ADVERTISEMENT

ಕೈಕಾಲು ಗಟ್ಟಿಯಿದ್ದವರಿಗೆ ‘ಬೀದರ್‌ ಕೋಟೆ’

ಎಲ್ಲ ರೀತಿಯ ವಾಹನಗಳ ಸಂಚಾರ ನಿರ್ಬಂಧ; ಪರ್ಯಾಯ ವ್ಯವಸ್ಥೆ ಕಲ್ಪಿಸದ ಪುರಾತತ್ವ ಇಲಾಖೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 1 ಜೂನ್ 2023, 23:43 IST
Last Updated 1 ಜೂನ್ 2023, 23:43 IST
ಮಹಾರಾಷ್ಟ್ರದ ಭೀಡ್‌ ಜಿಲ್ಲೆಯ ಪ್ರವಾಸಿಗರು ಸುಡು ಬಿಸಿಲಲ್ಲಿ ನಡೆದಾಡುತ್ತ ತಲೆಯ ಮೇಲೆಯ ಕರವಸ್ತ್ರ ಹಾಕಿಕೊಂಡು ಬೀದರ್‌ ಕೋಟೆ ವೀಕ್ಷಿಸಿದರು
ಪ್ರಜಾವಾಣಿ ಚಿತ್ರ: ಗುರುಪಾದಪ್ಪ ಸಿರ್ಸಿ
ಮಹಾರಾಷ್ಟ್ರದ ಭೀಡ್‌ ಜಿಲ್ಲೆಯ ಪ್ರವಾಸಿಗರು ಸುಡು ಬಿಸಿಲಲ್ಲಿ ನಡೆದಾಡುತ್ತ ತಲೆಯ ಮೇಲೆಯ ಕರವಸ್ತ್ರ ಹಾಕಿಕೊಂಡು ಬೀದರ್‌ ಕೋಟೆ ವೀಕ್ಷಿಸಿದರು ಪ್ರಜಾವಾಣಿ ಚಿತ್ರ: ಗುರುಪಾದಪ್ಪ ಸಿರ್ಸಿ   

ಬೀದರ್‌: ಇಡೀ ಜಿಲ್ಲೆಯ ಪ್ರಮುಖ ಹೆಗ್ಗುರುತು ‘ಬೀದರ್‌ ಕೋಟೆ’. ಆದರೆ, ಇದನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬೇಕಾದರೆ ಸಾಕಷ್ಟು ಕಷ್ಟ ಪಡಬೇಕಿದೆ. ಕಸರತ್ತು ನಡೆಸಬೇಕಾದ ಪರಿಸ್ಥಿತಿ ಇದೆ.

ಬೀದರ್‌ ಕೋಟೆಯ ಒಟ್ಟು ವಿಸ್ತೀರ್ಣ ಸರಿಸುಮಾರು 5.5 ಕಿ.ಮೀ ಇದೆ. 20ಕ್ಕೂ ಹೆಚ್ಚು ಪ್ರಮುಖ ಸ್ಮಾರಕಗಳು ಇದರಲ್ಲಿವೆ. ಒಂದೊಂದು ಸ್ಮಾರಕ ಒಂದೊಂದು ಪ್ರದೇಶದಲ್ಲಿದೆ. ವಾಹನಗಳಲ್ಲಿ ಸಂಚರಿಸುತ್ತ ಎಲ್ಲ ಸ್ಮಾರಕಗಳನ್ನು ಸರಿಯಾಗಿ ನೋಡಿದರೆ ಇಡೀ ದಿನ ಕಳೆದು ಹೋಗುತ್ತದೆ. ಅಂಥದ್ದರಲ್ಲಿ ನಡೆದುಕೊಂಡೇ ಒಂದೆ ದಿನದಲ್ಲಿ ಕೋಟೆ ನೋಡುವುದು ಅಸಾಧ್ಯದ ಮಾತು. ಆದರೆ, ಕೋಟೆಯೊಳಗೆ ಎಲ್ಲ ರೀತಿಯ ವಾಹನಗಳ ಸಂಚಾರದ ಮೇಲೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ನಿರ್ಬಂಧ ಹೇರಿರುವುದರಿಂದ ಜನರಿಗೆ ಈಗ ಬೇರೆ ಮಾರ್ಗವಿಲ್ಲ.

ಕೋಟೆ ಪ್ರವೇಶ ದ್ವಾರದ ಸಮೀಪ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರು ಅವರ ವಾಹನಗಳನ್ನು ಅಲ್ಲಿಯೇ ನಿಲ್ಲಿಸಿ, ನಡೆದುಕೊಂಡು ಕೋಟೆ ಪ್ರವೇಶಿಸಬೇಕು. ಕೈಕಾಲು ಗಟ್ಟಿಯಿದ್ದವರಿಗೆ ಯಾವುದೇ ಸಮಸ್ಯೆ ಎದುರಾಗದು. ಆದರೆ, ಹಿರಿಯ ನಾಗರಿಕರು, ಅಂಗವಿಕಲರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ADVERTISEMENT

ವಿಶಿಷ್ಟ ವಾಸ್ತುಶಿಲ್ಪದ ಕೋಟೆಯನ್ನು ಕಣ್ತುಂಬಿಕೊಳ್ಳಲೆಂದೆ ಮನೆ ಮಂದಿಯೆಲ್ಲ ಅನ್ಯ ಜಿಲ್ಲೆ, ಅನ್ಯ ರಾಜ್ಯಗಳಿಂದ ನಗರಕ್ಕೆ ಬರುತ್ತಾರೆ. ಆದರೆ, ವಾಹನಗಳಿಗೆ ಪ್ರವೇಶ ಇಲ್ಲದ ಕಾರಣ ವಯಸ್ಸಾದವರು, ಅಂಗವೈಕಲ್ಯದಿಂದ ಬಳಲುತ್ತಿರುವವರು ಕುಟುಂಬ ಸದಸ್ಯರು ಕೋಟೆ ನೋಡಿಕೊಂಡು ವಾಪಸಾಗುವವರೆಗೆ ವಾಹನಗಳಲ್ಲಿಯೇ ಕಾದು ಕೂರಬೇಕಾದ ಪರಿಸ್ಥಿತಿ ಇದೆ. ಎಷ್ಟೋ ಸಲ ಕೆಲವರು ಪ್ರವೇಶ ದ್ವಾರದಿಂದಲೇ ಹಿಂತಿರುಗಿದ ನಿದರ್ಶನಗಳಿವೆ.

ಕಳೆದ ಹಲವು ದಿನಗಳಿಂದ ನಗರ ಸೇರಿದಂತೆ ಜಿಲ್ಲೆಯಾದ್ಯಂತ 40 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ಬಿಸಿಲಿದೆ. ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ 5ರ ವರೆಗೆ ನೆಲ ಕಾದು ಕಾವಲಿಯಂತಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದೈಹಿಕವಾಗಿ ಗಟ್ಟಿಯಿದ್ದವರು ಸಹ ಬಿಸಿಲಲ್ಲೂ ನಡೆದುಕೊಂಡು ಕೋಟೆ ವೀಕ್ಷಿಸುವುದು ಕಷ್ಟಕರ. ಇನ್ನು, ವಯಸ್ಸಾದವರು, ಅಂಗವಿಕಲರಿಗೆ ಇದು ದೂರದ ಮಾತು.

ಬೀದರ್‌ ಕೋಟೆ ‘ಬಯಲು ವಸ್ತು ಸಂಗ್ರಹಾಲಯದಂತಿದೆ’. ಥೇಟ್‌ ವಿಶ್ವಪ್ರಸಿದ್ಧ ಹಂಪಿಗೆ ಹೋಲಿಸಬಹುದು. ಅಲ್ಲೂ ಸ್ಮಾರಕಗಳು ಬಯಲಲ್ಲಿವೆ. ಪ್ರವಾಸಿಗರ ಅನುಕೂಲಕ್ಕಾಗಿ ರೈಲು ಮಾದರಿಯ ಡೀಸೆಲ್‌ ವಾಹನ, ಬ್ಯಾಟರಿಚಾಲಿತ ವಾಹನಗಳಿಗೆ ಅಲ್ಲಿ ವ್ಯವಸ್ಥೆ ಮಾಡಲಾಗಿದೆ. ಎಲ್ಲೆಲ್ಲಿ ಸ್ಮಾರಕಗಳು ಎತ್ತರದ ಪ್ರದೇಶದಲ್ಲಿವೆಯೋ ಅಂತಹ ಕಡೆಗಳಲ್ಲಿ ರ್‍ಯಾಂಪ್‌ ನಿರ್ಮಿಸಿ, ಅಂಗವಿಕಲರಿಗೆ ಅನುಕೂಲ ಮಾಡಲಾಗಿದೆ. ವಿಜಯಪುರದ ಗೋಳ ಗುಮ್ಮಟದಲ್ಲೂ ಇದನ್ನು ಕಾಣಬಹುದು. ಆದರೆ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಬೀದರ್‌ ಕೋಟೆಯಲ್ಲೇಕೆ ಅಲ್ಲಿನಂತೆ ವ್ಯವಸ್ಥೆ ಮಾಡಿಲ್ಲ ಎನ್ನುವುದು ಪ್ರವಾಸಿಗರ ಪ್ರಶ್ನೆ.

‘ಕೋಟೆಯೊಳಗೆ ವಾಹನಗಳನ್ನು ಬಿಟ್ಟರೆ ಬೇಕಾಬಿಟ್ಟಿ ಸಂಚರಿಸುತ್ತವೆ. ಮಾಲಿನ್ಯ ಉಂಟಾಗುತ್ತದೆ ಎನ್ನುವ ಕಾರಣಕ್ಕಾಗಿ ವಾಹನಗಳ ಸಂಚಾರದ ಮೇಲೆ ನಿರ್ಬಂಧ ಹೇರಿರುವುದು ಸರಿ. ಆದರೆ, ಪುರಾತತ್ವ ಇಲಾಖೆಯವರು ಪರ್ಯಾಯ ವ್ಯವಸ್ಥೆ ಮಾಡಬೇಕು. ಎಲ್ಲರಿಗೂ ಕೋಟೆ ನೋಡಬೇಕೆಂಬ ಆಸೆ ಇರುತ್ತದೆ’ ಎಂದು ಕೋಟೆ ನೋಡುತ್ತಲೇ ‘ಪ್ರಜಾವಾಣಿ’ಯೊಂದಿಗೆ ಮಾತಿಗಿಳಿದರು ನೆರೆಯ ತೆಲಂಗಾಣ ರಾಜ್ಯದ ಜಹೀರಾಬಾದ್‌ನಿಂದ ಬಂದಿದ್ದ ಪ್ರವಾಸಿ ಶಿವ.

‘ಸುಡು ಬಿಸಿಲಲ್ಲಿ ನಡೆದಾಡುತ್ತ ಕೋಟೆ ನೋಡಲು ಆಗುವುದಿಲ್ಲ. ಒಳಗೆ ವಾಹನಗಳ ವ್ಯವಸ್ಥೆ ಇಲ್ಲ ಎನ್ನುವುದು ನನಗೆ ಇಲ್ಲಿಗೆ ಬಂದ ನಂತರವೇ ಗೊತ್ತಾಗಿದೆ. ತಾಯಿಗೆ ವಯಸ್ಸಾಗಿದೆ. ಮಕ್ಕಳಿಗೆ ನಡೆಯಲು ಆಗುವುದಿಲ್ಲ. ಎರಡ್ಮೂರು ಸ್ಮಾರಕಗಳನ್ನು ವೀಕ್ಷಿಸಿ ಹಿಂತಿರುಗಲು ನಿರ್ಧರಿಸಿದ್ದೇವೆ’ ಎಂದು ಬೇಸರದಿಂದ ನುಡಿದರು.

ಭಾಲ್ಕಿಯಿಂದ ಕುಟುಂಬ ಸಮೇತ ಬಂದಿದ್ದ ಪ್ರವಾಸಿ ಸಂಜಯ್‌ ಭಾಲ್ಕೆಯವರು ಇಂತಹುದೇ ಮಾತುಗಳನ್ನಾಡಿದರು. ‘ಇಷ್ಟೊಂದು ದೊಡ್ಡ ಕೋಟೆ ನಡೆಯುತ್ತ ನೋಡಲು ಆಗುವುದಿಲ್ಲ. ಅದರಲ್ಲೂ ವಯಸ್ಸಾದವರಿಗೆ ಖಂಡಿತ ಆಗುವುದಿಲ್ಲ. ಕಿರು ವಾಹನಗಳಿಗೆ ವ್ಯವಸ್ಥೆ ಮಾಡಬೇಕು. ಬೇಕಾದರೆ ಅದಕ್ಕೆ ಶುಲ್ಕ ವಿಧಿಸಲಿ’ ಎಂದರು. ಕಲಬುರಗಿ ಜಿಲ್ಲೆಯಿಂದ ಬಂದಿದ್ದ ಮನೋಹರ್‌ ಕೂಡ ಹೀಗೆಯೇ ಹೇಳಿದರು.

ಸಂಜಯ್‌ ಭಾಲ್ಕೆ
ಶಿವ

ಬೀದರ್‌ ಕೋಟೆಗೆ ಬ್ಯಾಟರಿಚಾಲಿತ ವಾಹನಗಳನ್ನು ಒದಗಿಸಲು ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅವುಗಳು ಬರುವ ನಿರೀಕ್ಷೆಯಿದೆ.

–ಅನಿರುದ್ಧ್‌ ದೇಸಾಯಿ ಸಹಾಯಕ ಸಂರಕ್ಷಣಾಧಿಕಾರಿ ಪುರಾತತ್ವ ಇಲಾಖೆ

ಬೀದರ್‌ ಕೋಟೆಯ ವಿಸ್ತಾರ ಬಹಳ ದೊಡ್ಡದು. ಸ್ಮಾರಕಗಳ ವೀಕ್ಷಣೆಗೆ ಬ್ಯಾಟರಿಚಾಲಿತ ಅಥವಾ ಬೇರೆ ರೀತಿಯ ವಾಹನಗಳ ವ್ಯವಸ್ಥೆ ಮಾಡಿದರೆ ಉತ್ತಮ.

–ಸಂಜಯ್‌ ಭಾಲ್ಕೆ ಭಾಲ್ಕಿ ಪ್ರವಾಸಿ

ಕಾಲು ಗಟ್ಟಿಯಿದ್ದವರು ಕೋಟೆ ನೋಡಬಹುದು. ಆದರೆ ಹಿರಿಯ ನಾಗರಿಕರು ಅಂಗವಿಕಲರಿಗೆ ಸಾಧ್ಯವಾಗುವುದಿಲ್ಲ. ಅವರಿಗೆ ಬೇರೆ ವ್ಯವಸ್ಥೆ ಕಲ್ಪಿಸಬೇಕು.

–ಶಿವ ಜಹೀರಾಬಾದ್‌ ಪ್ರವಾಸಿ

ಇನ್ನೂ ಆರಂಭವಾಗದ ಕ್ಯಾಂಟೀನ್‌

ಕೋಟೆಯ ಮಧ್ಯಭಾಗದಲ್ಲಿ ಈ ಹಿಂದೆ ಕ್ಯಾಂಟೀನ್‌ ಇತ್ತು. ಅಲ್ಲಿ ಉಪಾಹಾರ ಊಟ ತಂಪುಪಾನೀಯ ಚಹಾ ಸಿಗುತ್ತಿತ್ತು. ಆದರೆ ಅದು ಬಂದ್‌ ಆಗಿ ವರ್ಷಗಳೇ ಕಳೆದಿವೆ. ಆದರೆ ಅದನ್ನು ಆರಂಭಿಸಲು ಮನಸ್ಸು ಮಾಡುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ. ‘ದೂರದ ಊರುಗಳಿಂದ ಬರುವ ಪ್ರವಾಸಿಗರು ದಿನವಿಡೀ ಕೋಟೆಯೊಳಗೆ ಕಳೆಯಲು ಬರುತ್ತಾರೆ. ಮೇಲಿಂದ ಒಳಗೆ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ನಡೆದು ದಣಿದವರಿಗೆ ಕನಿಷ್ಠ ಉಪಾಹಾರ ತಂಪು ಪಾನೀಯ ವ್ಯವಸ್ಥೆ ಇಲ್ಲವೆಂದರೆ ಪ್ರವಾಸಿಗರೇಕೆ ಇಲ್ಲಿಗೆ ಬರುತ್ತಾರೆ. ಬೀದರ್‌ ಕೋಟೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರುವ ಸಾಧ್ಯತೆ ಇದೆ. ಹೀಗಿರುವಾಗ ಅಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಕುಡಿಯಲು ನೀರು ಉತ್ತಮ ಶೌಚಾಲಯ ಭದ್ರತಾ ವ್ಯವಸ್ಥೆ ಇದೆ. ಆದರೆ ಇದಿಷ್ಟೇ ಸಾಲದು’ ಎಂದು ಸ್ಥಳೀಯ ನಿವಾಸಿ ಶಬ್ಬೀರ್‌ ಮಹಮ್ಮದ್‌ ಪಾಶಾ ರಮೇಶ ಹೇಳಿದರು. ‘ಕೋಟೆಯಲ್ಲಿ ಈ ಹಿಂದೆ ಒಂದೆರಡು ಅಹಿತಕರ ಘಟನೆಗಳು ನಡೆದಿದ್ದವು. ಬಳಿಕ ಕ್ಯಾಂಟೀನ್‌ ಮುಚ್ಚಿತ್ತು. ಅನಂತರ ಅದರ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಈಗ ಕೆಲಸ ಪೂರ್ಣಗೊಂಡಿದೆ. ಟೆಂಡರ್‌ ಕರೆಯಲಾಗಿದೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ಕ್ಯಾಂಟೀನ್‌ ಪುನರಾರಂಭವಾಗಲಿದೆ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಕೋಟೆಯ ಸಹಾಯಕ ಸಂರಕ್ಷಣಾಧಿಕಾರಿ ಅನಿರುದ್ಧ್‌ ದೇಸಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.