ಭಾಲ್ಕಿ: ಮಳೆಗಾಲ ಸಮೀಪಿಸಿದರೂ ಪಟ್ಟಣದ ಬಸ್ ನಿಲ್ದಾಣ, ಬೀದರ್ ಬೇಸ್ ಬಡಾವಣೆ ಪಕ್ಕದಲ್ಲಿರುವ ರಾಜ ಕಾಲುವೆ ಸ್ವಚ್ಛಗೊಳಿಸಿಲ್ಲ. ಇದಿಂದ ಸಾರ್ವಜನಿಕರು ವಿಪರೀತ ಸೊಳ್ಳೆ ಕಾಟ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ದಿನ ಕಳೆಯುತ್ತಿದ್ದು, ದುರಾವಸ್ಥೆ ಬಗ್ಗೆ ಮನದಲ್ಲೇ ಅಧಿಕಾರಿಗಳನ್ನು ಶಪಿಸುತ್ತಿದ್ದಾರೆ.
ನಮ್ಮ ಓಣಿ ಪಕ್ಕದಲ್ಲಿರುವ ರಾಜಕಾಲುವೆಯಲ್ಲಿ ಕಸದ ರಾಶಿ, ಹುಲ್ಲು, ಗಿಡಗಂಟಿ, ಮುಳ್ಳಿನಕಂಟಿ ತುಂಬಿದ್ದು, ಪ್ರತಿದಿನ ಹೆಚ್ಚೆಚ್ಚು ಗಬ್ಬುನಾರುತ್ತಿದೆ. ನಮಗೆ ಬದುಕು ನಡೆಸುವುದು ದುಸ್ತರವಾಗಿದೆ. ಇಂತಹ ಅವ್ಯವಸ್ಥೆ ನಡುವೆ ಸುತ್ತ ಮುತ್ತಲಿನ ನಿವಾಸಿಗಳೆಲ್ಲರೂ ಮೂಗು ಮುಚ್ಚಿಕೊಂಡು ಅನಿವಾರ್ಯವಾಗಿ ಸಂಕಷ್ಟದ ಬದುಕು ಸಾಗಿಸಬೇಕಾಗಿದೆ ಎಂದು ನಿವಾಸಿಗಳಾದ ಶೋಭಾ, ಶಿವಕಾಂತಾ ಶಿವಣೆ, ಸಿದ್ದಲಿಂಗ ಶಿವಣೆ ಅಳಲು ತೋಡಿಕೊಂಡರು.
ಉಪನ್ಯಾಸಕರ ಬಡಾವಣೆ, ಖಂಡಕೇರಿ, ಗಂಜ್ ಏರಿಯಾ ಸೇರಿದಂತೆ ವಿವಿಧೆಡೆಯಿಂದ ಹರಿದು ಬರುವ ಕಲುಷಿತ ನೀರು ಸರಾಗವಾಗಿ ಹರಿದು ಹೋಗಲು ಬಸ್ ನಿಲ್ದಾಣ ಸಮೀಪದಲ್ಲಿ ರಾಜಕಾಲುವೆ ನಿರ್ಮಾಣ ಮಾಡಲಾಗಿದೆ. ವಾರ್ಡ್ 1 ಮತ್ತು 2ರ ಬೀದರ್ ಬೇಸ್, ಮುಲ್ಲಾ ಗಲ್ಲಿ, ಅಶೋಕ ನಗರ ಮೂಲಕ ಹಾದು ಹೋಗುವ ಈ ರಾಜಕಾಲುವೆಯಲ್ಲಿ ಹೂಳು ಮತ್ತು ಕಸ ತುಂಬಿಕೊಂಡು ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಇನ್ನು ಜೂನ್ ತಿಂಗಳಿನಲ್ಲಿ ಆರಂಭವಾಗುವ ಮಳೆಗಾಲದಲ್ಲಿ ಅತೀ ಹೆಚ್ಚು ನೀರು ಸಂಗ್ರಹವಾಗಿ ಕಾಲೊನಿ ವಾಸಿಗಳಿಗೆ ಮತ್ತಷ್ಟು ಸಮಸ್ಯೆ, ಕಿರಿಕಿರಿ ಎದುರಾಗುವ ಭಯವಿದೆ ಎಂದು ಆನಂದ ಬೆನ್ ಚಿಂಚೋಳೆ ಆತಂಕ ವ್ಯಕ್ತಪಡಿಸಿದರು.
ಕಸ-ಕಡ್ಡಿ, ಪ್ಲಾಸ್ಟಿಕ್, ಪೇಪರ್ ಮತ್ತು ಮಣ್ಣಿನಿಂದ ರಾಜಕಾಲುವೆ ತುಂಬಿ ಹೋಗಿದೆ. ಅದರ ಮೇಲೆ ಗಿಡಗಂಟಿಗಳು ಬೆಳೆದಿವೆ. ರಾಜಕಾಲುವೆ ತುಂಬ ತ್ಯಾಜ್ಯ ತುಂಬಿಕೊಂಡಿದೆ. ಈ ಸ್ಥಳ ಸೊಳ್ಳೆ ಉತ್ಪತ್ತಿ ತಾಣವಾಗಿದ್ದು, ಸುತ್ತಲಿನ ನಿವಾಸಿಗಳಿಗೆ ಬದುಕು ನಿತ್ಯ ನರಕವಾಗಿದೆ. ಕಾಲರಾ, ಡೆಂಗೆ, ಟೈಫಾಯಿಡ್ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳ ಭೀತಿ ಜನರನ್ನು ಬಹುವಾಗಿ ಕಾಡುತ್ತಿದೆ. ಕೂಡಲೇ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ರಾಜಕಾಲುವೆ ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯಲು ವ್ಯವಸ್ಥೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ವಿವಿಧೆಡೆಯ ನೀರು ಸರಾಗವಾಗಿ ಹರಿಯದೆ ಇರುವುದರಿಂದ ಗಬ್ಬು ವಾಸನೆ ಸೂಸುತ್ತಿದ್ದು ನಮ್ಮ ಸಂಕಷ್ಟ ಹೇಳತೀರದಾಗಿದೆ.ಶಿವಕಾಂತಾ ಶಿವಣೆ ಪಟ್ಟಣ ನಿವಾಸಿ
ಮಳೆಗಾಲ ಆರಂಭಕ್ಕೆ ಬೆರಳೆಣಿಕೆಯಷ್ಟು ದಿನ ಮಾತ್ರ ಬಾಕಿಯಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಾಜಕಾಲುವೆ ಸ್ವಚ್ಛತೆಗೆ ಮುಂದಾಗಬೇಕು.ಪಂಡರಿನಾಥ ಮೇತ್ರೆ ಪಟ್ಟಣ ನಿವಾಸಿ
ರಾಜಕಾಲುವೆ ಸ್ವಚ್ಛತೆಗೆ ವರ್ಕ್ ಆರ್ಡರ್ ನೀಡಿದ್ದು ಒಂದೆರಡು ದಿನಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಂಡು ಸಾರ್ವಜನಿಕರ ನೆಮ್ಮದಿಯ ಜೀವನಕ್ಕೆ ಅನುಕೂಲ ಮಾಡಿ ಕೊಡಲಾಗುವುದು.ಸಂಗಮೇಶ ಕಾರಬಾರಿ ಪುರಸಭೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.