ಬೀದರ್: ಇಲ್ಲಿನ ಗುಂಪಾ–ಶಹಾಪುರ ಗೇಟ್ ಮಧ್ಯದಲ್ಲಿ ಬರುವ ಗೋರನಳ್ಳಿ ಸಮೀಪದ ಹಳದಕೇರಿ ಕೆರೆ ಅಸ್ತಿತ್ವ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ.
ಸರ್ವೆ ನಂಬರ್ 120, 121/1ರಲ್ಲಿ 21.96 ಹೆಕ್ಟೇರ್ ಪ್ರದೇಶದಲ್ಲಿ ಕೆರೆ ಹರಡಿಕೊಂಡಿದೆ. ಆದರೆ, ಭೂ ಒತ್ತುವರಿದಾರರಿಂದ ಕೆರೆ ನಲುಗಿ ಹೋಗಿದೆ. ವರ್ಷದಿಂದ ವರ್ಷಕ್ಕೆ ಕೆರೆಯ ಜಾಗ ಕಿರಿದಾಗುತ್ತ ಹೋಗುತ್ತಿದ್ದು, ಅದರ ಮೂಲ ಸ್ವರೂಪ ಕಳೆದುಕೊಳ್ಳುತ್ತಿದೆ.
ಹಳದಕೇರಿ ಕೆರೆ ಇರುವ ಜಾಗ ಈ ಹಿಂದೆ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ನಗರದ ಹೊರವಲಯದಲ್ಲಿರುವ ಕಾರಣ ಕೆರೆ ಸಹಜವಾಗಿ ಮಳೆಗಾಲದಲ್ಲಿ ತುಂಬಿ ಹರಿಯುತ್ತಿತ್ತು. ಆದರೆ, ಈಗ ಆ ಪರಿಸ್ಥಿತಿ ಇಲ್ಲ.
ಕೆರೆಗೆ ಹೊಂದಿಕೊಂಡಂತೆ ರಿಂಗ್‌ರೋಡ್ ನಿರ್ಮಾಣಗೊಂಡ ನಂತರ ಈ ಪ್ರದೇಶದ ಜಮೀನಿಗೆ ಬಂಗಾರದ ಬೆಲೆ ಬಂದಿದೆ. ಈ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ. ರಿಯಲ್ ಎಸ್ಟೇಟ್ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ. ದಿನೇ ದಿನೇ ಹೊಸ ಹೊಸ ಕಟ್ಟಡಗಳು ತಲೆ ಎತ್ತುತ್ತಿವೆ. ಕೆಲ ಪ್ರಭಾವಿಗಳಿಂದ ಕೆರೆಯ ಜಾಗ ಕಬಳಿಸುವ ಹುನ್ನಾರಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ.
ಇದಕ್ಕೆ ಪೂರಕವೆಂಬಂತೆ ಕೆರೆಯ ಸುತ್ತಮುತ್ತ ನಡೆಯುತ್ತಿರುವ ಚಟುವಟಿಕೆಗಳೇ ಸಾಕ್ಷಿ. ಈ ಹಿಂದೆ ಕೆಲ ಪ್ರಭಾವಿಗಳು ಕೆರೆಯ ಜಾಗದಲ್ಲಿ ಲೇಔಟ್ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಸಂಬಂಧ ದೂರುಗಳು ಸಲ್ಲಿಕೆಯಾದ ನಂತರ ಜಿಲ್ಲಾಡಳಿತ ಅವಕಾಶ ಕಲ್ಪಿಸಿರಲಿಲ್ಲ. ಈಗ ಪುನಃ ಆ ರೀತಿಯ ಚಟುವಟಿಕೆಗಳು ನಡೆಯುತ್ತಿವೆ. ಕೆಲ ತಿಂಗಳ ಹಿಂದೆ ಕೆರೆಯ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ವಾಹನಗಳ ನಿಲುಗಡೆಗೆ ಆ ಜಾಗ ಉಪಯೋಗಿಸಲಾಗುತ್ತಿದೆ. ಇದೆಲ್ಲ ಕೆರೆಯ ಜಾಗ ಕಬಳಿಸುವ ಹುನ್ನಾರ. ಆದರೆ, ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
‘ಕೆರೆಯ ಜಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಮಣ್ಣು ಹಾಕಿ, ಅಲ್ಲೀಗ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವವರು ಆರ್ಥಿಕವಾಗಿ ಸದೃಢರು. ಕೆಲ ಪ್ರಭಾವಿಗಳ ಬೆಂಬಲವೂ ಅವರಿಗಿದೆ. ಈ ಕಾರಣಕ್ಕಾಗಿಯೇ ಜಿಲ್ಲಾಡಳಿತವು ಅವರನ್ನು ನಿಯಂತ್ರಿಸುವ ಕೆಲಸ ಮಾಡುತ್ತಿಲ್ಲ’ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಕಳೆದ ಐದಾರೂ ತಿಂಗಳ ಹಿಂದೆಯೇ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಆ ಬಗ್ಗೆ ಆಗಲೇ ಅಧಿಕಾರಿಗಳನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ನಮಗೂ ದೂರುಗಳು ಬಂದಿವೆ. ಸರ್ವೇ ಕಾರ್ಯ ಕೈಗೊಂಡು ಹದ್ದು ಬಸ್ತು ಮಾಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದರು. ಈಗಲೂ ಅದೇ ಮಾತುಗಳನ್ನು ಹೇಳುತ್ತಿದ್ದಾರೆ. ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮೀನಮೇಷ ಮಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ.
‘ಹಳದಕೇರಿ ಕೆರೆ ಪುರಾತನ ಕೆರೆಗಳಲ್ಲಿ ಒಂದು. ಗಣೇಶನ ಮೂರ್ತಿಗಳ ವಿಸರ್ಜನೆಗೆ ಬುಡಾದಿಂದ ಟ್ಯಾಂಕ್ ನಿರ್ಮಿಸಲಾಗಿದೆ. ಕೆಲವರು ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲವರು ಕೆರೆಯ ಜಾಗದಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಿದ್ದಾರೆ. ಇದಕ್ಕೆಲ್ಲ ಜಿಲ್ಲಾಡಳಿತ ಅವಕಾಶ ಕಲ್ಪಿಸಬಾರದು’ ಎಂದು ಸಾಮಾಜಿಕ ಹೋರಾಟಗಾರ ವಿನಯ್ ಮಾಳಗೆ ಆಗ್ರಹಿಸಿದ್ದಾರೆ.
‘ಬೀದರ್ ನಗರದಲ್ಲಿ ಸಾಕಷ್ಟು ತೆರೆದ ಬಾವಿಗಳಿವೆ. ಹಳದಕೇರಿ ಕೆರೆ ಸೇರಿದಂತೆ ಇತರೆ ಕೆರೆಗಳಿಂದ ಈ ಬಾವಿಗಳಿಗೆ ಮರುಪೂರಣ ಆಗುತ್ತಿದೆ. ಅಂತರ್ಜಲ ಹೆಚ್ಚಳಕ್ಕೂ ಕಾರಣವಾಗಿದೆ. ಭೂ ಸವಕಳಿ ಆಗದಂತೆ ತಡೆಯುತ್ತದೆ. ಪಕ್ಷಿ, ಪ್ರಾಣಿಗಳ ನೀರಿನ ದಾಹ ತಣಿಸುತ್ತವೆ. ಇಷ್ಟೆಲ್ಲ ಪ್ರಯೋಜನವಿರುವ ಕೆರೆಗಳು ಅಸ್ತಿತ್ವ ಕಳೆದುಕೊಂಡರೆ ಭವಿಷ್ಯತ್ತಿನಲ್ಲಿ ಬಹಳ ಕಷ್ಟವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಳದಕೇರಿ ಕೆರೆಗೆ ಸಂಬಂಧಿಸಿದಂತೆ ದೂರುಗಳು ಬಂದಿವೆ. ಅದರ ಸರ್ವೆ ಕೈಗೊಂಡು ವರದಿ ಸಲ್ಲಿಸಲು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದ್ದೇನೆ.ಲವೀಶ್ ಒರ್ಡಿಯಾ ಉಪವಿಭಾಗಾಧಿಕಾರಿ ಬೀದರ್
ಹಳದಕೇರಿ ಕೆರೆಯ ಜಾಗದಲ್ಲಿ ಯಾವುದೇ ರೀತಿಯ ಚಟುವಟಿಕೆಗಳಿಗೆ ಜಿಲ್ಲಾಡಳಿತ ಅವಕಾಶ ಕೊಡಬಾರದು. ಇಲ್ಲವಾದರೆ ಕೆರೆಯ ಅಸ್ತಿತ್ವವೇ ಇರುವುದಿಲ್ಲ.ವಿನಯ್ ಮಾಳಗೆ ಸಾಮಾಜಿಕ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.