ಬೀದರ್: ‘ಸಾಹಿತಿಗಳಿಗೆ ಮಾತ್ರ ಸಾಮಾಜಿಕ ಜವಾಬ್ದಾರಿ ಇರಬೇಕೆನ್ನುವುದು ತಪ್ಪು. ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬರಲ್ಲೂ ಸಾಮಾಜಿಕ ಜವಾಬ್ದಾರಿ ಇರಬೇಕಾಗುತ್ತದೆ’ ಎಂದು ಹಿರಿಯ ಪತ್ರಕರ್ತ ದಿನೇಶ ಅಮೀನಮಟ್ಟು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ಕನ್ನಡ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ‘ಸಾಹಿತಿಗಳು ಮತ್ತು ಸಾಮಾಜಿಕ ಜವಾಬ್ದಾರಿ’ ಕುರಿತ ವಿಶೇಷ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು.
ಸಾಹಿತಿಗಳಿಗೆ ಸಾಮಾಜಿಕ ಜವಾಬ್ದಾರಿ ಇರಬೇಕೆಂಬ ಭಾವನೆಯೇ ತಪ್ಪು. ಎಲ್ಲರಿಗೂ ಜವಾಬ್ದಾರಿ ಇರಬೇಕು. ಸಂಗೀತ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರೆಲ್ಲರಿಗೂ ಸಾಮಾಜಿಕ ಹೊಣೆಗಾರಿಕೆ ಇರಬೇಕು ಎಂದು ಹೇಳಿದರು.
ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುವ ಹೊಣೆಗಾರಿಕೆ ಖಂಡಿತವಾಗಿಯೂ ಸಾಹಿತ್ಯ ಹಾಗೂ ಸಾಹಿತಿಗಳ ಮೇಲಿದೆ. ತನ್ನ ಬರಹ, ಸಾಹಿತ್ಯದ ವಿವಿಧ ಪ್ರಕಾರಗಳಿಂದ ಅದನ್ನು ಮಾಡಬಹುದು. ಯಾವಾಗಲೂ ಸತ್ಯವನ್ನೇ ಪ್ರತಿಪಾದಿಸಬೇಕು. ಆದರೆ, ಇತ್ತೀಚಿನ ಬಹುತೇಕ ಸಾಹಿತಿಗಳ ಬದುಕು ಮತ್ತು ಬರಹದ ನಡುವೆ ವ್ಯತ್ಯಾಸವಿದೆ ಎಂದು ತಿಳಿಸಿದರು.
ಒಂದು ಕೃತಿಯನ್ನು ಕೃತಿಕಾರನ ಮೂಲಕ ನೋಡಬೇಕೆ ಅಥವಾ ಕೃತಿಯಷ್ಟೇ ನೋಡಬೇಕಾ ಎಂಬ ಪ್ರಶ್ನೆ ಮೂಡುತ್ತದೆ. ಖಂಡಿತವಾಗಿಯೂ ಕೃತಿಕಾರನ ಮೂಲಕವೇ ನೋಡಬೇಕು. ಶಿವರಾಮ ಕಾರಂತ, ಕುವೆಂಪು ಸೇರಿದಂತೆ ಅನೇಕ ಸಾಹಿತಿಗಳ ಬದುಕು–ಬರಹ ಒಂದೇ ಆಗಿತ್ತು ಎಂದು ವಿವರಿಸಿದರು.
ಯುಜಿಸಿ ವೇತನ ಬಂದ ನಂತರ ಅನೇಕರ ಬರವಣಿಗೆ ನಿಂತಿದೆ. ಅವರು ತಮ್ಮ ಜವಾಬ್ದಾರಿ ಮರೆತು ಲೋಲುಪತೆಯಲ್ಲಿ ಬದುಕು ಸವೆಸುತ್ತಿದ್ದಾರೆ. ಸಾಹಿತಿಗಳು, ಬರಹಗಾರರು ಓದುಗರಿಗೆ ನಿಷ್ಠರಾಗಿರಬೇಕು. ರಾಜಕಾರಣಿಗಳು ಜನರನ್ನು ಮೂಢರಾಗಿಸಲು ಬಯಸುತ್ತಾರೆ. ಸಾಹಿತಿಗಳು ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.
ಗುಲಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ ಮಾತನಾಡಿ, ವಚನ ಚಳವಳಿ ನಾಶ ಮಾಡಿದವರು, ಶರಣರ ಹತ್ಯಾಕಾಂಡ ಮಾಡಿರುವವರನ್ನು ಅನುಕರಣೆ ಮಾಡುತ್ತಿರುವುದು ದುರಂತ ಎಂದರು.
ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಬಲ್ಲೂರ ಮಾತನಾಡಿ, ಪ್ರಭುತ್ವವನ್ನು ಪ್ರಶ್ನೆ ಮಾಡದವನು ಸಾಹಿತಿಯಲ್ಲ. ಓಲೈಕೆ ಸಾಹಿತ್ಯ ಇಂದಿನ ಹೊತ್ತಿನಲ್ಲಿ ಕಾಣಿಸುತ್ತಿದೆ. ಕೆಟ್ಟ ಸಾಹಿತ್ಯದಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ಹೇಳಿದರು.
ಪರಿಷತ್ತಿನ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ ನಿರೂಪಿಸಿದರು. ಗೌರವ ಕಾರ್ಯದರ್ಶಿ ಟಿ.ಎಮ್. ಮಚ್ಚೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.