ಬೀದರ್: ಗ್ರಾಮೀಣ ಭಾಗದಲ್ಲಿ ಉತ್ತಮ ಮೂಲಸೌಕರ್ಯ, ಸಾರ್ವಜನಿಕರಿಗೆ ಉತ್ತಮ ಆಡಳಿತ ಸೇವೆ, ಸರ್ಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನಗೊಳಿಸಿರುವ ಜಿಲ್ಲೆಯ ಎಂಟು ಗ್ರಾಮ ಪಂಚಾಯಿತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ಸಂದಿದೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉತ್ತಮ ಸಾಧನೆ, ಸರ್ಕಾರಿ ಶಾಲೆಗಳಿಗೆ ಅತ್ಯುತ್ತಮ ಸೌಕರ್ಯ, ಸ್ಮಶಾನ ಭೂಮಿ ಅಭಿವೃದ್ಧಿ, ಸಮರ್ಪಕ ಘನತ್ಯಾಜ್ಯ ವಿಲೇವಾರಿ ಸೇರಿದಂತೆ ಹತ್ತು ಹಲವಾರು ಕೆಲಸಗಳ ಮೂಲಕ ಕೆಲ ಪಂಚಾಯಿತಿಗಳು ಗಮನ ಸೆಳೆದಿವೆ. ಇನ್ನು, ಕೆಲ ಪಂಚಾಯಿತಿಗಳಲ್ಲಿ ಹಲವು ಕೊರತೆಗಳಿದ್ದರೂ ಪ್ರಶಸ್ತಿ ಆಯ್ಕೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಅಂದಹಾಗೆ, ಪ್ರಶಸ್ತಿ ಪಡೆದ ಗ್ರಾಮ ಪಂಚಾಯಿತಿಗಳಲ್ಲಿ ಏನೆಲ್ಲ ಕೆಲಸ ಆಗಿದೆ. ಪಂಚಾಯಿತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವವರು ಏನು ಹೇಳುತ್ತಾರೆ. ಗ್ರಾಮಸ್ಥರು ಏನೆನ್ನುತ್ತಾರೆ ಎಂಬ ಸಚಿತ್ರ ವರದಿ ಇಲ್ಲಿದೆ.
ಬಸವಕಲ್ಯಾಣ: ತಾಲ್ಲೂಕಿನ ಹೋಬಳಿ ಕೇಂದ್ರ ಮಂಠಾಳ ಗ್ರಾಮ ಪಂಚಾಯಿತಿಯಿಂದ ಶಾಲಾ ಆವರಣದ ಸುಧಾರಣೆ ಕೈಗೊಂಡಿದ್ದರಿಂದ ಹಾಗೂ ಸ್ಮಶಾನಭೂಮಿ ನಿರ್ಮಿಸಿರುವುದನ್ನು ಪರಿಗಣಿಸಿ ಪ್ರಸಕ್ತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗಿದೆ.
ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದೆ. ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳು ಒಂದೇ ಸ್ಥಳದಲ್ಲಿದ್ದು ಇವುಗಳ ಆವರಣದಲ್ಲಿ ಮಳೆ ನೀರು ಸಂಗ್ರಹಗೊಂಡು ಮಿನಿ ಕೆರೆ ಸೃಷ್ಟಿ ಆಗುತ್ತಿತ್ತು. ಇಲ್ಲೆಲ್ಲ ಮಣ್ಣು ಸುರಿದು ಜಮೀನು ಸಮತಟ್ಟುಗೊಳಿಸಿರುವ ಕಾರಣ ಸಮಸ್ಯೆ ಬಗೆಹರಿದಿದೆ. ಇದಲ್ಲದೆ ಗ್ರಾಮದಲ್ಲಿನ ಐತಿಹಾಸಿಕ ಮಹಾದ್ವಾರಗಳ ಜೀರ್ಣೋದ್ಧಾರ ನಡೆಸಲಾಗಿದೆ. ಕಲಾಲ ಸಮುದಾಯದ ಸ್ಮಶಾನಭೂಮಿಗೆ ಆವರಣಗೋಡೆ ಕಟ್ಟಲಾಗಿದೆ. ಗ್ರಾಮ ಪಂಚಾಯಿತಿ ಕಟ್ಟಡವೂ ಸುಂದರ ಮತ್ತು ಸ್ವಚ್ಛವಾಗಿದೆ.
ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಲೊಡ್ಡೆ ಹಾಗೂ ಉಪಾಧ್ಯಕ್ಷೆ ಶೀಲಾಬಾಯಿ ತ್ರಿಮುಖೆ ಮತ್ತು ಎಲ್ಲ ಸದಸ್ಯರ ನಿರ್ಣಯದಂತೆ 15ನೇ ಹಣಕಾಸು ಯೋಜನೆಯಲ್ಲಿ ಗ್ರಾಮದಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಿವಿಧ ಕಾಮಗಾರಿ ನಿರ್ವಹಿಸಲಾಗಿದೆ. ಘನತ್ಯಾಜ್ಯ ನಿರ್ವಹಣೆ ಘಟಕ ಕಟ್ಟಲಾಗಿದೆ. ಗ್ರಾಮದಿಂದ ಕಾಂಬಳೆವಾಡಿಗೆ ಹೋಗುವ ರಸ್ತೆಯಲ್ಲಿ ಸ್ವಾಗತ ಕಮಾನು ನಿರ್ಮಿಸಲಾಗಿದೆ. ಇವೆಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ವಿಶೇಷ ತಂಡದಿಂದ ಪರಿಶೀಲಿಸಿ ಪುರಸ್ಕಾರ ನೀಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾಂತೇಶ ಸಲಗರ್ ತಿಳಿಸಿದ್ದಾರೆ.
ಹುಲಸೂರ : ತಾಲ್ಲೂಕಿನ ಬೇಲೂರ ಗ್ರಾಮ ಪಂಚಾಯಿತಿಯು ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಿ ಗಮನ ಸೆಳೆದಿದೆ.
ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು 1,556 ಕುಟುಂಬಗಳಿವೆ. 10 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ತಾಲ್ಲೂಕಿನ 7 ಗ್ರಾಮ ಪಂಚಾಯಿತಿ ಜನರ ಜೀವನ ಮಟ್ಟ ಸುಧಾರಿಸಲು ಸರ್ಕಾರದ ಅನುದಾನದ ಸಮರ್ಪಕ ಬಳಕೆಯಾಗಿದೆ ಎನ್ನುತ್ತಾರೆ ಪಂಚಾಯಿತಿಯವರು.
ಗ್ರಾಮಗಳಲ್ಲಿ ಸ್ವಚ್ಛತೆ, ನರೇಗಾ ಪ್ರಗತಿ, ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯಗಳ ನಿರ್ಮಾಣ, ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ಪಿಡಿಒ ಅವರ ಮಾರ್ಗದರ್ಶನದಲ್ಲಿ ಗ್ರಾಮಗಳ ಅಭಿವೃದ್ಧಿ ಕಾರ್ಯದಲ್ಲಿ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಪಾರದರ್ಶಕತೆ ತಂದಿರುವುದಕ್ಕೆ ಪುರಸ್ಕಾರ ಲಭಿಸಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರುಣಾಬಾಯಿ ದೇವೇಂದ್ರ ಪರೆಪ್ಪ 'ಪ್ರಜಾವಾಣಿಗೆ ತಿಳಿಸಿದರು.
‘ಬೇಲೂರ ಪಂಚಾಯಿತಿಯಲ್ಲಿ ಆಡಳಿತಾತ್ಮಕವಾಗಿ ಉತ್ತಮ ಕೆಲಸ ನಡೆದು, ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ದೊರೆತಿದೆ. ಸದಸ್ಯರು, ಸಾರ್ವಜನಿಕರು, ಅಧಿಕಾರಿಗಳು, ಸಿಬ್ಬಂದಿ ಹೊಂದಾಣಿಕೆಯಿಂದ ಉತ್ತಮ ಕೆಲಸ ಮಾಡಿರುವುದಕ್ಕೆ ಪ್ರಶಸ್ತಿ ದೊರೆತಿದೆ. ನಮ್ಮ ಜವಾಬ್ದಾರಿ ಕೂಡ ಹೆಚ್ಚಿಸಿದೆ’ ಎಂದು ಪಂಚಾಯಿತಿ ಅಧ್ಯಕ್ಷೆ ಕರುಣಾಬಾಯಿ ಹೇಳಿದರು.
ಶ್ರೀಮಂಡಲ (ಬೀದರ್ ತಾಲ್ಲೂಕು): ತಾಲ್ಲೂಕಿನ ಶ್ರೀಮಂಡಲ ಗ್ರಾಮ ಪಂಚಾಯಿತಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಗುರಿ ಮೀರಿದ ಸಾಧನೆ ಮಾಡಿದೆ.
ಯೋಜನೆ ಅನುಷ್ಠಾನದಲ್ಲಿ 2023-24ನೇ ಸಾಲಿನಲ್ಲಿ ಪಂಚಾಯಿತಿ ಸಾಧನೆ ಶೇ 110 ರಷ್ಟಿದೆ. ಯೋಜನೆಯನ್ನು ಬಳಸಿಕೊಂಡು ಗ್ರಾಮಗಳಲ್ಲಿ ಹೊಲಕ್ಕೆ ಹೋಗುವ ದಾರಿ, ಸಿ.ಸಿ ರಸ್ತೆ, ಶಾಲಾ ಸುತ್ತು ಗೋಡೆ, ಪಂಚಾಯಿತಿ ಕಚೇರಿಯ ಒಂದು ಎಕರೆ ಸರ್ಕಾರಿ ಆಸ್ತಿಗೆ ಸುತ್ತು ಗೋಡೆ ನಿರ್ಮಿಸಿದೆ. ಕೂಸಿನ ಮನೆಯ ಅಚ್ಚುಕಟ್ಟಾದ ನಿರ್ವಹಣೆಯಿಂದಲೂ ಗಮನ ಸೆಳೆದಿದೆ.
ನರೇಗಾ ಯೋಜನೆಗಷ್ಟೇ ಸೀಮಿತವಾಗದೆ, ಹಾಳು ಬಿದ್ದ ಪಂಚಾಯಿತಿ ಹಳೆಯ ಕಟ್ಟಡವನ್ನು ನವೀಕರಿಸಿ, ಅದರಲ್ಲಿ ಡಿಜಿಟಲ್ ಗ್ರಂಥಾಲಯ ಆರಂಭಿಸಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಪಠ್ಯ ಸಾಮಗ್ರಿ ಉಚಿತ ವಿತರಿಸುತ್ತಿದೆ.
‘ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಜನಪರ ಕಾರ್ಯಗಳಿಗಾಗಿ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ ಎಂದು ಪಿಡಿಒ ಶರತಕುಮಾರ್ ಅಭಿಮಾನ ತಿಳಿಸಿದರು.
ಕಮಲನಗರ: ತಾಲ್ಲೂಕಿನ ತೋರಣಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ರಸ್ತೆ ನಿರ್ಮಾಣ, ಒಳಚರಂಡಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಹೊಲಗಳಿಗೆ ರಸ್ತೆ, ವೈಯಕ್ತಿಕ ಬಾವಿಗಳ ನಿರ್ಮಾಣದಲ್ಲಿ ಉತ್ತಮ ಸಾಧನೆಯಾಗಿದೆ.
ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣ, ಆಡಳಿತದಲ್ಲಿ ಸುಧಾರಣೆ ಮಾಡಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ.
‘ಕಸ ವಿಲೇವಾರಿ ಘಟಕ ನಿರ್ಮಿಸಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಬಯಲು ಬಹಿರ್ದೆಸೆ ಮುಕ್ತವಾಗಿದೆ. ನರೇಗಾ ಯೋಜನೆಯ ಅಡಿಯಲ್ಲಿ ರೇಷ್ಮೆ ಬೆಳೆಸಲು ರೈತರನ್ನು ಪ್ರೋತ್ಸಾಹಿಸಲಾಗಿದೆ. ಉತ್ತಮವಾದ ಚಿತಾಗಾರ ನಿರ್ಮಿಸಲಾಗಿದೆ. ವಿದ್ಯುತ್ ದೀಪ, ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಿ ಪಂಚಾಯಿತಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಪಿಡಿಒ ಮಾಲತೇಶ್ ತಿಳಿಸಿದ್ದಾರೆ.
ಹುಮನಾಬಾದ್: ಸಮೀಪದ ಮನ್ನಾಏಖೆಳ್ಳಿ ಗ್ರಾಮ ಪಂಚಾಯಿತಿ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿದೆ.
ಸ್ವಚ್ಛತೆ, ಗ್ರಾಮಗಳಲ್ಲಿ ಮನೆ ಮನೆಗೆ ನಲ್ಲಿಗಳ ಮೂಲಕ ಶುದ್ಧ ಕುಡಿಯುವ ನೀರು ಸರಬರಾಜು, ಕರ ವಸೂಲಿ, ನರೇಗಾ ಯೋಜನೆಯಡಿ ರೈತರ ಹೊಲಗಳಲ್ಲಿ ಬದುಗಳ ನಿರ್ಮಾಣ ಸೇರಿದಂತೆ ವಿವಿಧ ಉತ್ತಮ ಕೆಲಸಗಳಾಗಿವೆ. ಪ್ರತಿ ಕುಟುಂಬ ಶೌಚಾಲಯ ಹೊಂದಿದೆ.
‘ತಾಲ್ಲೂಕಿನ ಇತರ ಗ್ರಾಮ ಪಂಚಾಯಿತಿಗಳಿಗೆ ಪ್ರೇರಣೆಯಾಗುವ ರೀತಿಯಲ್ಲಿ ಪಂಚಾಯಿತಿಯಲ್ಲಿ ಕೆಲಸಗಳಾಗಿವೆ. ಬೇರೆ ಪಂಚಾಯಿತಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ’ ಎಂದು ಚಿಟಗುಪ್ಪ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಬಿರಾದಾರ ತಿಳಿಸಿದ್ದಾರೆ.
ಮಾಹಿತಿ: ಮಾಣಿಕ್ ಆರ್. ಭುರೆ, ಮನ್ಮಥ್ ಸ್ವಾಮಿ, ನಾಗೇಶ ಪ್ರಭಾ, ಗುಂಡು ಅತಿವಾಳ, ಗುರುಪ್ರಸಾದ್ ಮೆಂಟೇ, ಗಣಪತಿ ಕುರನ್ನಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.