ಗುಂಡು ಅತಿವಾಳ
ಹುಮನಾಬಾದ್: ಮುಂಗಾರು ವಿಳಂಬವಾಗಿದ್ದರಿಂದ ರೈತರು ಎರಡೆರೆಡು ಬಾರಿ ಬಿತ್ತಿನೆ ಮಾಡಿದ್ದಾರೆ. ನೀರಾವರಿ ಹೊಂದಿರುವ ರೈತರು ನೀರುಣಿಸಿ ಬೆಳಸಿದ ಸೋಯಾ, ಹೆಸರು, ಉದ್ದು ಸಹ ಕಾಡು ಪ್ರಾಣಿಗಳ ಹಾವಳಿಯಿಂದ ಹಾಳಾಗುತ್ತಿವೆ.
ಹುಮನಾಬಾದ್ ಅರಣ್ಯ ವಲಯದ ಗ್ರಾಮಗಳಾದ ದುಬಲಗುಂಡಿ , ಹಳ್ಳಿಖೇಡ್ (ಬಿ), ಕಬೀರಾಬಾದ್, ಜಲಸಂಗಿ, ಹಣಕುಣಿ , ಇಟಗಾ, ಕುಮಾರ್ ಚಿಂಚೋಳಿ, ಹಂದಿಕೇರಾ, ನಂದಗಾಂವ, ಮದರಗಾಂವ. ಚಿಟಗುಪ್ಪ ತಾಲ್ಲೂಕಿನ ನಿರ್ಣಾ, ಮುತ್ತಂಗಿ, ವಿಠಲಪುರ್, ಬೇಮಳಖೇಡಾ, ಚಾಂಗಲೇರಾ, ಕುಡಂಬಲ್ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ರಾತ್ರಿವಿಡೀ ಪ್ರಾಣದ ಹಂಗು ತೊರೆದು ಹೊಲಗಳ ಸುತ್ತ ಪಹರೆ ಕಾಯುವಂತಾಗಿದೆ.
‘ಮಳೆಯೂ ಸಮಯಕ್ಕೆ ಸರಿಯಗಿ ಸುರಿಯುತ್ತಿಲ್ಲ. ಅಲ್ಲಲ್ಲಿ ಹೆಸರು ಮತ್ತು ಉದ್ದಿಗೆ ಹುಳು ಭಾದೆ ಕಾಡುತ್ತಿದೆ. ಕಾಡು ಪ್ರಾಣಿಗಳ ಹಾವಳಿ ಯಿಂದ ಒಂದು ಎಕರೆ ಹೆಸರು ಹಾಳಾಗಿದ್ದು ಸಂಕಷ್ಟಕ್ಕೆ ಸಿಲುಕಿದ್ದೇನೆ’ ಎಂದು ರೈತ ಗುಂಡಪ್ಪ ಶಿವಕುಮಾರ್ ಅಳಲು ತೋಡಿಕೊಂಡರು.
‘ಸಾಲ ಮಾಡಿ ಬೆಳೆಯುವ ಬೆಳೆ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಅರಣ್ಯ ಇಲಾಖೆಯವರು ಅರಣ್ಯದ ಸುತ್ತ ಭದ್ರವಾದ ತಂತಿ ಬೇಲಿ ಹಾಕಿ ಕಾಡು ಪ್ರಾಣಿಗಳನ್ನು ಹೊಲ ಗದ್ದೆಗಳಲ್ಲಿ ಬರದಂತೆ ತಡೆಯಬೇಕು. ಕಾಡು ಪ್ರಾಣಿ ಹಾವಳಿಯಿಂದ ಕಳೆದ ವರ್ಷ ರೈತರು ಬೆಳದಿದ್ದ ಬೆಳೆ ಹಾನಿಯಾಗಿತ್ತು. ಅರಣ್ಯ ಇಲಾಖೆ ಪರಿಹಾರ ನೀಡುವುದಾಗಿ ಹೇಳಿ ಕೆಲವು ರೈತರಿಗೆ ವರ್ಷ ಪರಿಹಾರ ಬಂದಿದೆ’ ಎಂದು ರೈತ ಸತೀಶ್ ದೂರಿದ್ದಾರೆ.
‘ಒಂದು ಎಕರೆ ಹೊಲ ಹಸನು ಮಾಡಿ, ಬೀಜ ಗೊಬ್ಬರ ಖರೀದಿಸಿ ಬಿತ್ತನೆ ಮಾಡಬೇಕಾದರೆ ₹25 ಸಾವಿರ ದಿಂದ ₹30 ಸಾವಿರ ಬೇಕಾಗುತ್ತದೆ. ಅರಣ್ಯ ಇಲಾಖೆ ನೀಡುವ ಪರಿಹಾರ ಕೇವಲ ₹2 ಸಾವಿರದಿಂದ ₹3 ಸಾವಿರ ಮಾತ್ರ. ಹೀಗಾದರೆ ರೈತರು ಜೀವನ ಸಾಗಿಸುವುದು ಹೇಗೆ? ಇದರ ಬಗ್ಗೆ ಸರ್ಕಾರ, ಜನ ಪ್ರತಿನಿಧಿಗಳು ಕ್ರಮ ಕೈಗೊಂಡು ಸೂಕ್ತ ಪರಿಹಾರ ನೀಡ ಬೇಕು’ ಎಂದು ಕರ್ನಾ ಟಕ ರಾಜ್ಯ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಕರಬಸಪ್ಪ ಹುಡಗಿ ಆಗ್ರಹಿಸಿದರು.
ಅರಣ್ಯ ಇಲಾಖೆ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕು. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡು ಹಂದಿಗಳ ಹಾವಳಿಯಿಂದ ಅನೇಕ ಕಬ್ಬು ಬೆಳೆ ಹಾಳಾಗಿದೆ. ಸರ್ಕಾರ ಹಾಳಾದ ಬೆಳೆಗೆ ತಕ್ಷಣ ಪರಿಹಾರ ನೀಡಬೇಕುಮಲ್ಲಿಕಾರ್ಜುನ ರೈತ
ಕಾಡು ಪ್ರಾಣಿಗಳಿಂದ ಬೆಳೆ ಹಾಳಾದ ರೈತರ ಬೆಳೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಪರಿಶೀಲನೆ ಮಾಡಿ ಪರಿಹಾರ ನೀಡಲಾಗುವುದು. ಬೆಳೆ ರಕ್ಷಣೆಗೆ ತಂತಿ ಬೇಲಿ ಹಾಕುವುದಕ್ಕೆ ಅವಕಾಶ ಇದೆಶಿವಕುಮಾರ ರಾಠೋಡ ವಲಯ ಅರಣ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.