ADVERTISEMENT

ಕಾಂಗ್ರೆಸ್ ಅಭ್ಯರ್ಥಿಯಿಂದ ಸುಳ್ಳು ಮಾಹಿತಿ: ಖೂಬಾ ಆಕ್ಷೇಪಣೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 16:21 IST
Last Updated 20 ಏಪ್ರಿಲ್ 2024, 16:21 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್: ಇಲ್ಲಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ನಾಮಪತ್ರಗಳ ಪರಿಶೀಲನೆ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಭಗವಂತ ಖೂಬಾ ಜಿಲ್ಲಾ ಚುನಾವಣಾಧಿಕಾರಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ.

‘ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ವಕೀಲ ವೃತ್ತಿ ಪೂರ್ಣಗೊಳಿಸಿಲ್ಲ. ಸುಪ್ರೀಂ ಕೋರ್ಟ್ ಜಡ್ಜ್ ಕೆಳಗಡೆ ಕೆಲಸ ಮಾಡುತ್ತಿರುವೆ ಎಂದು ಸುಳ್ಳು ಹೇಳಿಕೊಂಡು ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ. ಹೀಗಾಗಿ ಸಾಗರ ಖಂಡ್ರೆ ವಿರುದ್ಧ ಕ್ರಮ ಕೈಗೋಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ಸಾಗರ್‌ ಖಂಡ್ರೆ ಕೇವಲ ಎಲ್.ಎಲ್.ಬಿ. ಪಾಸ್ ಮಾಡಿದ್ದಾರೆ. ಆದರೆ ವಕೀಲ ವೃತ್ತಿ ಪ್ರಾರಂಭಿಸಬೇಕೆಂದರೆ, ಅಖಿಲ ಭಾರತ ಬಾರ್ ಅಸೋಶಿಯೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಪ್ರಾಕ್ಟೀಸ್ ಸರ್ಟಿಫಿಕೇಟ್ ಪಡೆದ ಮೇಲೆ ಇವರು ವಕೀಲರಾಗಬಹುದು. ಆದರೆ ಸಾಗರ್ ಖಂಡ್ರೆ ಇನ್ನು ಪರೀಕ್ಷೆ ಪಾಸಾಗಿರುವುದಿಲ್ಲ. ಆದ್ದರಿಂದ ಇವರು ವಕೀಲರಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ’ ಎಂದರು.

ADVERTISEMENT

ಅಭ್ಯರ್ಥಿ ತನ್ನ ಅಫೀಡವಿಟ್‌ನಲ್ಲಿ ಆದಾಯದ ಮೂಲ ವಕೀಲ ವೃತ್ತಿಯಿಂದ ಬಂದಿರುವುದು ಎಂದು ಹೇಳಿಕೊಂಡಿದ್ದಾರೆ. ಇದು ಸಂಪೂರ್ಣ ಸುಳ್ಳು ಹಾಗೂ ತಪ್ಪು ಮಾಹಿತಿ’ ಎಂದು ಪ್ರತಿಪಾದಿಸಿದ್ದಾರೆ.

ಸಾಗರ್ ಕೇವಲ 26 ವರ್ಷದವರಾಗಿದ್ದು, ಇವರಿಗೆ ಮೂವರು ₹1.50 ಕೋಟಿ ಕೈ ಸಾಲ ನೀಡಿದ್ದಾರೆ. ಸದರಿ ಮಾಹಿತಿಯೂ ಶುದ್ಧ ಸುಳ್ಳಾಗಿದೆ. ರಾಜಕೀಯಕ್ಕೆ ಬರುವ ಮುನ್ನವೇ ಇಷ್ಟೊಂದು ಸುಳ್ಳು ಹೇಳುವ ಸಾಗರ್ ಖಂಡ್ರೆ, ಜನರ ದಾರಿ ತಪ್ಪಿಸುವುದರಲ್ಲಿ ತಂದೆಗಿಂತ ಒಂದು ಹೆಜ್ಜೆ ಮುಂದೆ ಇದ್ದಾರೆ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಪ್ಪ ಮಕ್ಕಳ ಜೊತೆ ಯಾವುದೇ ರೀತಿ ವ್ಯವಹಾರ ಮಾಡುವ ಮುನ್ನ ಹತ್ತಾರು ಬಾರಿ ಯೋಚಿಸಿ ಎಂದು ಜನತೆಯಲ್ಲಿ ಭಗವಂತ ಖೂಬಾ ಮನವಿ ಮಾಡಿಕೊಂಡಿದ್ದಾರೆ.

ಪರಿಪೂರ್ಣ ವಕೀಲ ಆಗದೆ ಇದ್ದರೂ, ನಾನೊಬ್ಬ ವಕೀಲ ಇದ್ದೇನೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ಸಾಗರ್ ಖಂಡ್ರೆ ಮೊದಲು ಕಾನೂನು ಗೌರವಿಸುವುದು ಕಲಿಯಲಿ. ಆಮೇಲೆ ನನ್ನ ಜೊತೆಗೆ ಚರ್ಚೆಗೆ ಬರಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.