ಖಟಕಚಿಂಚೋಳಿ: ಸಮೀಪದ ಡಾವರಗಾಂವ್ ಗ್ರಾಮದ ರೈತ ಗೋರಖನಾಥ್ ಎಣಕಮೂರೆ ತಮ್ಮ ಒಂದೂವರೆ ಎಕರೆ ಹೊಲದಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಸದ್ಯ ಅದು ಹುಲುಸಾಗಿ ಬೆಳೆದಿದ್ದು, ಹೆಚ್ಚಿನ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಲಾಕ್‌ಡೌನ್‌ನಿಂದಾಗಿ 2 ವರ್ಷಗಳಿಂದ ರೈತ ಗೊರಖನಾಥ ಕಲ್ಲಂಗಡಿ ಬೆಳೆದು ನಷ್ಟ ಅನುಭವಿಸಿದ್ದಾರೆ. ಆದರೂ ಎದೆಗುಂದದೆ ಮತ್ತೇ ಕಲ್ಲಂಗಡಿ ಬೆಳೆದಿದ್ದಾರೆ. ಸದ್ಯ ಬೆಳೆ ಉತ್ತಮವಾಗಿ ಬೆಳೆದಿದೆ. ಇದರಿಂದ ಹೆಚ್ಚಿನ ಇಳುವರಿ ಬಂದು ಕಳೆದ ಅವಧಿ ಯಲ್ಲಿ ಆದ ನಷ್ಟವನ್ನು ಸರಿದೂಗಿಸಬಹುದು ಎಂಬುವುದು ಅವರ ಆಶಯ.
ಮೂರು ತಿಂಗಳ ಬೆಳೆಯಾದ ಕಲ್ಲಂಗಡಿ ಬೆಳೆಯಲು ಗೊಬ್ಬರ, ಔಷಧಿ ಸಿಂಪಡಣೆ ಸೇರಿದಂತೆ ಇನ್ನಿತರ ಖರ್ಚು ವೆಚ್ಚ ಸೇರಿ ₹1 ಲಕ್ಷ ಖರ್ಚಾಗಿದೆ. ಬೆಳೆ ಹುಲುಸಾಗಿ ಬೆಳೆದಿದೆ. ಪ್ರತಿ ಕಾಯಿಯ ತೂಕ ಐದರಿಂದ ಆರು ಕೆ.ಜಿ. ಇದೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹14 ನಡೆದಿದೆ. ನಮ್ಮಲ್ಲಿ ಸುಮಾರು 50 ಕ್ವಿಂಟಾಲ್ ಇಳುವರಿ ಬರುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಈ ವರ್ಷ ಸುಮಾರು ₹5 ಲಕ್ಷ ಆದಾಯ ಬರುವ ಸಾಧ್ಯತೆ ಎಂದು ರೈತ ಗೋರಖನಾಥ ಪ್ರಜಾವಾಣಿಗೆ ತಿಳಿಸುತ್ತಾರೆ.
‘ಕಲ್ಲಂಗಡಿ 3 ತಿಂಗಳ ಅವಧಿಯಲ್ಲಿ ಬೆಳೆಯಬಹುದಾಗಿದ್ದು, ಇದು ಅಧಿಕ ಲಾಭ ಕೊಡುವ ಬೆಳೆಯಾಗಿದೆ. ಹೊಸ ತಂತ್ರಜ್ಞಾನಗಳಾದ ಹನಿ ನೀರಾವರಿ, ಪ್ಲಾಸ್ಟಿಕ್ ಹೊದಿಕೆಗಳ ಬಳಕೆ ಮತ್ತು ಪ್ರೋಟ್ರೆಗಳ ಬಳಕೆ ಮಾಡಿದಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು. ಬೀಜ ನೇರವಾಗಿ ಊರುವುದರಿಂದ 85 ರಿಂದ 90 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಆದರೆ, ಸಸಿ ಮಾಡಿ ಬೆಳೆದರೆ ಸುಮಾರು 25 ದಿನ ಕೂಲಿ ಮತ್ತು ನೀರು ಉಳಿತಾಯ ಮಾಡಬಹುದು. ಪ್ಲಾಸ್ಟಿಕ್ ಹೊದಿಕೆಯಿಂದ ನೀರಿನ ಉಳಿತಾಯದ ಜೊತೆಗೆ ಕಳೆಗಳನ್ನು ಹತೋಟಿಯಲ್ಲಿಡಬಹುದು’ ಎಂದು ತೋಟಗಾರಿಕೆ ವಿಜ್ಞಾನಿ ಡಾ.ಮಲ್ಲಿಕಾರ್ಜುನ ನಿಂಗದಳ್ಳಿ ತಿಳಿಸುತ್ತಾರೆ.
ಯುವಕರು ತಮ್ಮನ್ನು ತಾವು ಕೃಷಿಯಲ್ಲಿ ತೋಡಗಿಸಿಕೊಂಡರೆ ವೈಜ್ಞಾನಿಕ ಪದ್ಧತಿಗಳನ್ನೂ ಅಳವಡಿಸಿ ಕೊಂಡು ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸಬಹುದು ಎನ್ನುತ್ತಾರೆ ರೈತರಾದ ನಿರ್ಮಲಕಾಂತ ಪಾಟೀಲ
ಯುವ ರೈತರಿಗೆ ಕೃಷಿಯಲ್ಲಿ ತಮ್ಮನ್ನು ತಾವು ತೋಡಗಿಸಿಕೊಳ್ಳುವಂತೆ ಗೋರಖನಾಥ್ ಸ್ಪೂರ್ತಿದಾಯಕರಾಗಿದ್ದಾರೆ. ಸತತ ಪ್ರಯತ್ನದಿಂದ ಯಶಸ್ಸು ಪಡೆಯಬಹುದು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಗ್ರಾಮದ ಯುವ ರೈತ ರಾಜಶೇಖರ ತಿಳಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.