಾಸು ಹಾಕಿ, ಬಾಗಿಲು ಜೋಡಿಸಿ ಬಣ್ಣ ಬಳಿಯಲಾಗಿದೆ. ಉಳಿದ ದುರಸ್ತಿ ಕಾರ್ಯ ನಡೆಯಬೇಕಿದೆ’ ಎಂದು ಕಾಲೇಜಿನ ಪ್ರಭಾರ ಪ್ರಾಂಶುಪಾಲ ತುಳಜಾರಾಮ್ ತಿಳಿಸಿದರು.

ಕಾಲೇಜಿನಲ್ಲಿ ಡಿಜಿಟಲ್ ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ರಾಷ್ಟ್ರೀಯ ಸೇವಾ ಯೋಜನೆ ಘಟಕ. ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿತರಿಗೆ ಪ್ರತ್ಯೇಕವಾದ ಶೌಚಾಲಯಗಳು ಇವೆ.

ಕಾಲೇಜಿಗೆ ಕಸದ ಕಂಟಕ: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲೇ ರಾಶಿಗಟ್ಟಲೆ ಕಸ ಸುರಿಯುತ್ತಿದ್ದು, ವಿದ್ಯಾರ್ಥಿಗಳು ಮುಜುಗರ ಪಟ್ಟುಕೊಳ್ಳುವಂತೆ ಆಗಿದೆ. ಕಾಲೇಜಿನ ಹಿಂಭಾಗದ ಗೋಡೆಯ ಪಕ್ಕದಲ್ಲಿಯೇ ಪ್ಲಾಸ್ಟಿಕ್‌ ತ್ಯಾಜ್ಯ, ಹಸಿ ಕಸವನ್ನು ಹಾಕಲಾಗಿದೆ. ಇದರಿಂದಾಗಿ ಗಬ್ಬು ವಾಸನೆ ಬೀರುತ್ತಿದ್ದು, ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ಇದೆ. ಕೆಲವೊಮ್ಮೆ ಪ್ಲಾಸ್ಟಿಕ್‌ ಕಸ ಗಾಳಿಯಲ್ಲಿ ಹಾರುತ್ತಾ ಕಾಲೇಜಿನ ಆವರಣಕ್ಕೂ ಬಂದು ಬೀಳುತ್ತಿದೆ.

ಸಾಕಷ್ಟು ದಿನಗಳಿಂದಲೂ ಇಲ್ಲಿ ಕಸವನ್ನು ಸುರಿಯಲಾಗುತ್ತಿದೆ. ಕಾಲೇಜಿನ ಉಪನ್ಯಾಸಕರು ಈ ಬಗ್ಗೆ ಪುರಸಭೆಗೆ ದೂರು ನೀಡುತ್ತಾ ಬಂದಿದ್ದಾರೆ. ಆದರೂ ಜನರು ರಸ್ತೆ ಬದಿ ಕಸ ಸುರಿಯುವುದನ್ನು ನಿಲ್ಲಿಸುತ್ತಿಲ್ಲ. ಜನರಿಗೂ ಶಾಲೆ–ಕಾಲೇಜು ಮುಂಭಾಗ ಕಸ ಹಾಕಬಾರದು ಎಂಬ ಪರಿಜ್ಞಾನ ಇಲ್ಲ ಎಂದು ಇಲ್ಲಿನ ಬೋಧಕ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಾರೆ.

ನಿತ್ಯ ಮಕ್ಕಳಿಗೆ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಬಗ್ಗೆ ಪಾಠ ಮಾಡುತ್ತೇವೆ. ಆದರೆ ನಮ್ಮ ಕಾಲೇಜಿನ ಮುಂಭಾಗವೇ ಇಂತಹ ಪರಿಸ್ಥಿತಿ ಇದೆ. ಕಸದಿಂದ ವಿದ್ಯಾರ್ಥಿಗಳು ಮುಜುಗರ ಅನುಭವಿಸುತ್ತಿದ್ದಾರೆ. ಪುರಸಭೆಯವರು ಇದನ್ನು ಸರಿಯಾಗಿ ವಿಲೇವಾರಿ ಮಾಡಬೇಕು.
ಗೋರಕನಾಥ್ ಉಪನ್ಯಾಸಕ. ಸರ್ಕಾರಿ ಪದವಿ ಪೂರ್ವ ಕಾಲೇಜು
ರಾಜ್ಯದ ಆದರ್ಶ ಪಿಯು ಕಾಲೇಜಿನಲ್ಲಿ ನಮ್ಮ ಕಾಲೇಜು ಆಯ್ಕೆಯಾಗಿದೆ. ಕಾಲೇಜಿನಲ್ಲಿ ಡಿಜಿಟಲ್ ಗ್ರಂಥಾಲಯ ಪ್ರಯೋಗಾಲಯ ಕಂಪ್ಯೂಟರ್ ಲ್ಯಾಬ್ ರಾಷ್ಟ್ರೀಯ ಸೇವಾ ಯೋಜನೆ ಘಟಕ. ಸ್ಮಾರ್ಟ್ ಕ್ಲಾಸ್ ನಲ್ಲಿ ಬೋಧನೆ ಮಾಡಲಾಗುತ್ತಿದೆ ತುಳಜಾರಾಮ್.
ಪ್ರಭಾರ ಪ್ರಾಂಶುಪಾಲ. ಸರ್ಕಾರಿ ಪದವಿ ಪೂರ್ವ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.